
ವಕೀಲರ ಸಮಯಪ್ರಜ್ಞೆ ಕಾರ್ಯ | ಕೆನರಾ ಬ್ಯಾಂಕ್ ಸ್ಪಂದನೆ | ಜೈಲು ಸೇರೋದು ತಪ್ಪಿಸಿಕೊಂಡ ಗ್ರಾಹಕ!
ಹೊಸನಗರ: ಇನ್ನೇನು 7 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗ ಬೇಕಿದ್ದ ಗ್ರಾಹಕನನ್ನು ವಕೀಲರ ಸಮಯ ಪ್ರಜ್ಞೆ ಮತ್ತು ಕಾಳಜಿಯಿಂದ ಕೆನರಾ ಬ್ಯಾಂಕ್ ಸ್ಪಂದಿಸಿ ರಕ್ಷಿಸಿದ ಘಟನೆ ಹೊಸನಗರದ ಹಿರಿಯ ಶ್ರೇಣಿ ವ್ಯವಹಾರ ನ್ಯಾಯಾಲಯದಲ್ಲಿ ಶುಕ್ರವಾರ ನಡೆದಿದೆ.
ಬ್ಯಾಂಕ್ ವಸೂಲಾತಿ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಎದುರಿದಾರ ಎರಡನೇ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆ ತಂದ ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ವಕೀಲ ಮೋಹನ್ ಶೆಟ್ಟಿ ಕೆನರಾ ಬ್ಯಾಂಕ್ ರೀಜಿನಲ್ ಅಧಿಕಾರಿಗಳನ್ನು ಸಂಪರ್ಕಿಸಿ ಬ್ಯಾಂಕಿನ ಗ್ರಾಹಕ ಜೈಲಿಗೆ ಹೋಗುವುದನ್ನು ತಪ್ಪಿಸಿದ್ದಾರೆ.


ಕೇವಲ 5 ನಿಮಿಷದಲ್ಲಿ ಕೆನರಾ ಬ್ಯಾಂಕ್ ಗ್ರಾಹಕನಿಂದ ಬರಬೇಕಾದ ಹಣದಲ್ಲಿ ಬರೋಬ್ಬರಿ ರು.23 ಲಕ್ಷ ಕಡಿತಗೊಳಿಸಿದ ಕಾರಣ ಗ್ರಾಹಕ ಜೈಲಿಗೆ ಹೋಗುವುದು ತಪ್ಪಿ ವಾಪಸು ಮನೆ ಸೇರಿದ್ದಾರೆ. ಇದು ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿದೆ.
ತ್ವರಿತಗತಿಯಲ್ಲಿ ಸ್ಪಂದಿಸಿದ ಕೆನರಾ ಬ್ಯಾಂಕ್ ರಿಜಿನಲ್ ಕಚೇರಿ, ಹೊಸನಗರ ಮತ್ತು ನಿಟ್ಟೂರು ಶಾಖೆಗೆ ಗ್ರಾಹಕ ಕೃತಜ್ಞತೆ ಸಲ್ಲಿಸಿದ್ದಾರೆ.
