ಬ್ಯಾಕೋಡು : ಹಾಡುಹಗಲೇ ಜೋಡಿ ಕೊಲೆ ನಡೆದು ಎರಡು ವರ್ಷಗಳು ಕಳೆದರೂ ಆರೋಪಿಗಳ ಪತ್ತೆ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಬ್ಯಾಕೋಡಿನಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ಆರಂಭಿಸಿದ್ದಾರೆ.
ಎಸ್ಪಿ (SP) ಬರಲೇ ಬೇಕು :
ಅಲ್ಲದೇ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಆಗಮಿಸಬೇಕು ಅಲ್ಲಿಯವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾ ನಿರತರು ಪಟ್ಟು ಹಿಡಿದಿದ್ದಾರೆ.
ಸಾಗರ ತಾಲೂಕಿನ ಬ್ಯಾಕೋಡಿನಲ್ಲಿ ಸುಂದರಶೇಟ್ ದಂಪತಿಗಳ ಜೋಡಿ ಕೊಲೆ ನಡೆದು ಎರಡು ವರ್ಷವಾಗಿದೆ. ಆರೋಪಿಗಳನ್ನು ಬಂಧಿಸುವುದಿರಲಿ ದುಷ್ಕೃತ್ಯ ನಡೆಸಿದವರ ಸುಳಿವು ಕೂಡ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.
ಬ್ಯಾಕೋಡಿನ ಜೋಡಿ ಕೊಲೆ ಗ್ರಾಮೀಣ ಭಾಗದಲ್ಲಿ ತಲ್ಲಣ ಸೃಷ್ಟಿಸಿದೆ. ಭಯಾನಕ ಘಟನೆ ಸೃಷ್ಟಿಸಿದ ಆತಂಕದಿಂದ ಹಳ್ಳಿಯ ಜನರು ಇನ್ನು ಹೊರಬಂದಿಲ್ಲ. ದುಷ್ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟದಿದ್ದರೆ ಜನರು ಇನ್ನಷ್ಟು ಭಯದಲ್ಲಿ ಬದುಕಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಕೋಡು ಠಾಣೆ ಮೇಲ್ದರ್ಜೆಗೆ ಏರಿಸಿ:
ಬ್ಯಾಕೋಡು ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಪ್ರತಿಭಟನೆ ವೇಳೆ ಒತ್ತಾಯಿಸಲಾಯಿತು.
ಪ್ರಮುಖರಾದ ಜಿ.ಟಿ.ಸತ್ಯನಾರಾಯಣ, ಸಂತೋಷ ಶೇಟ್ ಸಾಗರ, ನಾಗೇಂದ್ರ ಜೋಗಿ, ಕೆರೆಕೈ ಪ್ರಸನ್ನ, ಹುರುಳಿ ರವಿ, ಬಬ್ಬಿಗೆ ನಾಗರಾಜ್, ನಾಗೋಡಿ ವಿಶ್ವನಾಥ, ರವೀಂದ್ರ ಸಿ, ಸವಿತಾ ದೇವರಾಜ, ರಾಮಚಂದ್ರ ಹಾರಿಗೆ, ಅಡಗಳಲೆ ವಿಜಯ, ದೇವರಾಜ ಕುದುರೂರು, ಪಕ್ಷಾತೀತವಾಗಿ ಗ್ರಾಮಸ್ಥರು ಪಾಲ್ಗೊಂಡಿದ್ದರು.