
ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು! ಕರಿಮನೆ ಗ್ರಾಪಂ ಕಿಳಂದೂರು ಗ್ರಾಮದಲ್ಲಿ ಘಟನೆ
ಹೊಸನಗರ: ಅಡಿಕೆ ಕೊನೆಗೆ ಔಷಧಿ ಸಿಂಪಡನೆ ವೇಳೆ ಕೃಷಿ ಕಾರ್ಮಿಕ ನೋರ್ವ ಮರದಿಂದ ಬಿದ್ದು ಸಾವನಪ್ಪಿದ ಘಟನೆ ಕಿಳಂದೂರು ಗ್ರಾಮದ ನೂಲಿಗ್ಗೇರಿಯಲ್ಲಿ ಆ.18 ರಂದು ನಡೆದಿದೆ
ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಮತ್ತಿಮನೆ ನಿವಾಸಿ ಕೃಷಿ ಕಾರ್ಮಿಕ ಸಾಧಿಕ್ (42) ಮೃತ ವ್ಯಕ್ತಿ.
ಆಗಸ್ಟ್ 18ರ ಸೋಮವಾರ ಸಾಧಿಕ್ ಮತ್ತು ಮಂಜುನಾಥ ಎಂಬುವವರು ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಂದೂರು ಗ್ರಾಮದ ನೂಲಿಗೇರಿ ವಾಸಿ ಅಬ್ಬಾಸ್ ರವರ ಅಡಿಕೆ ತೋಟಕ್ಕೆ ಔಷಧಿಯನ್ನು ಹೊಡೆಯುವಾಗ ಸಾಧಿಕ್ ಎಂಬಾತ ಮರದಿಂದ ಕೆಳಬಿದ್ದು ತೀವ್ರ ಗಾಯಗೊಂಡಿದ್ದಾನೆ.
ಬೆನ್ನಿಗೆ, ಕುತ್ತಿಗೆಯ ಹಿಂಭಾಗ ಪೆಟ್ಟು ಬಿದ್ದಿದ್ದು ನಗರ ಸಂಯುಕ್ತ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೊಸನಗರ ಸರ್ಕಾರಿ ಆಸ್ಪತ್ರೆ, ಶಿವಮೊಗ್ಗ ಮೆಗ್ಗಾನ್, ಮಂಗಳೂರು ವೆನ್ಲಾಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಫಲಕಾರಿಯಾಗದೇ ಮಂಗಳೂರು ಯನಪೋಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಬೇರೆದಾರಿ ಕಾಣದೇ ಗುರುವಾರ ರಾತ್ರಿ ಮನೆಗೆ ಕರೆತರುತ್ತಿರುವ ವೇಳೆ ಮಾರ್ಗ ಮಧ್ಯದಲ್ಲಿ ಅಸು ನೀಗಿದ್ದಾನೆ.
ಮೃತ ಸಾಧಿಕ್ ಗೆ ಎರಡು ಹೆಣ್ಣುಮಕ್ಕಳು ಇದ್ದು ಕಡು ಬಡಕುಟುಂಬವಾಗಿದೆ. ಮನೆ ಯಜಮಾನನ ಅಕಾಲಿಕ ಸಾವು ಕುಟುಂಬಕ್ಕೆ ದಿಕ್ಕಿಲ್ಲದಂತೆ ಮಾಡಿದೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
