ಶಿವಮೊಗ್ಗ: ಶಿವಮೊಗ್ಗ ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗದೇ ಸಾವನಪ್ಪಿದ ಬಡ ಕುಟುಂಬದ ಮಹಿಳೆಯೋರ್ವಳ ಚಿಕಿತ್ಸಾ ವೆಚ್ಚವನ್ನು ವಾಪಾಸ್ ನೀಡಿದ ಘಟನೆ ನಡೆದಿದೆ. ಇದಕ್ಕೆ ಕಾರಣವಾಗಿದ್ದು ರಾಜ್ಯದ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರ ಮಧ್ಯರಾತ್ರಿ ಕಾರ್ಯಾಚರಣೆ.
ಅಷ್ಟಕ್ಕು ಏನಿದು ಪ್ರಕರಣ:
ವಾರದ ಹಿಂದೆ ಹುಲಿಕಲ್ ನಲ್ಲಿ ನಡೆದ ಭೀಕರ ಅಪಘಾತ ಪ್ರಕರಣದಲ್ಲಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿ, ಓರ್ವ ಮಹಿಳೆ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು.
ಎರಡು ಕಾಲುಗಳನ್ನು ಕಳೆದುಕೊಂಡು ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಶಾಲಿನಿ ಚಿಕಿತ್ಸೆಯ ಬಗ್ಗೆ ಮೆಗ್ಗಾನ್ ಆಸ್ಪತ್ರೆ ವೈದ್ಯರು ಕೈಚೆಲ್ಲಿದ್ದರು. ಮುಂದುವರಿದ ಚಿಕಿತ್ಸೆಗಾಗಿ ಶಿವಮೊಗ್ಗ ನಗರದ ಹೊಸ ಪ್ರತಿಷ್ಠಿತ ಚಂದ್ರಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗಾಗಿ ರೂ.1.10 ಲಕ್ಷ ಹಣ ಪಾವತಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಾಲಿನಿ ಮೃತ ಪಟ್ಟಿದ್ದಾರೆ. ಆದರೆ ಶವ ಪಡೆಯಲು ಮತ್ತೆ ರೂ.1.30 ಲಕ್ಷ ಪಾವತಿಸಬೇಕಿತ್ತು ಎನ್ನುವುದು ಮೃತ ಕುಟುಂಬಸ್ಥರ ಆರೋಪ.
ದುರಂತ ಕುಟುಂಬ:
ಆಸ್ಪತ್ರೆಗೆ ದಾಖಲಾಗಿದ್ದ ಮೃತ ಶಾಲಿನಿ ಬೇರಾರು ಅಲ್ಲ. ಮೊನ್ನೆ ಹುಲಿಕಲ್ ಅಪಘಾತದಲ್ಲಿ ಸ್ಥಳದಲ್ಲೇ ಸಾವನಪ್ಪಿದ ಕಂಪದಕೈ ನಿವಾಸಿ ಮೃತ ರವಿ ಪತ್ನಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಫಲಕಾರಿಯಾಗದೇ ಶಾಲಿನಿ ಕೂಡ ಸಾವನಪ್ಪಿದ್ದಾರೆ. ಹೆತ್ತ ತಂದೆತಾಯಿಯನ್ನು ಕಳೆದುಕೊಂಡ ಅಶ್ವಲ್ (13), ಅನೂಪ್ (9) ಅನಾಥರಾದ ಕುಟುಂಬದ ಧಾರುಣ ಸ್ಥಿತಿ ಇದು. ಆರಂಭದಲ್ಲಿ ಚಿಕಿತ್ಸೆಗಾಗಿ ಪಾವತಿಸಿದ್ದ ರೂ.1.10 ಲಕ್ಷವನ್ನು ಸಾಲ ಮಾಡಿ ಭರಿಸಲಾಗಿತ್ತು. ಮತ್ತೆ ರೂ.1.30 ಲಕ್ಷ ಪಾವತಿಸಿ ಅಮ್ಮನ ಶವವನ್ನು ಪಡೆಯಬೇಕಾದ ಧಾರುಣ ಸ್ಥಿತಿ ವಾರಸುದಾರರಾದ ಪುಟ್ಟ ಮಕ್ಕಳಿಗೆ ಬಂದಿತ್ತು. ಏನು ಮಾಡಬೇಕು ಎಂಬದು ಸಂಬಂಧಿಕರ ಆರೋಪವಾಗಿತ್ತು.
ಸಂಬಂಧಿಕರು, ಗ್ರಾಮಸ್ಥರ ಮಾತುಕತೆ:
ದುಬಾರಿ ವೆಚ್ಚ ಭರಿಸಬೇಕಾದ ಸಂದಿಗ್ಧ ಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಸಂಬಂಧಿಕರು, ಪ್ರಮುಖರಾದ ಸುರೇಶ್ ಸ್ವಾಮಿರಾವ್, ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಹೆರಟೆ ಆದರ್ಶ, ಇತರ ಪ್ರಮುಖರು ಮಾತುಕತೆ ನಡೆಸಿ ಆಸ್ಪತ್ರೆಯ ವೈದ್ಯರಿಗೆ ಇಲ್ಲಿಯ ಧಾರುಣ ಸ್ಥಿತಿಯನ್ನು ವಿವರಿಸಿದ್ದಾರೆ.
ಗೃಹಸಚಿವರ ಎಂಟ್ರಿ:
ಈ ಘಟನೆ ನಡೆದಿದ್ದು ನ.12 ಶನಿವಾರ ಮಧ್ಯರಾತ್ರಿ. ಆ ದಿನ ನಿಲ್ಸಕಲ್ ನಲ್ಲಿ ನಡೆಯುತ್ತಿದ್ದ ಕಬ್ಬಡ್ಡಿ ಪಂದ್ಯಾವಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಗಮಿಸುತ್ತಿರುವ ಮಾಹಿತಿ ತಿಳಿದ ಪ್ರಮುಖರು ಮತ್ತು ಸಂಬಂಧಿಕರು ಕಾನುಗೋಡು ಸರ್ಕಲ್ ಬಳಿ ಜಮಾಯಿಸಿದರು. ಸಚಿವರು ಬರುತ್ತಿದ್ದಂತೆ ಹುಲಿಕಲ್ ಅಪಘಾತ, ಕುಟುಂಬದ ಧಾರುಣ ಸ್ಥಿತಿ, ದುಬಾರಿ ಚಿಕಿತ್ಸಾ ವೆಚ್ಚ ಮತ್ತು ಶವ ಕೊಡಲು ಶತಾಯಿಸುತ್ತಿರುವ ಬಗ್ಗೆ ಗಮನಕ್ಕೆ ತಂದರು.
ಜಿಲ್ಲಾ ಆರೋಗ್ಯಾಧಿಕಾರಿಗೆ (DHO) ಖಡಕ್ ಸೂಚನೆ:
ಈ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ ಸಚಿವ ಆರಗ ಶಿವಮೊಗ್ಗ ಜಿಲ್ಲಾ ವೈದ್ಯಾಧಿಕಾರಿಯನ್ನು (DHO) ದೂರವಾಣಿ ಮೂಲಕ ಸಂಪರ್ಕಿಸಿ ಖಡಕ್ ಸೂಚನೆ ನೀಡಿದರು. ಚಂದ್ರಗಿರಿ ಆಸ್ಪತ್ರೆ ಎಲ್ಲಿದೆ, ಹಿನ್ನೆಲೆ ಏನು?, ಎರಡು ದಿನದಲ್ಲಿ ದುಬಾರಿ ವೆಚ್ಚ ಹೇಗಾಯ್ತು.. ನೀಡಿದ ಚಿಕಿತ್ಸೆಯ ಪಕ್ಕಾ ಮಾಹಿತಿಯನ್ನು ಕೂಡಲೇ ಆಸ್ಪತ್ರೆಗೆ ತೆರಳಿ ಪರಿಶೀಲಿಸಿ ವಿವರ ನೀಡುವಂತೆ ಸೂಚಿಸಿದರು.
ಆಯುಷ್ಮಾನ್, ಬಿಪಿಎಲ್ ಸೇರಿದಂತೆ ಸರ್ಕಾರದ ಯಾವ ಸೌಲಭ್ಯಗಳ ವ್ಯವಸ್ಥೆ ಹೊಂದಿರದ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದ್ದು ಯಾರು?… ಮೃತ ಶಾಲಿನಿಯದು ಕಡು ಬಡ ಕುಟುಂಬ. ಅಲ್ಲದೇ ಪತಿ ಕೂಡ ಸಾವನಪ್ಪಿದ್ದು ಮಕ್ಕಳು ದಿಕ್ಕಿಲ್ಲದಂತಾಗಿದ್ದಾರೆ. ಉಚಿತ ಮತ್ತು ಉತ್ತಮ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಬಳಿಕ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದ್ಯಾರು? ರೆಫರ್ ಮಾಡಲು ಕಾರಣ ಏನು? ಇವೆಲ್ಲದರ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದರು.
VIDEO REPORT | ಸಚಿವರ ಮಧ್ಯರಾತ್ರಿ ಸ್ಪಂದನೆ
ಇಲ್ಲಿ ಯಾರೇ ತಪ್ಪು ಮಾಡಿದ್ದರು ಕ್ರಮ ಕೈಗೊಳ್ಳಿ. ಹಣಕೊಟ್ಟು ಶವ ತೆಗೆದುಕೊಂಡು ಬರಲು ಇವರ ಬಳಿ ಬಿಡಿಗಾಸು ಇಲ್ಲ. ಮಾನವೀಯತೆ ಆಧಾರದ ಮೇಲೆ ಈ ಮೊದಲು ಕಟ್ಟಿಸಿಕೊಂಡ ಹಣವನ್ನು ವಾಪಾಸ್ ಮಾಡಲು ಕ್ರಮ ಕೈಗೊಳ್ಳಲು ಪರಿಶೀಲಿಸಲು ಸೂಚಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿಯವರಿಗೂ ಗೃಹ ಸಚಿವರು ಮಾಹಿತಿ ರವಾನಿಸಿದರು. ಇದರ ಪರಿಣಾಮ ಮತ್ತು ಮಾನವೀಯತೆ ಆಧಾರದಲ್ಲಿ ಶಾಲಿನಿಯವರ ಮೃತದೇಹವನ್ನು ಯಾವುದೇ ಹಣ ಪಡೆಯದೇ ಕುಟುಂಬದವರಿಗೆ ನೀಡಲಾಯ್ತು. ಅಲ್ಲದೇ ಮೊದಲು ಕಟ್ಟಿಸಿಕೊಂಡ ಹಣ ಕೂಡ ವಾಪಾಸ್ ಸಿಕ್ಕಿತು. ಒಟ್ಟಿನಲ್ಲಿ ಈ ಪ್ರಕರಣದಲ್ಲಿ ಮಾನವೀಯತೆ ಮತ್ತು ಜನಪರ ಸ್ಪಂದನೆಗೆ ಗೆಲುವು ದೊರಕಿತು.
ಬಡವರ ಬದುಕೇ ಕಷ್ಟ:
ಬಡವರ ಬದುಕೇ ಕಷ್ಟ. ಅದರಲ್ಲೂ ಹುಲಿಕಲ್ ಅಪಘಾತದಲ್ಲಿ ಕಂಪದ ಕೈ ಕುಟುಂಬಗಳು ಬೀದಿಗೆ ಬಂದಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ, ಇಲಾಖೆ, ಆಸ್ಪತ್ರೆಗಳು ಮಾನವೀಯ ಸ್ಪಂದನೆಗೆ ಒತ್ತು ನೀಡಬೇಕಾಗಿದ್ದು ಅನಿವಾರ್ಯ.
ಆರಗ ಜ್ಞಾನೇಂದ್ರ, ಗೃಹ ಸಚಿವ