
ಹೊಸನಗರ: ಮನೆಯಿಂದ ಅಂಗಡಿಗೆ ಬೈಕ್‌ನಲ್ಲಿ ಅಂಗಡಿಗೆ ಬರುವ ವೇಳೆ ಕಾಡುಕೋಣ ಗುದ್ದಿದ ಕಾರಣ ವ್ಯಕ್ತಿಯೋರ್ವ ಕೈಮುರಿದು ಗಾಯಗೊಂಡ ಘಟನೆ ಸಂಪೇಕಟ್ಟೆ ಸಮೀಪ ಗುರುವಾರ ರಾತ್ರಿ ನಡೆದಿದೆ.
ಕೃಪಾನಂದ ದೇವರ ಭಟ್ ಕೈಮುರಿತಕ್ಕೆ ಒಳಗಾದ ವ್ಯಕ್ತಿ.


ಕಟ್ಟಿನಹೊಳೆ ಸಿಂಚನೂರು ನಿವಾಸಿಯಾದ ಕೃಪಾನಂದ ಸಂಪೇಕಟ್ಟೆಗೆ ಬೈಕ್ ನಲ್ಲಿ ಬರುವಾಗ ಚಕ್ರಾ ಚಾನಲ್ ಬಳಿ ಕಾಡುಕೋಣ ನುಗ್ಗಿದೆ. ಬೈಕ್ ಗೆ ಗುದ್ದಿದ ಪರಿಣಾಮ ಪಲ್ಟಿ ಹೊಡೆದಿದೆ. ಅಷ್ಟಕ್ಕೆ ಸುಮ್ಮನಾಗದ ಕಾಡುಕೋಣ ಆತನನ್ನು ಚರಂಡಿಗೆ ದೂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ವೇಳೆ ಕೈಮುರಿತಕ್ಕೆ ಒಳಗಾದ ಕೃಪಾನಂದನ ಸ್ಥಳೀಯ ಆಸ್ಪತ್ರೆಯ ವೈದ್ಯ ಡಾ.ಪ್ರಕಾಶ್ ಹತ್ವಾರ್ ಬಳಿ ಚಿಕಿತ್ಸೆ ಪಡೆದಿದ್ದು ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಹೋಗುವಂತೆ ಸಲಹೆ ನೀಡಿದ್ದಾರೆ.
ಕೃಪಾನಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು ಘಟನೆ ಸ್ಥಳೀಯರಿಗೆ ಆತಂಕ ತರಿಸಿದೆ. ಮಂಗಳವಾರಷ್ಟೆ ಕಾಡುಕೋಣಗಳ ಹಾವಳಿ ಬಗ್ಗೆ ಸ್ಥಳೀಯರು ನಗರ ಅರಣ್ಯ ಕಚೇರಿ ಎದುರು ಪ್ರತಿಭಟಿಸಿದ್ದರು.
