
ಶಿವಮೊಗ್ಗ.ಜು.27: ಶಿವಮೊಗ್ಗದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ಒಂದೇ ಗಂಟೆಯಲ್ಲಿ 560 ಪ್ರಕರಣ ದಾಖಲು ಮಾಡಿ, ತಲ್ವಾರ್, ಹರಿತವಾದ ಡ್ರ್ಯಾಗರ್ ನ್ನು ವಶಪಡಿಸಿಕೊಂಡಿದ್ದಾರೆ.
ಬುಧವಾರ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ವಿಶೇಷ ಕಾರ್ಯಾಚರಣೆ ನಡೆಸಿದೆ.
ಶಿವಮೊಗ್ಗ ನಗರದಲ್ಲಿ 50 ಚೆಕ್ ಪೋಸ್ಟ್ ತೆರೆದು ಅನುಮಾನಾಸ್ಪದವಾಗಿ ಓಡಾಡುವ ವಾಹನ ಮತ್ತು ವ್ಯಕ್ತಿಗಳ ತಪಾಸಣೆ ( 30 ವರ್ಷದೊಳಗಿನ ವಯಸ್ಕರ ಮೇಲೆ) ನಡೆಸಿ, ಅಪರಾಧ ಹಿನ್ನೆಲೆ ಉಳ್ಳವರ( RS) ಮನೆಗಳ ತಪಾಸಣೆ ನಡೆಸಿ, ನಗರದ ವೈನ್ ಶಾಪ್ ಸುತ್ತ ಹಾಗೂ ನಿರ್ಜನ ಪ್ರದೇಶ ಗಳಲ್ಲಿ ಕುಡಿದು ಜನರಿಗೆ ತೊಂದರೆ ಕೊಡುವವರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.


ಕಾರ್ಯಾಚರಣೆಯಲ್ಲಿ 11 ಅಬಕಾರಿ ಪ್ರಕರಣಗಳು, 350 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು, 93 ಲಘು ಪ್ರಕರಣಗಳು, 96 ತಂಬಾಕು ಪ್ರಕರಣಗಳು , 10 ಗಾಂಜಾ ಸೇವನೆ ಮಾಡಿದ ಜನರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ1 ತಲ್ವಾರ್, 4 ಹರಿತ ವಾದ ಡ್ರ್ಯಾಗರ್ ವಶಕ್ಕೆ ಪಡೆದು ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆಯು ನಿರಂತರವಾಗಿ ನಡೆಯುತ್ತಿದ್ದು, ಇಂದು ಹೆಚ್ಚಿನ ಸಂಖ್ಯೆಯ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ ಒಂದು ಗಂಟೆಗಳ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
