
ಕಾಲ್ಪನಿಕ ದೇವರಿಗಿಂತ ಅತಿ ಹೆಚ್ಚು ಆರಾಧಿಸಲ್ಪಡುವ ಅಂಬೇಡ್ಕರ್ ವ್ಯಕ್ತಿತ್ವ: ನಗರ ಪಿಎಸ್ಐ ರಮೇಶ್
ಹೊಸನಗರ: ಅಪಾರಜ್ಞಾನ, ದೂರದೃಷ್ಟಿ, ಸರ್ವರ ಬದುಕಿಗೆ ಸಂವಿಧಾನದ ಆಶ್ರಯ ನೀಡಿದ ಅಂಬೇಡ್ಕರದು ಕಾಲ್ಪನಿಕ ದೇವರಿಗಿಂತ ಅತೀ ಹೆಚ್ಚು ಆರಾಧಿಸಲ್ಪಡುವ ವ್ಯಕ್ತಿತ್ವ ಎಂದು ನಗರ ಠಾಣೆ ಪಿಎಸ್ಐ ರಮೇಶ್ ಅಭಿಪ್ರಾಯಿಸಿದರು.


ತಾಲೂಕಿನ ನಗರ ನೂಲಿಗ್ಗೇರಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯನ್ನು ದೀಪ ಬೆಳಗಿಸಿ, ಪುಷ್ಪ ನಮನದ ಮೂಲಕ ಅವರು ಆಚರಣೆಗೆ ಚಾಲನೆ ನೀಡಿದರು.
ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ. ಅದೊಂದು ಜ್ಞಾನ ಶಕ್ತಿ, ಬದುಕಿನಲ್ಲಿ ಶೋಷಣೆ, ಅಸಮಾನತೆ ನಡುವೆ ಬೆಂದರು ಕೂಡ ಛಲ ಬಿಡದ ಸಾಧಕ ಅವರರಾಗಿದ್ದಾರೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಅಧ್ಯಕ್ಷ ರವಿ ಬಿದನೂರು, ಇಂದಿನ ಯುವಜನತೆ ಅಂಬೇಡ್ಕರ್ ಅವರನ್ನು ಅರಿಯಬೇಕಿದೆ. ಇಂದು ಓರ್ವ ಪ್ರಭಾವಿಯನ್ನು ಎದುರಿಸಲು ಅಂಜಬೇಕಾದ ದಿನದಲ್ಲಿದ್ದೇವೆ. ಆದರೆ ಡಾ.ಬಿ.ಆರ್.ಅಂಬೇಡ್ಕರ್, ವ್ಯವಸ್ಥೆ, ಸಂಪ್ರದಾಯ, ಆಚರಣೆ ಸೇರಿದಂತೆ ಇಡೀ ವ್ಯವಸ್ಥೆಯೇ ಅವರ ವಿರುದ್ಧ ಸೆಟೆದು ನಿಂತರೂ ಲೆಕ್ಕಿಸದೇ ಅಚಲ ಶ್ರಮ, ಸ್ವಾಭಿಮಾನದ ಮೂಲಕ ಸಂವಿದಾನದ ಮೂಲಕ ಬದುಕನ್ನು ನೀಡಿದ ಮಹಾತ್ಮರಾಗಿದ್ದಾರೆ. ಆದರೆ ಅವರ ಬಗ್ಗೆ ಇಂದಿನ ಯುವ ಸಮಾಜ ಅಧ್ಯಯನ ರಹಿತವಾಗಿದೆ ಎಂದರು.
ಸಮಾಜದ ಪ್ರಮುಖ ಮುರುಗೇಶ ಅಧ್ಯಕ್ಷತೆ ವಹಿಸಿದ್ದರು.
ದಲಿತ ಸಂಘಟನೆಯ ಸಂಚಾಲಕ ಆನಂದ, ರಾಘವೇಂದ್ರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದ್ಯಾವಪ್ಪ, ಮುಖ್ಯಶಿಕ್ಷಕಿ ಪ್ರಮೀಳಾ, ಗಣೇಶ್, ಅಶೋಕ, ಅಬುಬಕರ್, ನಾಗೇಂದ್ರ ಇತರರು ಇದ್ದರು.
ವಿಶ್ವನಾಥ್ ಕಾರ್ಯಕ್ರಮ ನಿರ್ವಹಿಸಿದರು. ಭಾಗ್ಯಶ್ರೀ ಸ್ವಾಗತಿಸಿದರು.
ಕೇಕ್ ಕಟ್ ಮಾಡಿ ಮಕ್ಕಳಿಗೆ ತಿನ್ನಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
