
ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ಜಾತ್ರೆ : ಸೆ.17 ರಿಂದ ದೇವಿಗೆ ಕಂಕಣ ಕಟ್ಟುವ ಮೂಲಕ ಚಾಲನೆ
ಹೊಸನಗರ: ಸೆ.20 ರಿಂದ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರೆ ನಡೆಯಲಿದ್ದು ಸೆ.17 ರಂದು ದೇವಿಗೆ ಕಂಕಣ ಕಟ್ಟುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಬಿ.ಸ್ವಾಮಿರಾವ್ ಹೇಳಿದರು.
ಅಮ್ಮನಘಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸೆ.20, 24, 27 ಮತ್ತು ಅಕ್ಟೋಬರ್ 1 ರಂದು ಜಾತ್ರೆ ನಡೆಯಲಿದೆ. ನಂತರ ನವರಾತ್ರಿ 10 ದಿನ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ನಡೆಯಲಿದೆ ಎಂದರು.


ಅಮ್ಮನಘಟ್ಟ ಸನ್ನಿಧಿಯಲ್ಲಿ ರೂ.5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕಿದ್ದು ಈ ಸಂಬಂಧ ಸಿಎಂ, ಡಿಸಿಎಂ ಜೊತೆ ಮಾತನಾಡಿದ್ದು, ಹಣ ನೀಡುವ ಭರವಸೆ ನೀಡಿದ್ದಾರೆ ಎಂದರು.
ಹಿಂದಿನ ಸಮಿತಿ ಕಡೆ ರೂ.16 ಲಕ್ಷ: ಅಭಿವೃದ್ಧಿಗೆ ನೀಡದಿದ್ದರೆ ಧರಣಿ ಎಚ್ಚರಿಕೆ:
ದೇಗುಲದ ಕಳೆದ ಅವಧಿಯ ಸಮಿತಿಯವರ ಹತ್ತಿರ ರೂ.16 ಲಕ್ಷ ಇದೆ. ಈವರೆಗೆ ಅದನ್ನು ನಮಗೆ ನೀಡಿಲ್ಲ. ಅಭಿವೃದ್ಧಿಗೆ ಹಣ ನೀಡದಿದ್ದಲ್ಲಿ ಧರಣಿ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಆಹ್ವಾನಿಸಿದ್ದೆವು. ಆದರೆ ಯಾವ ಕಾರಣದಿಂದ ಬರಲಿಲ್ಲವೋ ಗೊತ್ತಿಲ್ಲ ದೇವಸ್ಥಾನ ಅವರ ವ್ಯಾಪ್ತಿಗೆ ಬರಲಿದ್ದು ಅಭಿವೃದ್ಧಿಗೆ ಶಾಸಕರ ಸಹಕಾರ ಮುಖ್ಯ ಎಂದರು.
ನನ್ನ ಅಧಿಕಾರದ ಅವಧಿಯಲ್ಲಿ ದೇವಸ್ಥಾನ ದ ನೂತನ ಶಿಲಾಮಯ ಕಟ್ಟಡ ನಿರ್ಮಾಣ ಮಾಡುವ ಆಶಯವಿದೆ ಎಂದರು.
ದೇವಸ್ಥಾನ ಸಮಿತಿ ಸದಸ್ಯರಾದ ಕೊಡೂರು ವಿಜೇಂದ್ರರಾವ್, ಸುಧೀರ್, ಪುಟ್ಟಪ್ಪ, ಭಾಸ್ಕರ್ ಜೋಯ್ಸ್ ಇದ್ದರು.
