
- ಹೊಸನಗರ: ನಗರದ ಇತಿಹಾಸ ಪ್ರಸಿದ್ಧ ಹಜರತ್ ಶೇಖುಲ್ ಅಕ್ಬರ್ ಅನ್ವರ್ ಮಾಅಷುಂಶಾ ವಲಿಯುಲ್ಲಾ ದರ್ಗಾದ ನೂತನ ಸಮಿತಿ ಆಯ್ಕೆ ಗೊಂದಲ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.
ವಕ್ಫ್ ಬೋರ್ಡ್ ವ್ಯಾಪ್ತಿಗೆ ಒಳಪಟ್ಟ ನಗರ ದರ್ಗಾದ ಸಮಿತಿ ನೂತನ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸದಸ್ಯರ ಆಯ್ಕೆಯಲ್ಲಿ ಬೈಲಾ ನಿಯಮ ಉಲ್ಲಂಘಿಸಲಾಗಿದೆ. ನಗರ ಜಮಾತ್ ವ್ಯಾಪ್ತಿಯಲ್ಲೇ ಸಮಿತಿ ರಚಿಸಿ ಬೈಲಾ ನಿಯಮದಂತೆ ಮೂಡುಗೊಪ್ಪ ಗ್ರಾಮದ ಬಾಂಧವರಿಗಷ್ಟೆ ಅವಕಾಶ ಮಾಡಬೇಕಿತ್ತು ಆದರೆ ಸದಸ್ಯರ ನೋಂದಣಿ ಮತ್ತು ಸಮಿತಿ ಆಯ್ಕೆಯಲ್ಲಿ ನಗರ ಜಮಾತ್ ಬಾಂಧವರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ದೂರು : ಸಂಧಾನ
ನಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ನಗರ ಜಮಾತ್ ವತಿಯಿಂದ ಶಿವಮೊಗ್ಗ ಜಿಲ್ಲಾ ವಕ್ಫ್ ಬೋರ್ಡ್ ಗೆ ದೂರು ಸಲ್ಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಭಾನುವಾರ ನಗರ ದರ್ಗಾಕ್ಕೆ ಭೇಟಿ ನೀಡಿದ ಜಿಲ್ಲಾ ವಕ್ಫ್ ಬೋರ್ಡ್ ಮುಖ್ಯಾಧಿಕಾರಿ ಮೇತಾಬ್, ಜಮಾತ್ ಬಾಂಧವರ ಅಹವಾಲು ಆಲಿಸಿದರು.


ನಗರದವರನ್ನು ಸೇರಿಸಿಕೊಂಡು ಸಮಿತಿಯನ್ನು ಮುಂದುವರಿಸುವ ಸಲುವಾಗಿ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.
ಆದರೆ ಇದಕ್ಕೆ ಒಪ್ಪದ ನಗರ ಜಮಾತ್ ಬಾಂಧವರು, ಬೈಲಾ ನಿಯಮದಂತೆ ಸಮಿತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನಮಗೆ ಆಧ್ಯತೆ ನೀಡಬೇಕು ಪಟ್ಟು ಹಿಡಿದರು.
ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಈ ಸಂಬಂಧ ಜಿಲ್ಲಾ ವಕ್ಫ್ ಬೋರ್ಡ್ ಗಮನಕ್ಕೆ ತರುವ ಭರವಸೆ ನೀಡಿದರು.
ಸಮಿತಿಗೆ ನಗರದ ಮೂವರಿಗೆ ಆಧ್ಯತೆ ನೀಡುವ ವಿಚಾರದಲ್ಲಿ ಪೂರ್ಣ ಜಮಾತ್ ಸಭೆ ಕರೆದು ತೀರ್ಮಾನಿಸಿ ವಕ್ಫ್ ಬೋರ್ಡ್ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಅಮೀರ್ ಹಂಜಾ, ಗುರುಗಳಾದ ಅಶ್ರಫ್ ಮದನಿ, ಖಾದರ್ ನಿಟ್ಟೂರು, ನಗರ ಜುಮ್ಮ ಮಸೀದಿ ವಕ್ಫ್ ಬೋರ್ಡ್ ಅಧ್ಯಕ್ಷ ದಾವೂದ್ ಸಾಬ್, ಜಮಾತ್ ಅಧ್ಯಕ್ಷ ಹಿದಾಯತ್, ಅಬ್ಬಾಸ್ ನೂಲಿಗ್ಗೇರಿ, ಸಾಬಜನ್ ಸಾಬ್, ಅಯೂಬ್ ಸಾಬ್, ಮಹಮದ್ ರಫಿ, ಸಾಧಿಕ್, ಅಬುಬಕರ್, ಸಿದ್ದಿಕ್, ಫಾರೂಕ್, ಆಟೋ ಬಶೀರ್, ಆಟೋ ಅನಿಷ್, ಆಟೋ ಆಸಿಫ್, ಶಹರಾಜ್, ಹಂಜಾ ನೂಲಿಗ್ಗೇರಿ ಇತರರು ಉಪಸ್ಥಿತರಿದ್ದರು.
ಸನ್ಮಾನ: ಈ ವೇಳೆ ನಗರ ಜಮಾತ್ ವತಿಯಿಂದ ಶಿವಮೊಗ್ಗ ಜಿಲ್ಲಾ ವಕ್ಫ್ ಬೋರ್ಡ್ ಮುಖ್ಯಾಧಿಕಾರಿ ಮೇತಾಬ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.
