
ಹೊಸನಗರ.ಆ.17: ತುಂಬು ಗರ್ಭಿಣಿಯೊಬ್ಬರ ಆರೋಗ್ಯ ಗಂಭೀರಗೊಂಡರೂ 108 ವಾಹನ ಸಿಗದೆ ಪರದಾಡಿದ ಘಟನೆ ಹೊಸನಗರ ತಾಲೂಕು ಕೇಂದ್ರ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಜಯನಗರ ಸಮೀಪ ನಿವಾಸಿಯಾದ ರೋಗಿಯೊಬ್ಬರು 8 ತಿಂಗಳ ಗರ್ಭಿಣಿಯಾಗಿದ್ದರು. ರಕ್ತದೊತ್ತಡದಲ್ಲಿ ಏರುಪೇರಾದ ಕಾರಣ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿಯ ವೈದ್ಯರು ಕೂಡ ಸಕಾಲಕ್ಕೆ ಸ್ಪಂದಿಸಿ ಚಿಕಿತ್ಸೆ ನೀಡಿದ್ದಾರೆ. ಅಲ್ಲದೇ ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ರವಾನಿಸುವಂತೆ ಶಿಫಾರಸ್ಸು ಮಾಡಿದ್ದಾರೆ.
ಆದರೆ 108 ಸಂಖ್ಯೆ ಕರೆ ಮಾಡಿದರೆ ರಿಪ್ಪನ್ಪೇಟೆ, ಹುಂಚಾ, ಇಲ್ಲ ನಗರದಿಂದ ಕಳುಹಿಸುತ್ತೇವೆ ಎಂಬ ಮಾಹಿತಿ ನೀಡಿದ್ದಾರೆ. ಆದರೆ ಒಂದುವರೆ ಗಂಟೆ ಆದರೂ ಯಾವುದೇ 108 ವಾಹನ ಬರುವುದಿರಲಿ.. ಅದರ ಸುಳಿವು ಕೂಡ ಕಂಡು ಬರಲಿಲ್ಲ. ಈ ನಡುವೆ ಗರ್ಭಿಣಿಯ ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡು ಬಂದಿದ್ದು ಅಲ್ಲಿದ್ದ ಸ್ಥಳೀಯರೇ ಹಣ ಒಟ್ಟು ಮಾಡಿ ಖಾಸಗಿ ಆಂಬುಲೆನ್ಸ್ ತರಿಸಿ ಶಿವಮೊಗ್ಗ ಮೆಗ್ಗಾನ್ ಕಳುಹಿಸಿಕೊಟ್ಟಿದ್ದು ಅಲ್ಲಿ ಗರ್ಭಿಣಿಗೆ ಚಿಕಿತ್ಸೆ ನೀಡಲಾಗುತ್ತಿದೆ.


ಹೊಸನಗರದ 108 ಎಲ್ಲಿ:
ಹೇಳಿ ಕೇಳಿ ತಾಲೂಕು ಕೇಂದ್ರ ಆಸ್ಪತ್ರೆ. ಆದರೆ ಇಲ್ಲು ಕೂಡ 108 ಸೇವೆ ಲಭ್ಯವಿಲ್ಲ. ಸಾರ್ವಜನಿಕರವಾಗಿ ಕಳೆದ ಎರಡು ಮೂರು ತಿಂಗಳಿಂದ 108 ಸೇವೆ ಸಿಗುತ್ತಿಲ್ಲ ಎಂಬ ದೂರುಗಳಿವೆ. ಆದರೆ ಅಧಿಕಾರಿಗಳು ಮಾತ್ರ ಕಳೆದ 12 ದಿನಗಳಿಂದ ಇಲ್ಲ. ದುರಸ್ಥಿ ಕಾರ್ಯಕ್ಕೆ ಕಳುಹಿಸಲಾಗಿದೆ ಎನ್ನುತ್ತಾರೆ. ಎಂದು ಸ್ಥಳೀಯರು ಆರೋಪಿಸುತ್ತಾರೆ.
ತಾಲೂಕಿನಲ್ಲಿರುವ 108 ವಾಹನಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ತುರ್ತು ಅಗತ್ಯಗಳಿಗೆ ವಾಹನಗಳು ಲಭ್ಯವಾಗದಿದ್ದರೆ ಅದರಿಂದ ಏನು ಪ್ರಯೋಜನ. ಖಾಸಗಿ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಕಾರಣ ಆಸ್ಪತ್ರೆಗೂ 108ಗೂ ಸಂಬಂಧವಿಲ್ಲದಂತೆ ಕಂಡು ಬರುತ್ತಿದೆ. ಹೊಸನಗರ ತಾಲೂಕಿನಲ್ಲಿ ಸಂತ್ರಸ್ಥ, ಬಡ ರೈತ ಕೂಲಿಕಾರ್ಮಿಕರೇ ಹೆಚ್ಚು 108 ವಾಹನದ ಅಗತ್ಯ ಹೆಚ್ಚಿದೆ. ಆದರೆ ಹೆಸರಿಗೆ ಮಾತ್ರ ಇದ್ದು ಬಡವರ ತುರ್ತು ಕರೆಗೆ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
108 ಸಿಗದೆ ಪರದಾಟ:
ತುಂಬು ಗರ್ಭಿಣಿಯನ್ನು ಸಂಜೆ 7 ಗಂಟೆ ಸುಮಾರಿಗೆ ಹೊಸನಗರ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿದ್ದ ವೈದ್ಯರು ಕೂಡ ಸಕಾಲಕ್ಕೆ ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ ಕೂಡಲೇ ಮೆಗ್ಗಾನ್ಗೆ ಕರೆದೊಯ್ಯಲು ತಿಳಿಸಿದ್ದಾರೆ. ಆದರೆ ಗಂಟೆಗಟ್ಟಲೇ ಕಾದರೂ 108 ಮಾತ್ರ ಬರಲಿಲ್ಲ. ಗರ್ಭಿಣಿಯ ನರಳಾಟ ನೋಡಲಾಗದೇ ನಾವೇ ಎಲ್ಲ ಸೇರಿ ಹಣ ಒಟ್ಟು ಮಾಡಿ ಖಾಸಗಿ ವಾಹನದಲ್ಲಿ ಕಳುಹಿಸಿಕೊಟ್ಟೆವು. ಹೊಸನಗರದ 108 ಕಳೆದ ಮೂರು ತಿಂಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳೋರು ಯಾರು.
– ಗಣೇಶ ಭಂಡಾರಿ, ಮಾಜಿ ಗ್ರಾಪಂ ಸದಸ್ಯ ಜಯನಗರಪರಿಶೀಲಿಸಿ ಕ್ರಮ:
ತುಂಬು ಗರ್ಭಿಣಿಯ ನರಳಾಟದ ವಿಚಾರ ಗಮನಕ್ಕೆ ಬಂದಿಲ್ಲ. 108 ಇಲ್ಲದಿದ್ದರೂ ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ಸೌಲಭ್ಯವಿದೆ. ಅದನ್ನು ಪಡೆಯಬಹುದಿತ್ತು. ದುರಸ್ಥಿಗೆ ತೆರಳಿರುವ ಕಾರಣ ಕಳೆದ 12 ದಿನಗಳಿಂದ 108 ಸರ್ವೀಸ್ ಲಭ್ಯವಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
– ಡಾ.ಸುರೇಶ್ , ತಾಲೂಕು ವೈದ್ಯಾಧಿಕಾರಿ.
