![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
ಹೊಸನಗರ ಸರ್ಕಾರಿ ಮಾದರಿ ಶಾಲೆಯ ಶತಮಾನೋತ್ಸವ ಸಂಭ್ರಮ
ದಾಖಲೆಯ 430 ವಿದ್ಯಾರ್ಥಿಗಳ ಕಲಿಕೆ, ಖಾಸಗಿ ಶಾಲೆಯನ್ನು ಮೀರಿಸುವ ಉತ್ತಮ ವ್ಯವಸ್ಥೆ
ಹೊಸನಗರ: ಸರ್ಕಾರಿ ಶಾಲೆಗಳು ಎಂದರೆ ವಿದ್ಯಾರ್ಥಿಗಳು ಬರೋದಿಲ್ಲ ಎಂಬ ಮಾತಿದೆ. ಆದರೆ ಇಲ್ಲೊಂದು ಅಪವಾದ ಎಂಬಂತೆ ದಾಖಲೆಯ 430 ವಿದ್ಯಾರ್ಥಿಗಳನ್ನು ಹೊಂದಿದೆ. ವಿಶೇಷ ವೆಂದರೆ ಈ ಶಾಲೆ ಈಗ ಶತಮಾನೋತ್ಸವ ಸಂಭ್ರಮದಲ್ಲಿದೆ.
ಹೌದು ಖಾಸಗಿ ಶಾಲೆಗಳ ಆರ್ಭಟದ ನಡುವೆಯೂ ಸರ್ಕಾರಿ ಶಾಲೆಯ ಮಹತ್ವ ಸಾರುತ್ತ ಅಭಿವೃದ್ಧಿಯ ಪಥದಲ್ಲಿರುವ ಈ ಶಾಲೆಯೇ ಹೊಸನಗರದ ಹೃದಯಭಾಗದಲ್ಲಿರುವ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
![](https://goodmorningkarnataka.com/wp-content/uploads/2022/11/IMG-20221121-WA0002.jpg)
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-3.jpg)
ಈ ಶಾಲೆಯ ವಿಶೇಷತೆ:
ದಾಖಲೆಯ 430 ವಿದ್ಯಾರ್ಥಿಗಳ ಕಲಿಕೆ. ಕನ್ನಡ ಮತ್ತು ಇಂಗ್ಲೀಷ್ ಮೀಡಿಯಂ ಬೋಧನೆ. ಪ್ರತಿ 30 ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗ. ಶಿಶು ಸ್ನೇಹಿ ಪೀಠೋಪಕರಣಗಳ ವ್ಯವಸ್ಥೆ. ಅನುಭವಿ ವಿಷಯವಾರು ತರಭೇತಿ ಹೊಂದಿದ ಬೋಧಕ ವೃಂದ, ಪ್ರತಿ ಕೊಠಡಿಯಲ್ಲಿ ಇಂಟರ್ ನೆಟ್ ಮತ್ತು ಟಿವಿ ಅಳವಡಿಕೆ, ಆಂಗ್ಲ ಮಾಧ್ಯಮದಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಶಿಕ್ಷಣ. ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ, ಪ್ರತಿ ವಿದ್ಯಾರ್ಥಿಗೆ ನಾಯಕತ್ವ ತರಭೇತಿ. ಉಚಿತ ನವೋದಯ ತರಭೇತಿ. 7ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಈ ಶಾಲೆ ಸಾಕಾರಗೊಳಿಸಿದೆ.
ಶಾಲಾ ವಾಹನ ಹೊಂದಿರುವ ಏಕೈಕ ಶಾಲೆ:
ಶಾಲಾ ವಾಹನಗಳೆಂದರೆ ಖಾಸಗಿ ಶಾಲೆಗೆ ಸೀಮಿತ ಎಂಬಂತಿದೆ. ಆದರೆ ಈ ಮಾದರಿ ಶಾಲೆ ಅದರಲ್ಲಿ ಹಿಂದೆ ಬಿದ್ದಿಲ್ಲ. ದೂರದ ಹಳ್ಳಿಗಳಿಂದ ಬರುವ ಮಕ್ಕಳಿಗೆ ಸುಗಮವಾಗುವಂತೆ ಶಾಲಾ ವಾಹನದ ವ್ಯವಸ್ಥೆಯನ್ನು ಕಲ್ಪಿಸಿ, ಈ ವ್ಯವಸ್ಥೆ ಹೊಂದಿರುವ ಏಕೈಕ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂದಿನಿಂದ ಶತಮಾನೋತ್ಸವ ಸಂಭ್ರಮ:
ಸರ್ಕಾರಿ ಮಾದರಿ ಶಾಲೆ ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಫೆ.25 ಮತ್ತು 26 ಎರಡು ದಿನಗಳ ಕಾಲ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಣ ಇಲಾಖೆ ಮುಂದಾಗಿದೆ. ಇಂದು ಮತ್ತು ನಾಳೆ ಕಾರ್ಯಕ್ರಮ ನಡೆಯುತ್ತಿದ್ದು ಸಿದ್ದತೆ ಪೂರ್ಣಗೊಂಡಿದೆ.
ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರ, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುವರು.
ಕಾರ್ಯಕ್ರಮದ ವಿಶೇಷವಾಗಿ ಮಕ್ಕಳ ಸಂತೆ, ಮಾತೃ ಭೋಜನ, ಮಿತ್ರ ಭೋಜನ, ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ.
ಪೋಷಕರ ಸಹಕಾರ ಕಾರಣ:
ಶಾಲಾಭಿವೃದ್ಧಿ ಸಮಿತಿ, ಶಿಕ್ಷಣ ಇಲಾಖೆ, ಪೋಷಕರ ಸಹಕಾರದಿಂದ ಸರ್ಕಾರಿ ಮಾದರಿ ಶಾಲೆಯನ್ನು ಹೆಸರಿಗೆ ತಕ್ಕಂತೆ ಮಾದರಿಯಾಗಿ ರೂಪಿಸಲಾಗಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸಿದಲ್ಲಿ ಸರ್ಕಾರಿ ಶಾಲೆ ಮಹತ್ವ ಏನು ಎಂಬುದಕ್ಕೆ ಈ ಶಾಲೆ ಸಾಕ್ಷಿಯಾಗಿದೆ.
ಅಶ್ವಿನಿಕುಮಾರ್, ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-4.jpg)