
-
ಬಂಗಾರದ ಸರ ನುಂಗಿದ ಹಸು |ಹಸುವಿನ ಹೊಟ್ಟೆ ಸೇರಿದ್ದ ರೂ.70 ಸಾವಿರ ಮೌಲ್ಯದ ಚಿನ್ನದ ಸರ | ಹಸುವಿನ ಜೀವಕ್ಕು ಕುತ್ತು ತಂದಿದ್ದ ಸರ | ಯಶಸ್ವಿ ಆಪರೇಶನ್.. 12 ಗ್ರಾಂ ಬಂಗಾರ ಹೊರತೆಗೆದ ಡಾ.ಆನಂದ್
ಹೊಸನಗರ: ಗೋಪೂಜೆ ಸಲ್ಲಿಸುವ ಸಮಯದಲ್ಲಿ ಹಸುವೊಂದು ಪೂಜೆಗಿಟ್ಟಿದ್ದ ಬಂಗಾರದ ಸರವೊಂದನ್ನು ನುಂಗಿದ ಘಟನೆ ಮತ್ತಿಮನೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮತ್ತಿಮನೆ ವಿನಾಯಕನ ಉಡುಪರ ಸಹೋದರ ದಿ.ಶ್ಯಾಮ ಉಡುಪರ ಮನೆಯಲ್ಲಿ ಈ ಘಟನೆ ನಡೆದಿದೆ.
ಗೋಪೂಜೆಯ ನಂತರ ಇಟ್ಟಿದ್ದ ಸರ ನಾಪತ್ತೆಯಾದಾಗ ಕುಟುಂಬದವರು ದಿಗಿಲುಗೊಂಡಿದ್ದರು. ಆದರೆ ಪ್ರಸಾದದ ಜೊತೆ ಬಂಗಾರದ ಸರವನ್ನು ಹಸು ನುಂಗಿದೆ ಎಂದು ಖಚಿತ ಪಡಿಸಿಕೊಂಡಿದ್ದಾರೆ.
ಬಂಗಾರದ ಹೋದರೆ ಹೋಗಲಿ ಎಂದು ಸತ್ಯವತಿ ಶ್ಯಾಮ ಉಡುಪ ಸುಮ್ಮನಾಗಿದ್ದರು. ಆದರೆ ಹಲವರ ಬಳಿ ಈ ವಿಚಾರ ಹೇಳಿದಾಗ ಇದು ಹಸುವಿನ ಪ್ರಾಣಕ್ಕು ಕುತ್ತು ತರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೇ ಬಂಗಾರ ನುಂಗಿದ ದಿನದಿಂದ ಮೇವು ತಿನ್ನುವುದನ್ನು ಹಸು ಕಡಿಮೆ ಮಾಡಿತ್ತು.


ಬಳಿಕ ಕೋಣಂದೂರಿನ ಹಿರಿಯ ಪಶು ವೈದ್ಯಾಧಿಕಾರಿ ಡಾ.ಆನಂದ ಜಿ ಯವರಿಗೆ ಮಾಹಿತಿ ನೀಡಿದ್ದಾರೆ. ಭಾನುವಾರ ಯಶಸ್ವಿ ಶಸ್ತಚಿಕಿತ್ಸೆ ಮಾಡುವ ಮೂಲಕ ಬಂಗಾರದ ಸರವನ್ನು ಹೊರತೆಗೆದಿದ್ದಾರೆ. ಹಸು ಆರೋಗ್ಯವಾಗಿದ್ದು ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.
ಡಾ.ಆನಂದ್ ಮಾಹಿತಿ ನೀಡಿ, ಹಸು ಮೆಲುಕು ಹಾಕಿ ಜಗಿಯುವಾಗ ಸರ ತುಂಡಾಗಿ ಚೂಪಾಗಿದ್ದು ರೆಟಿಕ್ಯುಲಮ್ ಭಾಗದಲ್ಲಿ ಸಿಲುಕಿತ್ತು. ಚೂಪಾಗಿದ್ದರಿಂದ ಗಾಯವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಯಶಸ್ವಿ ಚಿಕಿತ್ಸೆ ಮೂಲಕ ಸರವನ್ನು ಹೊರತೆಗೆಯಲಾಗಿದೆ.
ಕಾರ್ಯಾಚರಣೆ ವೇಳೆ ಮೈತ್ರಿ ಕಾರ್ಯಕರ್ತ ಗಣಪತಿ ಜಿ, ಪಶು ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
