
ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಈ ಬಾರಿ ಗುಮ್ಮಟನಗರಿ ವಿಜಯಪುರದಲ್ಲಿ ನಡೆಯಲಿದ್ದು, ಸಮ್ಮೇಳನದ ಲಾಂಛನವನ್ನು ಸೆ.30 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅನಾವರಣ ಮಾಡಲಿದ್ದಾರೆ.
ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪದಾಧಿಕಾರಿಗಳು, ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಚೂರಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ.


ವಿಜಯಪುರ ಜಿಲ್ಲೆಯಾಗಿ ರೂಪುಗೊಂಡ ಮೇಲೆ ಇದೇ ಪ್ರಪ್ರಥಮ ಬಾರಿಗೆ ರಾಜ್ಯ ಪತ್ರಕರ್ತರ ಸಮ್ಮೇಳನ ಆಯೋಜಿಸಲಾಗುತ್ತಿದೆ.
ಕಳೆದ ಬಾರಿ ಕಲಬುರಗಿಯಲ್ಲಿ ರಾಜ್ಯ ಸಮ್ಮೇಳನ ನಡೆದ ಬಳಿಕ ಮತ್ತೊಂದು ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಅದೂ, ಗಡಿ ಜಿಲ್ಲೆಯಲ್ಲಿ ಕೆಯುಡಬ್ಲ್ಯೂಜೆ ರಾಜ್ಯ ಸಮ್ಮೇಳನ ಆಯೋಜಿಸಿರುವುದು ವಿಶೇಷ.
ಆಲಮಟ್ಟಿ ಜಲಾಶಯ ಹೊಂದಿರುವ, ದ್ರಾಕ್ಷಿ ಬೀಡಾಗಿರುವ, ಗೋಳಗುಮ್ಮಟ ಖ್ಯಾತಿಯ ವಿಜಯಪುರ ನೆಲದ ಸೊಗಡನ್ನು ಒಳಗೊಂಡಂತೆ ರಾಜ್ಯ ಪತ್ರಕರ್ತರ ಸಮ್ಮೇಳನ ಲಾಂಛನವನ್ನು ಚಿತ್ರಕಲಾವಿದ ಮಂಜುನಾಥ ಮಾನೆ ಅವರು ರೂಪಿಸಿಕೊಟ್ಟಿದ್ದಾರೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಸಾರಥ್ಯ ವಹಿಸಿಕೊಂಡ ಮೇಲೆ ಪ್ರತಿ ಸಮ್ಮೇಳನದಲ್ಲಿ ಆತಿಥ್ಯ ವಹಿಸಿಕೊಂಡ ಜಿಲ್ಲೆಯ ಸೊಗಡಿನ ಲಾಂಛನವನ್ನು ರೂಪಿಸುವ ಪರಿಪಾಠ ಪ್ರಾರಂಭವಾಗಿದೆ.
ನವೆಂಬರ್ ಅಂತ್ಯದಲ್ಲಿ ಸಮ್ಮೇಳನ ನಡೆಸಲು ಉದ್ದೇಶಿಸಿದ್ದು ಸಮ್ಮೇಳನಕ್ಕೆ ಬಿರುಸಿನ ಸಿದ್ಧತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಅವರು ತಿಳಿಸಿದ್ದಾರೆ.
