
ಕಾನನ ನಡುವೆ ಅವಿತ ಚಕ್ರಾ ಸುಂದರಿ!
ಮೋಹಕ್ಕೆ ಸಿಲುಕಿ ಅಕ್ರಮ ಪ್ರವೇಶಕ್ಕೆ ಮುಂದಾದರೇ ಜೋಕೆ?
ಮೂಕಾಂಬಿಕ ಅಭಯಾರಣ್ಯದ ಈ ತಾಣಕ್ಕೆ ಅಕ್ರಮ ಪ್ರವೇಶ ನಿಷಿದ್ಧ
* ಬಿದನೂರು
ಇದು ಮೂಕಾಂಬಿಕ ಅಭಯಾರಣ್ಯ ವ್ಯಾಪ್ತಿಯ ಚಕ್ರಾ ಜಲಾಶಯದ ಸಮೀಪ ಸಸ್ಯಕಾಶಿ ನಡುವೆ ಬೆಳ್ಳಿ ಗೆರೆಯಂತೆ ಅಪೂರ್ವ ಜಲಪಾತ. ಈ ಜಲಪಾತ ವೀಕ್ಷಿಸಿದವರು ಕಡಿಮೆ. ಹಾಗಂತ ಆನಾಯಾಸವಾಗಿ ನೋಡಬಹುದು.. ಚಿತ್ರೀಕರಣ ಮಾಡಬಹುದು ಎಂದುಕೊಂಡರೇ ಅದು ಕಷ್ಟಸಾಧ್ಯ. ಅಕ್ರಮವಾಗಿ ಅಭಯಾರಣ್ಯ ಹೊಳಹೊಕ್ಕರೆ ಕೇಸು ಗ್ಯಾರಂಟಿ.
ಮಳೆಗಾಲ ಬಂತೆಂದರೇ ಮಲೆನಾಡ ಜಲಪಾತಗಳು ಇಡೀ ವಿಶ್ವವನ್ನೆ ಸೆಳೆಯುತ್ತವೆ. ಇಂತಹ ಜಲಪಾತಗಳಲ್ಲಿ ಬೆಳಕಿಗೆ ಭಾರದ ಜಲಪಾತಗಳು ಸಾಕಷ್ಟಿವೆ. ಇದರಲ್ಲಿ ಹೊಸನಗರ ತಾಲೂಕಿನ ಚಕ್ರಾ ಜಲಾಶಯದ ಸಮೀಪದ ಜಲಪಾತವೂ ಒಂದು.
ಚಕ್ರಾ ಸುಂದರಿ:
ಚಕ್ರಾ ಜಲಾಶಯದ ದಾರಿಯಿಂದ ಅಭಯಾರಣ್ಯದ ಮಾರ್ಗವಾಗಿ ಮೂರು ಕಿಮೀ ಸಾಗಿದರೇ ಚಕ್ರಾ ಜಲಧಾರೆ ನಿಮ್ಮನ್ನು ಆಕರ್ಷಿಸುತ್ತದೆ. ಸುಮಾರು 200 ಅಡಿಯ ಅಂತರದಲ್ಲಿ ಮೂರು ಬಾರಿ ಹಂತಹಂತವಾಗಿ ಧುಮ್ಮಿಕ್ಕುವ ಪರಿಗೆ ಮನಸೋಲದಿರಲಾರದು. ಅಂತಿಮ ವಾಗಿ 100 ಅಡಿ ಕೆಳಗೆ ಬೋರ್ಗೆರೆಯುವ ಜಲಧಾರೆ ಕಣ್ಣುಕುಕ್ಕುತ್ತದೆ. ನಿತ್ಯಹರಿದ್ವರ್ಣ ದಟ್ಟ ಕಾನನದ ನಡುವೆ ಕಂಡುಬರುವ ಮೂರು ಹಂತದ ಜಲಧಾರೆಯ ಸೊಬಗನ್ನು ಡ್ರೋನ್ ನಲ್ಲಿ ವೀಕ್ಷಿಸಿದರೆ.. ಹಚ್ಚ ಹಸಿರಿನ ನಡುವೆ ಶ್ವೇತವರ್ಣದ ಜಲದ ಹಾದಿ ಮಂತ್ರಮುಗ್ಧಗೊಳಿಸುತ್ತದೆ ಮಾತ್ರವಲ್ಲ ಪ್ರಕೃತಿಯ ಚಿತ್ತಾರದ ಬಗ್ಗೆ ಸೋಜಿಗ ತರಿಸುವುದರಲ್ಲಿ ಅನುಮಾನ ಬೇಡ.
ದಾರಿ ಇದೆ.. ಆದರೆ ಅನುಮತಿ ಇಲ್ಲ:
ಚಕ್ರಾ ಜಲಾಶಯಕ್ಕೆ ಹೋಗುವಾಗ ಸಿಗುವ ಮತ್ತೂರು ದೇವಸ್ಥಾನಕ್ಕೆ ಹೋಗುವ ದಾರಿಯ ಎದುರುಭಾಗದ ಹಾದಿಯಲ್ಲಿ ಹೊರಟರೆ ಸರಿಸುಮಾರು ಮೂರು ಕಿಮೀ ಹಾದಿ. ಒಂದಷ್ಟು ದೂರ ಅಭಯಾರಣ್ಯ ನಿರ್ವಹಣೆಗಾಗಿ ಮಾಡಿಕೊಂಡ ದಾರಿ ಇದೆ. ನಂತರ ಹಾದಿ ಅಷ್ಟೇನು ಸಲೀಸಲ್ಲ. ಇದು ಬಿಟ್ಟು ಸ್ಥಳೀಯರೇ ಬೇರೆ ಹಾದಿಯಿಂದ ಹೋಗಿ ದಟ್ಟಕಾನನದಲ್ಲಿ ದಾರಿ ತಪ್ಪಿ ವಾಪಾಸು ಬರಲು ಹೆಣಗಾಡಿದ ಮಾಹಿತಿ ಸಾಕಷ್ಟಿದೆ. ಅಂದ ಮಾತ್ರಕ್ಕೆ ಕಾಡಿನ ಹೊಳಹೊಕ್ಕಲು ನಿಷೇಧವಿದೆ. ಅದನ್ನು ಮೀರಿ ಹುಚ್ಚಾಹಸ ಮಾಡ ಹೊರಟರೇ ಕೇಸು ಕಟ್ಟಿಟ್ಟಬುತ್ತಿ.. ಹಾಗಂತ ಬೋರ್ಡ್ ಕೂಡ ಮಾಹಿತಿಗಾಗಿ ಇಲ್ಲಿ ಅಳವಡಿಸಲಾಗಿದೆ.
ಡೇಂಜರ್.. ಡೇಂಜರ್..!
ಚಕ್ರಾ ಜಲಪಾತ ನೋಡಲೇ ಬೇಕು ಎಂಬ ಹುಚ್ಚಾಹಸ ಮಾಡಿ ಪೇಚಿಕೆ ಸಿಲುಕಬೇಡಿ.. ಈ ಅಭಯಾರಣ್ಯದಲ್ಲಿ ಚಿರತೆ, ಕಾಳಿಂಗ ಸರ್ಪ, ನಾಗರಹಾವು, ಕಾಡುಕೋಣಗಳಿವೆ. ಸಾಕಷ್ಟು ಡೇಂಜರ್ ವೈಲ್ಡ್ ಅನಿಮಲ್ ಗಳು ಇವೆ. ಅಲ್ಲದೇ ದಟ್ಟ ಕಾನನವಾಗಿದ್ದು ದಾರಿತಪ್ಪಿದರೇ ವಾಪಾಸು ಬರಲು ಹೆಣಗಾಡಬೇಕು. ಒಂದು ವೇಳೆ ತೊಂದರೆ ಸಿಲುಕಿದಲ್ಲಿ ಸಂರಕ್ಷಣೆಯ ಯಾವುದೇ ದಾರಿಯಿಲ್ಲ. ಅಲ್ಲದೇ ವ್ಯಾಪಕ ಮಳೆಯಾಗುವ ಪ್ರದೇಶ ಇದು. ಈಗಾಗಲೇ ಅರಶಿನಗುಂಡಿ ಜಲಪಾತದ ದುರಂತ ಕಣ್ಣಮುಂದೆ ಇದೆ ಅರಣ್ಯದ ಒಳಹೊಕ್ಕಿ ಆಪತ್ತಿಗೆ ಸಿಲುಕಿದರೆ ಯಾರು ಹೊಣೆ ಎಂಬ ಜಾಗೃತಿಯನ್ನು ವನ್ಯಜೀವಿ ಇಲಾಖೆ ಜಾಗೃತಿ ಮೂಡಿಸುತ್ತಿದೆ.
ಇಲಾಖೆ ಎಚ್ಚರಿಕೆ:
ಕಳೆದ ವರ್ಷಗಳಿಗೆ ಹೋಲಿಸಿದರೇ.. ಪ್ರಸಕ್ತ ಸಾಕಷ್ಟು ಪ್ರವಾಸಿಗರು ಈ ಪ್ರದೇಶಕ್ಕೆ ಬರುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಒಂದಷ್ಟು ಯ್ಯೂಟೂಬರ್ಸ್ಬ ಕೂಡ ಜಲಪಾತ ಸೇರಿದಂತೆ ಈ ಪ್ರದೇಶದ ಚಿತ್ರೀಕರಣ ಮಾಡಿ ಅಪ್ ಲೋಡ್ ಮಾಡಿದ್ದರು. ಆದರೆ ಇದನ್ನು ಪತ್ತೆ ಹಚ್ಚಿದ ವನ್ಯಜೀವಿ ಇಲಾಖೆ ಎಚ್ಚರಿಕೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗಿದ್ದ ವೀಡಿಯೋಗಳನ್ನು ಡಿಲೀಟ್ ಮಾಡಿಸಿ ವಾರ್ನಿಂಗ್ ಮಾಡಿ ಕಳಿಸಲಾಗಿದೆ. ಇನ್ನು ಪ್ರವಾಸಕ್ಕೆ ಬಂದವರು ಅವಘಡಕ್ಕೆ ತುತ್ತಾದಲ್ಲಿ ಅವರು ಯಾವ ಆಧರಿಸಿ ಬಂದಿದ್ದಾರೋ.. ಆ ಮಾಹಿತಿ ರವಾನಿಸಿದ ಜಾಲತಾಣದ ಅಕೌಂಟ್ ಮೇಲೂ ಕ್ರಮ ಕೈಗೊಳ್ಳುವುದಾಗಿ ಕೂ ಎಚ್ಚರಿಸಿದೆ.
ಎಚ್ಚರಿಕೆ ಫಲಕ, ಸೆಕ್ಯೂರಿಟಿ ಅಳವಡಿಕೆ:
ಪ್ರವಾಸಿಗರು ಅಭಯಾರಣ್ಯ ಪ್ರದೇಶಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಚಕ್ರಾ ಜಲಧಾರೆ ಕಡೆ ಹೋಗುವ ಎರಡು ದಾರಿಗಳಲ್ಲಿ ಪ್ರವೇಶ ನಿಷಿದ್ಧ ಎಂಬ ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಅಲ್ಲದೇ ಎರಡು ಜಾಗದಲ್ಲೂ ವನ್ಯಜೀವಿ ಇಲಾಖೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಕ್ರಮ ಕೈಗೊಂಡಿದೆ.
ಇಕೋ ಟೂರಿಸಂ ಮಾಡಲಿ:
ಈ ನಡುವೆ ಚಕ್ರ ಜಲಪಾತ ಕೇವಲ ನಮ್ಮೂರಿನ ಮಾತ್ರವಲ್ಲ ಕರುನಾಡಿನ ಅನರ್ಘ್ಯ ರತ್ನ. ಟೂರಿಸಂ ಅಭಿವೃದ್ಧಿಗೆ ಹೇಳಿ ಮಾಡಿಸಿದ ಸ್ಥಳ. ಚಕ್ರಾ ಜಲಧಾರೆ ಸೇರಿಕೊಂಡಂತೆ, ಚಕ್ರಾ ಸಾವೇಹಕ್ಲು ಡ್ಯಾಂ, ಬಿದನೂರು ಕೋಟೆ, ಹುಲಿಕಲ್ ಫಾಲ್ಸ್, ಮಾಣಿ, ವಾರಾಹಿ, ದೇವಗಂಗೆ ಕೊಳ, ಯಡೂರು ತಲಾಸಿ ಅಬ್ಬಿ ಫಾಲ್ಸ್, ಕವಲೇ ದುರ್ಗ, ಕೊಡಚಾದ್ರಿ ಬರೇಕಲ್ ಬತೇರಿ ಸೇರಿದಂತೆ ಇಲ್ಲಿರುವ ಇನ್ನಷ್ಟು ತಾಣ ಸೇರಿಕೊಂಡು ಟೂರಿಸ್ಟ್ ಹಬ್ ಮಾಡಬಹುದು. ಮುಳುಗಡೆಯಿಂದ ತತ್ತರಿಸಿರುವ, ಬಹುತೇಕ ಅಭಯಾರಣ್ಯದಿಂದ ಕೂಡಿರುವ ನಗರ ಹೋಬಳಿಯಲ್ಲಿ ಬೇರೆ ಅಭಿವೃದ್ಧಿಗಳು ಸಾಧ್ಯವಿಲ್ಲ. ಇಕೋ ಟೂರಿಸಂ ಈ ಭಾಗಕ್ಕೆ ವರದಾನವಾಗುತ್ತದೆ. ಮಾತ್ರವಲ್ಲ ವನ್ಯಜೀವಿ ಇಲಾಖೆ ಗೂ ಹಣ ಹರಿದುಬರುತ್ತದೆ. ಇದಕ್ಕೆ ಸನಿಹದಲ್ಲೇ ಇರುವ ಕೊಡಚಾದ್ರಿ ಹಿಡ್ಲುಮನೆ ಫಾಲ್ಸ್ ಉದಾಹರಣೆ ಎಂಬ ವಾದ ಕೂಡ ಇಲ್ಲಿದೆ.
ಅಭಯಾರಣ್ಯದೊಳಗೆ ಇರುವುದು ಇದೊಂದೆ ಫಾಲ್ಸ್ ಅಲ್ಲ!
ಕೇವಲ ಚಕ್ರಾ ಫಾಲ್ಸ್ ಒಂದೇ ಅಭಯಾರಣ್ಯದ ಒಳಗೆ ಇರುವ ತಾಣವಲ್ಲ. ಇರುಪು ಜಲಪಾತ ಕೊಡಗು, ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿ, ಹಿಡ್ಲುಮನೆ ಜಲಪಾತ ಕೊಡಚಾದ್ರಿ, ಮೂಕಾಂಬಿಕ ಅಭಯಾರಣ್ಯ ವ್ಯಾಪ್ತಿ. ಹೆಬ್ಬೆ ಜಲಪಾತ, ಚಿಕ್ಕಮಗಳೂರು ಭದ್ರ ಅಭಯಾರಣ್ಯ ವ್ಯಾಪ್ತಿ. ಹನುಮನಗುಂಡಿ ಜಲಪಾತ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ,ದಬ್ಬೆ ಜಲಪಾತ : ಶರಾವತಿ ಅಭಯಾರಣ್ಯ ವ್ಯಾಪ್ತಿ ಸೇರಿದಂತೆ ರಾಜ್ಯದಲ್ಲಿ ಹಲವು ಈ ರೀತಿಯ ತಾಣಗಳಿವೆ. ಚಕ್ರಾ ಜಲಧಾರೆಯನ್ನು ಕೂಡ ಅದೇ ರೀತಿಯಲ್ಲಿ ಇಕೋ ಟೂರಿಸಂ ಅಭಿವೃದ್ಧಿ ಮಾಡಿ ಸುರಕ್ಷತೆ ಕ್ರಮದೊಂದಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡುವಂತೆ ಒತ್ತಾಯ ಕೂಡ ಕೇಳಿ ಬಂದಿದೆ.
ಅಭಯಾರಣ್ಯದಲ್ಲಿ ಅವಘಡಕ್ಕೆ ತುತ್ತಾದರೇ ಹೊಣೆ ಯಾರು?
ಸಾಮಾಜಿಕ ಜಾಲತಾಣದ ಮಾಹಿತಿ ಆಧರಿಸಿ ಸಾಕಷ್ಟು ಜನರು ಬರುತ್ತಿದ್ದಾರೆ. ಅವರು ಎಲ್ಲಿಯವರು ಯಾರು ಎಂಬ ಮಾಹಿತಿಯೂ ಇಲ್ಲ. ಜಲಪಾತ ನೋಡಲು ಅವಘಡಕ್ಕೆ ತುತ್ತಾದರೇ ಯಾರು ಹೊಣೆ. ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಡೆಡ್ಲೀ ಅನಿಮಲ್ ಇರೋ ಪ್ರದೇಶ ಇದು. ಈಗಾಗಲೇ ಅಕ್ರಮ ಪ್ರವೇಶ ನಿಷಿದ್ಧ ಎಂಬ ಬೋರ್ಡ್ ಅಳವಡಿಕೆ ಜೊತೆ, ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಇದನ್ನು ಮೀರಿ ಒಳಪ್ರವೇಶ ಮಾಡಿದರೆ ಅಂತವರ ಮೇಲೆ ಮತ್ತು ಮಾಹಿತಿ ನೀಡಿದ ಜಾಲತಾಣದ ಕ್ರಿಯೇಟರ್ಸ್ ಮೇಲೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.
ಜಿ.ವಿ.ನಾಯ್ಕ್, ವಲಯ ಅರಣ್ಯಾಧಿಕಾರಿ ವನ್ಯಜೀವಿ ವಲಯ ಸಿದ್ದಾಪುರ
ಇಕೋ ಟೂರಿಸಂ ಅಭಿವೃದ್ಧಿಯಾಗಲಿ
ಅಭಯಾರಣ್ಯದ ನಡುವೆ ಇರೋ ಜಲಪಾತಗಳು ಸಾಕಷ್ಟಿವೆ. ಅಲ್ಲೆಲ್ಲಾ ಇಕೋ ಟೂರಿಸಂ ಅಭಿವೃದ್ಧಿಯಾಗಿದೆ. ಚಕ್ರಾ ಜಲಪಾತವನ್ನು ಕೂಡ ಇದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಿ. ನಗರ ಹೋಬಳಿ ಬಹುಪಾಲು ಮುಳುಗಡೆ, ಅಭಯಾರಣ್ಯದಿಂದ ಕೂಡಿದೆ. ಇಲ್ಲಿ ಬೇರೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಚಕ್ರಾ ಜಲಾಧಾರೆ, ಸೇರಿದಂತೆ ಈ ಭಾಗದಲ್ಲಿರುವ ಹಲವು ತಾಣ ಸೇರಿಕೊಂಡು ಟೂರಿಸ್ಟ್ ಹಬ್ ಮಾಡಬಹುದು. ವನ್ಯಜೀವಿ ಇಲಾಖೆ ಈ ಬಗ್ಗೆ ಚಿಂತಿಸಲಿ.
ನಗರ ನಿತಿನ್, ಸ್ಥಳೀಯರು
