
-
ಜೆಡಿಎಸ್ ತೊರೆದು ಕೈ ಹಿಡಿದ ಎಂ.ಶ್ರೀಕಾಂತ್ ಗೆ ಅದ್ದೂರಿ ಸ್ವಾಗತ
-
ಶಿವಮೊಗ್ಗ ಕಾಂಗ್ರೆಸ್ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕೃತ ಸದಸ್ಯತ್ವ ಪಡೆದ ಶ್ರೀಕಾಂತ್ ಮತ್ತು ಬೆಂಬಲಿಗರು
-
ಶ್ರೀಕಾಂತ್ ಗೆ ಸ್ವಾಗತ ಕೋರಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
-
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ | ಜೆಡಿಎಸ್ ನಲ್ಲಿ ನೀರವ ಮೌನ
ಶಿವಮೊಗ್ಗ | ಜೆಡಿಎಸ್ ತೊರೆದ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಎಂ.ಶ್ರೀಕಾಂತ್ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಅಧ್ಯಕ್ಷ ಎಚ್.ಎಸ್.ಸುಂದರೇಶರಿಂದ ಅಧಿಕೃತ ಸದಸ್ಯತ್ವ ಪಡೆದುಕೊಂಡರು. ಪಾಲಿಕೆ ಸದಸ್ಯ ನಾಗರಾಜ ಕಂಕಾರಿ, ಮಾಜಿ ಸದಸ್ಯ ಪಾಲಾಕ್ಷಿ ಸೇರಿದಂತೆ ಶ್ರೀಕಾಂತ್ ಬೆಂಬಲಿಗರು ಸದಸ್ಯತ್ವ ಪಡೆದುಕೊಂಡರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥಗೌಡ, ಕೆ.ಕೆ.ಮಂಜುನಾಥ್, ಆರ್.ಪ್ರಸನ್ನಕುಮಾರ್ ಶ್ರೀಕಾಂತ ಸೇರ್ಪಡೆಯನ್ನು ಸ್ವಾಗತಿಸಿದರು.
-
ಶ್ರೀಕಾಂತ್ ಅಂದು..ಇಂದು.. ಮುಂದೆ..!?
ಅವಿಭಜಿತ ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಜನತಾ ಪರಿವಾರದ ಸಂಘಟನೆಯಲ್ಲಿ ಸಾಕಷ್ಟು ಹೆಸರು ಕೇಳಿ ಬರುತ್ತದೆ. ಆದರೆ ವಿಭಜಿತ ಶಿವಮೊಗ್ಗ ಜಿಲ್ಲೆಯ ನಂತರ ಜೆಡಿಎಸ್‌ನ ಶಕ್ತಿ ಮತ್ತು ಅಸ್ತಿತ್ವ ಎರಡೂ ಆಗಿದ್ದವರು ಎಂ.ಶ್ರೀಕಾಂತ್. ಶ್ರೀಕಾಂತ್ ಇಂದಿನವರೆಗೆ ಹೇಳಿಕೊಳ್ಳುವಂತ ಯಾವುದೇ ಅಧಿಕಾರ ಅನುಭವಿಸಿಲ್ಲ. ಆದರೆ ಜಿಲ್ಲೆಯಲ್ಲಿ ಅವರ ಹೆಸರು ಚಿರಪರಿಚಿತ ಎಂದರೆ ಅವರ ಸಹಕಾರ ಮನೋಭಾವ ಜೊತೆಗೆ ಸೈದ್ದಾಂತಿಕ ಬದ್ಧತೆಯ ರಾಜಕಾರಣ. ಜೆಡಿಎಸ್ ವರೀಷ್ಠ ಹೆಚ್.ಡಿ.ದೇವೆಗೌಡರ ಅಪ್ಪಟ ಅನುಯಾಯಿ ಇಂದು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಇದು ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದರೂ ಅಚ್ಚರಿಯಿಲ್ಲ.
ಈ ಹಿಂದೆ ಕಾಂಗ್ರೆಸ್ ಪಕ್ಷ ಸೇರಿರುವ ಎಂ.ಶ್ರೀಕಾಂತ್ ಮತ್ತು ಬೆಂಬಲಿಗರು ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಅದ್ದೂರಿ ಎಂಟ್ರಿ ಕೊಟ್ಟಿದ್ದಾರೆ. ಉಸ್ತುವಾರಿ ಸಚಿವರು ಸೇರಿದಂತೆ ಕಾಂಗ್ರೆಸ್ ನಾಯಕರು ಅಷ್ಟೇ ಅದ್ದೂರಿ ಸ್ವಾಗತವನ್ನು ಕೋರಿದ್ದಾರೆ. ಇದು ಜೆಡಿಎಸ್‌ಗೆ ಎಷ್ಟು ನಷ್ಟ.. ಕಾಂಗ್ರೆಸ್‌ಗೆ ಆಗೋ ಲಾಭ ಎಷ್ಟು ಎಂಬ ಚರ್ಚೆಗೆ ಇಂಬು ನೀಡಿದೆ.


ಗೌಡರ ಅನುಯಾಯಿ.. ಸುಧೀರ್ಘ ರಾಜಕಾರಣ:
ಶಿವಮೊಗ್ಗ ಜಿಲ್ಲೆಯ ಜೆಡಿಎಸ್ ಎಂದರೆ ಎಂ.ಶ್ರೀಕಾಂತ್ ಎನ್ನುವಷ್ಟರ ಮಟ್ಟಿಗೆ ಪಕ್ಷವನ್ನು ಆವರಿಸಿಕೊಂಡಿದ್ದರು. ಹಾಗಂತ ಅದು ಸರ್ವಾಧಿಕಾರವಲ್ಲ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮನೋಭಾವ, ಗಟ್ಟಿತನ ಇದಕ್ಕೆ ಕಾರಣ. ಜೆಡಿಎಸ್ ಬಿಟ್ಟು ಹೊರಟಿದ್ದೇನೆ ಎನ್ನುವಾಗ ಬೇರೆಯವರು ಹೇಳುವಂತೆ ಉಸಿರುಗಟ್ಟಿಸುವ ವಾತಾವರಣ, ಪಕ್ಷದಲ್ಲಿ ಕಡಗಣನೆ, ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಮಾಮೂಲಿ ಮಾತುಗಳು ಅಲ್ಲಿರಲಿಲ್ಲ. ಬದಲಿಗೆ ಅಧಿಕಾರ ಇರಲಿ ಬಿಡಲಿ ತನ್ನ ಸುಧೀರ್ಘ ರಾಜಕೀಯ ಮತ್ತು ರಾಜಕಾರಣ ಇದಕ್ಕೆ ಕಾರಣ ದೇವೆಗೌಡರು ಮತ್ತು ಕುಮಾರಸ್ವಾಮಿ ಎಂದು ಹೇಳಿ ಕೃತಜ್ಞತೆಯನ್ನು ಸಲ್ಲಿಸಿ ಗಮನಸೆಳೆದಿದ್ದಾರೆ.
ಎಂ.ಶ್ರೀಕಾಂತ್ ಎರಡು ಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನಿಂದ ಉಮೇದುವಾರಿಕೆ ಸಲ್ಲಿಸಿದ್ದರು. ತಲಾ 19 ಮತ್ತು 20 ಸಾವಿರ ಮತಗಳನ್ನು ಪಡೆದು ಸೋಲು ಕಂಡಿದ್ದರು ಕೂಡ ಪಕ್ಷವನ್ನು ಮೂರನೇ ಶಕ್ತಿಯಾಗಿ ಹೊರಹೊಮ್ಮಿಸಿದ್ದರು. ನಂತರದ ಚುನಾವಣೆಯಲ್ಲಿ ಜೆಡಿಎಸ್ ವಿ.ನಿರಂಜನ್‌ಗೆ ಮಣೆ ಹಾಕಿತು. ಪಕ್ಷಕ್ಕಾಗಿ ನಿರಂತರ ದುಡಿದರೂ ಕಡೆಗಣನೆಯಾದ ಬಗ್ಗೆ ಪಿಸು ಮಾತನಾಡಲಿಲ್ಲ. ನಂತರ ಪಕ್ಷ ಹಿಮ್ಮುಖವಾಗಿ ಮಗ್ಗಲು ಬದಲಿಸಿದಾಗ ಮತ್ತೆ ಜೆಡಿಎಸ್ ಅಸ್ತಿತ್ವಕ್ಕೆ ಪಣ ತೊಟ್ಟವರು ಕೂಡ ಇದೇ ಶ್ರೀಕಾಂತ್.
ಬದ್ಧತೆಯೇ ಹಿನ್ನಡೆಯಾಯ್ತೆ?
ಶ್ರೀಕಾಂತ್ ರಾಜಕಾರಣ ಕಂಡವರಿಗೆ ಇಂತಹದೊಂದು ಸಹಜ ಪ್ರಶ್ನೆ ಆವರಿಸುತ್ತದೆ. ಜೆಡಿಎಸ್‌ನಲ್ಲಿ ಜಿಲ್ಲಾಧ್ಯಕ್ಷರಾಗಿ, ಎರಡು ಬಾರಿ ಅಸೆಂಬ್ಲಿಗೆ ಸ್ಪರ್ಧೆ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಪಕ್ಷ ಮತ್ತು ವರೀಷ್ಠರು ಮೇಲಿಟ್ಟ ಅವರ ಬದ್ದತೆ ಇಷ್ಟಕ್ಕೆ ಸೀಮಿತ ಮಾಡಿತು ಎನ್ನಬಹುದು. ಶ್ರೀಕಾಂತ್‌ಗೆ ಕಾಂಗ್ರೆಸ್, ಬಿಜೆಪಿಯಲ್ಲೂ ಸ್ನೇಹಿತರಿದ್ದರು. ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಇಂದಿಗೂ ಇದೆ. ಹಾಗಾಗಿಯೇ ಬಿ.ಎಸ್.ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಶ್ರೀಕಾಂತ್‌ಗೂ ಆಫರ್ ಇತ್ತು. ಅಂದು ಅದನ್ನು ಒಪ್ಪಿಕೊಂಡಿದ್ದರೆ ಹೊನ್ನಾಳಿ ಕ್ಷೇತ್ರದ ಶಾಸಕರಾಗುವ ಸಾಧ್ಯತೆಯೂ ಇತ್ತು. ಇನ್ನು ಕಾಂಗ್ರೆಸ್‌ನ ಸ್ನೇಹಿತರು ಬನ್ನಿ ಎಂದು ಅದೆಷ್ಟೋ ಆಹ್ವಾನಿಸಿದ್ದರು. ಅಲ್ಲದೇ ಮಧು ಬಂಗಾರಪ್ಪ ಸೇರುವಾಗ ಕೂಡ ಅಂತಹ ವಾತಾವರಣ ನಿರ್ಮಾಣವಾಗಿತ್ತು. ಆದರೆ ಪಕ್ಷ, ಪಕ್ಷದ ಮೇಲಿಟ್ಟ ಬದ್ದತೆ ಮತ್ತು ತನ್ನ ಬೆಂಬಲಿಗರ ಭವಿಷ್ಯ ಎಲ್ಲವನ್ನು ಪರಿಗಣಿಸಿ ತನ್ನ ಹೆಜ್ಜೆಯನ್ನು ಸಡಿಲಿಸಿರಲಿಲ್ಲ. ಒಂದು ವೇಳೆ ತನ್ನದಾದರೆ ಆಯ್ತು ಎಂಬ ನಿಲುವಿಗೆ ಬಂದಿದ್ದರೆ ಶ್ರೀಕಾಂತ್‌ಗೆ ಅಧಿಕಾರ ಹಿಡಿಯುವುದು ಅಷ್ಟೇನು ಕಷ್ಟಸಾಧ್ಯವಾಗಿರಲಿಲ್ಲ.
ಕಾಂಗ್ರೆಸ್‌ಗೆ ಬಿಟ್ಟದ್ದು:
ಇದೀಗ ಎಂ.ಶ್ರೀಕಾಂತ್ ನಿಲುವು ಬದಲಿಸಿ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಅದರಲ್ಲೂ ಶಿವಮೊಗ್ಗ ನಗರದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿದ ಪರಿ ಮತ್ತು ತನ್ನದೇ ಆದ ಓಟ್ ಬ್ಯಾಂಕ್‌ನ್ನು ಸೃಷ್ಟಿ ಮಾಡಿದ ರೀತಿ, ತಮ್ಮ ಬೆಂಬಲಿಗರಿಗೆ ಪಾಲಿಕೆಯಲ್ಲಿ ಅಧಿಕಾರ ದಕ್ಕುವಂತೆ ಮಾಡಿದ್ದು ಅವರ ಸಂಘಟನಾ ಚತುರತೆ, ಬೆಂಬಲಿಗರ ಮೇಲಿನ ಕಾಳಜಿಗೆ ಸಾಕ್ಷಿ. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಮುಖರು ಏನೇ ವಾದಿಸಿದರು ಕೂಡ ಬಿಜೆಪಿಯ ಸಂಭವನೀಯ ಅಭ್ಯರ್ಥಿ, ಹಾಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರನ್ನು ಕಟ್ಟಿ ಹಾಕುವುದು ಸುಲಭವಲ್ಲ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಓಟ್‌ಬ್ಯಾಂಕ್ ಜೊತೆ ತನ್ನ ಅಭಿವೃದ್ಧಿ ಮತ್ತು ವ್ಯಕ್ತಿಗತ ನಡೆಯಿಂದಾಗಿ ತನ್ನದೇ ಆದರೆ ಮತದಾರರನ್ನು ಗಟ್ಟಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ಈ ಸಂದರ್ಭದಲ್ಲಿ ಶ್ರೀಕಾಂತ್ ಸೇರ್ಪಡೆ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಶಕ್ತಿಯನ್ನು ಹೆಚ್ಚಿಸುವುದು ಸ್ಪಷ್ಟ. ಆದರೆ ಶ್ರೀಕಾಂತ್‌ರನ್ನು ಕಾಂಗ್ರೆಸ್ ಹೇಗೆ ಬಳಸಿಕೊಳ್ಳುತ್ತದೆ ಎಂಬುದರ ಮೇಲೆ ನಿಂತಿದೆ.
2013ರಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಕೆ.ಬಿ.ಪ್ರಸನ್ನಕುಮಾರ್ ಗೆದ್ದು ಶಾಸಕರಾಗಿದ್ದು ಬಿಟ್ಟರೆ ಮತ್ತೆ ಕಾಂಗ್ರೆಸ್ ಮೇಲೆದ್ದಿಲ್ಲ. ಪಕ್ಷದಲ್ಲಿನ ಗುಂಪುಗಾರಿಕೆ, ಒಳಜಗಳ ಎಲ್ಲವೂ ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಭದ್ರಾವತಿಯಲ್ಲಿ ಸಂಗಮೇಶ್ವರ ಸಹಜವಾಗಿ ಗೆದ್ದರೆ, ಸಾಗರದಲ್ಲಿ ಪಕ್ಷಕ್ಕಿಂತ ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ವಯಕ್ತಿಕ ಜಿದ್ದಾಟವೇ ಮೇಲುಗೈ ಆಗಿ ಕೊನೆಗೆ ಬೇಳೂರು ಗೋಪಾಲಕೃಷ್ಣ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಇನ್ನು ಸೊರಬದಲ್ಲಿ ಮಧು ಬಂಗಾರಪ್ಪರ ಮೇಲಿನ ಅನುಕಂಪ ಕೆಲಸ ಮಾಡಿದೆ. ಉಳಿದಂತೆ ಜಿಲ್ಲೆಯಲ್ಲಿ ಪಕ್ಷದ ಸಾಧನೆ ಹೇಳಿಕೊಳ್ಳುವಂತಿಲ್ಲ. ಜೊತೆ ಓಟ್ ಶೇರ್ ಕೂಡ ತೀರಾ ಹೆಚ್ಚಾಗಿಲ್ಲ. ಸರ್ಕಾರ ಇದೆ ಎಂದ ಮಾತ್ರಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ ಎಂಬುದು ಕೂಡ ಮೂರ್ಖತನ. ಮಾಜಿ ಸಂಸದ ಆಯನೂರು ಮಂಜುನಾಥ ನಂತರದಲ್ಲಿ ಎಂ.ಶ್ರೀಕಾಂತ್ ಪಕ್ಷ ಸೇರಿರುವುದು ಪಕ್ಷದ ಮಟ್ಟಿಗೆ ಒಂದಷ್ಟು ಆಶಾದಾಯಕ ಬೆಳವಣಿಗೆ.
ಮೊದಲೇ ಹೇಳಿದಂತೆ ಶ್ರೀಕಾಂತ್ ಅಜಾತ ಶತ್ರು. ಎಲ್ಲರನ್ನು ಸರಿದೂಗಿಸ ಬಲ್ಲ, ಜೊತೆಗೆ ಕರೆದುಕೊಂಡು ಹೋಗಬಲ್ಲ ಚಾಣಾಕ್ಷ ಜೊತೆಗೆ ತಂತ್ರಗಾರಿಕೆಯೂ ಇದೆ. ಆದರೆ ಕಾಂಗ್ರೆಸ್ ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ.
