
SHIVAMOGGA| ಕಾನೂನು-ಸುವ್ಯವಸ್ಥೆ ಕಾಪಾಡಲು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು : ಅಬ್ದುಲ್ ಅಜೀಮ್ | ಸೌಹಾರ್ದತೆಗಾಗಿ ಅವರು ನೀಡಿದ ಸಲಹೆಗಳೇನು?
ಶಿವಮೊಗ್ಗ, ಅಕ್ಟೋಬರ್ 17:
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ಅಧಿಕಾರಿಗಳು ದಿಟ್ಟ ಮತ್ತು ಕಠಿಣವಾದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ರವರು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿನ ಕೋಮು ಸೌಹಾರ್ದತೆ ಕುರಿತು ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಮಯದಲ್ಲಿ ಉಂಟಾದ ಕಲ್ಲು ತೂರಾಟ ಪ್ರಕರಣ ನಿಜಕ್ಕೂ ಒಂದು ಕೆಟ್ಟ ಘಟನೆ. ಘಟನೆ ಆದಾಗಿನಿಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಸಂಪರ್ಕದಲ್ಲಿ ಇದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿದ್ದೇನೆ.
ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿರುವುದು ಉತ್ತಮ ಕಾರ್ಯ. ಈ ಘಟನೆಗೆ ಸಂಬಂಧಿಸಿದಂತೆ 50 ರಿಂದ 60 ಜನರನ್ನು ಬಂಧಿಸಿ, 32 ಪ್ರಕರಣಗಳನ್ನು ದಾಖಲಿಸಿ ಕ್ರಮ ವಹಿಸಲಾಗಿದೆ.
ಆದರೆ ಈ ರೀತಿಯ ಘಟನೆಗಳು ಸಂಭವಿಸದಂತೆ ಅಧಿಕಾರಿಗಳು ದಿಟ್ಟ ನಿಲುವುಗಳನ್ನು ತಳೆಯಬೇಕು. ಧಾರ್ಮಿಕ ಮೆರವಣಿಗೆ ವೇಳೆ ಬಹಳ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿ ಅನುಮತಿಯನ್ನು ನೀಡಬೇಕು.
ಅಂತಹ ಮೆರವಣಿಗೆ/ಕಾರ್ಯಕ್ರಮಗಳಿಂದ ಕಾನೂನು,ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಗುವುದು ಎಂದು ಕಂಡು ಬಂದರೆ ಅನುಮತಿಯನ್ನು ನೀಡಲೇಬಾರದು.
ಪ್ರಚೋದನಾಕಾರಿ ಕಟ್‍ಔಟುಗಳು, ಬ್ಯಾನರ್‍ಗಳು, ಫ್ಲೆಕ್ಸ್‍ಗಳನ್ನು ಹಾಕುವುದಕ್ಕೆ ಅವಕಾಶ ನೀಡಬಾರದು. ಹಾಕಲೇಬೇಕಾದರೆ ಒಬ್ಬ ದಕ್ಷ ಅಧಿಕಾರಿಯನ್ನು ಅದಕ್ಕಾಗಿ ನೇಮಿಸಿ ಆತ ಎಲ್ಲ ಬ್ಯಾನರ್, ಕಟ್‍ಔಟ್‍ನ್ನು ಪರಿಶೀಲಿಸಿ ಯಾವುದೇ ರೀತಿಯ ಪ್ರಚೋದನಕಾರಿ ಅಂಶಗಳಿಲ್ಲ, ತೊಂದರೆ ಇಲ್ಲವೆಂದು ವರದಿ ನೀಡಿದ ನಂತರವೇ ಅನುಮತಿಯನ್ನು ನೀಡಬೇಕು.
ಜಿಲ್ಲೆಯಲ್ಲಿ ಕೋಮು ಸೂಕ್ಷ್ಮತೆಯುಳ್ಳ ಪ್ರದೇಶಗಳನ್ನು ಗುರುತಿಸಿ ಅಲ್ಲಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಮಿತಿಗಳನ್ನು ರಚಿಸಿ, ಸೌಹಾರ್ದತೆ, ಶಾಂತಿ ತರಲು ಪ್ರಯತ್ನಿಸಬೇಕು. ಶಾಂತಿ ಸಭೆಗಳನ್ನು ಕೇವಲ ಠಾಣಾ ವ್ಯಾಪ್ತಿಯಲ್ಲಿ ಮಾಡಿದರೆ ಸಾಲದು. ಸೂಕ್ಷ್ಮವಾದ ಮೊಹಲ್ಲಗಳನ್ನು, ಸಮುದಾಯಗಳನ್ನು ಗುರುತಿಸಿ, ಸಮಿತಿಗಳನ್ನು ರಚಿಸಿ ಜವಾಬ್ದಾರಿ ನೀಡಬೇಕು.
ಸೂಕ್ಷ್ಮ ಪ್ರದೇಶಗಳಿಗೆ ದಕ್ಷ ಅಧಿಕಾರಿಗಳನ್ನು ನೇಮಿಸಬೇಕು. ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಂದರ್ಭ ಎದುರಾಗಬಹುದೆಂದು ಕಂಡು ಬಂದಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಕಠಿಣ ನಿಲುವುಗಳನ್ನು ಕೈಗೊಂಡು ಶಾಂತಿಯನ್ನು ಸ್ಥಾಪಿಸಬೇಕೆಂದರು. ಹಾಗೂ ಸಾಮರಸ್ಯ ಸಾಧಿಸಲು, ಜನರ ವಿಶ್ವಾಸ ಗಳಿಸಲು ಅಧಿಕಾರಿಗಳು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಗಿಗುಡ್ಡ ಘಟನೆ ಕುರಿತು ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಇನ್ನೂ ಅಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಮುಂದೆ ಈ ರೀತಿಯ ಯಾವುದೇ ಅಹಿತಕರ ಘಟನೆಗಳು ಸಂಭವಿಸುವುದಿಲ್ಲವೆಂಬ ವಿಶ್ವಾಸವಿದೆ ಎಂದ ಅವರು ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಸಲ್ಮಾ ಫಿರ್ದೋಜ್, ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಪ್ರೀತಿ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಆರಕ್ಷಕರು, ಇತರರು ಹಾಜರಿದ್ದರು.
