
ಹೊಸನಗರ: ಇಲ್ಲಿ ಇಡೀ ಅಡಿಕೆ ತೋಟದಲ್ಲಿ ಎಲೆಚುಕ್ಕೆ ರೋಗ ತನ್ನ ರುದ್ರನರ್ತನ ಪ್ರದರ್ಶಿಸಿದೆ. ದಿಕ್ಕು ಕಾಣದ ರೈತನೋರ್ವ ಅಡಿಕೆ ತೋಟವನ್ನೇ ಕಡಿಯುವ ಹಂತಕ್ಕೆ ಮನಸ್ಸು ಮಾಡಿದ್ದಾರೆ. ಆದರೆ ತೋಟ ಕಡಿಸುವುದಕ್ಕು ತನ್ನ ಬಳಿ ಹಣವಿಲ್ಲ ಎಂದು ಅಲವತ್ತು ಕೊಂಡಿದ್ದಾರೆ.

ಹೌದು ಇಡು ನಗರ ಹೋಬಳಿಯ ಚಕ್ರಾನಗರ ಸಮೀಪದ ಎಡತೊಟ್ಲು ವೆಂಕಟಾಚಲ ಭಟ್ ಇವರ ರೋಧನ. ಅಲ್ಲದೇ ಎಡತೊಟ್ಲು ರಮೇಶ ಭಟ್, ಹುಲ್ಲರಿಕೆ ಹರೀಷ್ ಭಟ್ ಸೇರಿದಂತೆ ಈ ಭಾಗದ ಬಹುತೇಕ ಅಡಿಕೆ ತೋಟಗಳು ಎಲೆಚುಕ್ಕೆ ರೋಗದ ಭೀಕರತೆಗೆ ಒಳಗಾಗಿದೆ.
ಎಡತೊಟ್ಲು ವೆಂಕಟಾಚಲಭಟ್ ಇವರ ತೋಟದಲ್ಲಿ 2000ಕ್ಕು ಹೆಚ್ಚು ಅಡಿಕೆ ಮರಗಳಿವೆ. 15 ರಿಂದ 20 ಕ್ವಿಂಟಾಲ್ ಅಡಿಕೆ ಫಸಲು ಸಿಗುತ್ತಿದ್ದ ಸಮೃದ್ಧ ತೋಟ. ಆದರೀಗ ಆ ತೋಟದಲ್ಲಿ ಕಾಣಸಿಗುವುದು ಸುಳಿ ಉದುರಿದ ಬೋಳು ತಲೆಯ ಮರದ ಕಂಬಗಳೇ ಹೆಚ್ಚು. ತೋಟಗಾರಿಕೆ ಇಲಾಖೆ, ವಿಜ್ಞಾನಿಗಳು, ತಜ್ಞರು ಹೇಳಿದ ಎಲ್ಲಾ ಕ್ರಮಗಳನ್ನು ಅನುಸರಿಸಿದ್ದಾರೆ. ಆದರೆ ತೋಟ ಮಾತ್ರ ಮೇಲೇಳದೇ ಸತ್ತು ಹೋಗುತ್ತಿರುವುದು ಕರಳು ಹಿಚುಕುವಂತಾಗಿದೆ.

ಪ್ರಾಯೋಗಿಕ ಅಡಿಕೆ ತೋಟ:
ಕಳೆದ ವರ್ಷವೇ ಭೀಕರ ಎಲೆಚುಕ್ಕೆ ರೋಗಕ್ಕೆ ತುತ್ತಾಗಿದ್ದ ಈ ಅಡಿಕೆ ತೋಟದ ಕುರಿತು ವಿಸ್ತೃತ ಸುದ್ದಿ ಪ್ರಕಟವಾಗಿತ್ತು. ಇದರ ಪರಿಣಾಮ ಗೃಹ ಸಚಿವ ಆರಗ ಜ್ಞಾನೇಂದ್ರ, ನವಿಲೆ ತೋಟಗಾರಿಕಾ ವಿವಿ ವಿಜ್ಞಾನಿಗಳ ತಂಡ ಮತ್ತು ತೋಟಗಾರಿಕಾ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತ್ತು.
50 ಮರಗಳ ಆಯ್ಕೆ:
ಎಲೆಚುಕ್ಕೆ ರೋಗ ಭೀಕರತೆಗೆ ಒಳಗಾದ 50 ಮರಗಳನ್ನು ಗುರುತಿಸಿದ ನವಿಲೆ ವಿವಿ ರೋಗ ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಪ್ರಾಯೋಗಿಕವಾಗಿ ತೆಗೆದುಕೊಂಡಿತ್ತು. ಅದರಂತೆ ನಿರ್ವಹಣೆಯ ಕೆಲಸವನ್ನು ಕೂಡ ನಡೆಸಿತ್ತು. ಆದರೆ ಒಂದು ವರ್ಷದ ನಂತರ ಅದರ ಪಲಿತಾಂಶ ಶೂನ್ಯ ಸಾಧನೆ. ಎಲೆಚುಕ್ಕೆ ರೋಗದ ಮುಂದೆ ಯಾವುದೇ ಮಾರ್ಗೋಪಾಯಗಳು ಇಲ್ಲಿ ಕೆಲಸ ಮಾಡಿಲ್ಲ. ಬದಲಿಗೆ ಇನ್ನಷ್ಟು ಭೀಕರತೆಯನ್ನು ಸೃಷ್ಟಿಸಿದೆ.
ಮುಂದೇನು?
ಈಗಾಗಲೇ ಅಡಿಕೆ ಬೆಳೆಗಾರ ವೆಂಕಟಾಚಲ ಭಟ್ ವಿಜ್ಞಾನಿಗಳು, ಅಧಿಕಾರಿಗಳು ಪ್ರಾಯೋಗಿಕವಾಗಿ ತೆಗೆದುಕೊಂಡ 50 ಮರಗಳಂತೆ ಉಳಿದ ಮರಗಳಿಗೂ ರೋಗದ ನಿರ್ವಹಣಾ ಕ್ರಮ ಕೈಗೊಂಡಿದ್ದಾರೆ. ಆದರೆ ಬಹುತೇಕ ಮರಗಳು ರೋಗಕ್ಕೆ ತುತ್ತಾಗಿ ಕೊನೆದಿನಗಳನ್ನು ಎದುರಿಸುವಂತಾಗಿದೆ. ಹೀಗಾಗಿ ದಿಕ್ಕು ತೋಚದೇ ಹತಾಶರಾಗಿ ಇಡೀ ಅಡಿಕೆ ತೋಟವನ್ನೇ ಕಡಿದು ಹಾಕುವ ಮಾತುಗಳನ್ನಾಡುತ್ತಿದ್ದಾರೆ.
ತೇವಾಂಶ ಕಾರಣವಲ್ಲ:
ಅತೀಯಾದ ತೇವಾಂಶದಿAದ ಎಲೆಚುಕ್ಕೆ ರೋಗ ಬಾಧಿಸುತ್ತಿದೆ ಎಂದು ಇಂದಿಗೂ ವಿಜ್ಞಾನಿಗಳು, ತಜ್ಞರು, ಅಧಿಕಾರಿಗಳು ಹೇಳುತ್ತಿದ್ದಾರೆ. ಅದರಂತೆ ಸಲಹೆ ನೀಡಿ ನಿರ್ವಹಣೆ ಮಾಡುವಂತೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುತ್ತಿದ್ದಾರೆ. ಆದರೆ ರೋಗದ ಬಾಧೆ ಉಲ್ಭಣವಾಗುತ್ತಿದೆ ಹೊರತು ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಇದು ತೇವಾಂಶ ಕಾರಣವಲ್ಲ ಎಂಬ ಅಭಿಪ್ರಾಯಕ್ಕೆ ಬರುತ್ತಿದ್ದಾರೆ. ಈಬಗ್ಗೆ ರೋಗದ ಲಕ್ಷಣ ತಿಳಿಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆಕ್ರೋಶ ಕೂಡ ಕೇಳಿ ಬಂದಿದೆ.
ಕಡಿಯುವುದು ಬಿಟ್ಟರೆ ಬೇರೆ ಗತಿ ಇಲ್ಲ:
ಕಳೆದ ವರ್ಷವೇ ಅಡಿಕೆ ತೋಟ ರೋಗದ ಬಾಧೆಗೆ ತುತ್ತಾಗಿತ್ತು. ಬಳಿಕ ಬಂದ ಅಧಿಕಾರಿಗಳು, ವಿಜ್ಞಾನಿಗಳು 50 ಮರಗಳನ್ನು ಪ್ರಾಯೋಗಿಕವಾಗಿ ಗುರುತಿಸಿ ರೋಗದ ನಿರ್ವಹಣೆಗೆ ಮುಂದಾಗಿತ್ತು. ಅದರಂತೆ ಉಳಿದ ಮರಗಳಿಗೂ 2 ಲಕ್ಷ ಸಾಲ ಮಾಡಿ ನಿರ್ವಹಣೆ ಮಾಡಿದ್ದೇನೆ. ಆದರೆ ಇದೀಗ ಅಡಿಕೆ ತೋಟ ಸಂಪೂರ್ಣ ಅಳಿವಿನ ಅಂಚಿಗೆ ಬಂದಿದೆ. ಅಡಿಕೆ ಮರಗಳನ್ನು ಕಡಿಸಿ ಉರುವಲಿಗೆ ಬಳಸಬಹುದು. ಬೇರೆನು ದಾರಿಯಿಲ್ಲ
ವೆಂಕಟಾಚಲ ಭಟ್, ಅಡಿಕೆ ಬೆಳೆಗಾರ
VIDEO REPORT | ಎಡತೊಟ್ಲು ರೈತನ ಅಸಹಾಯಕತೆಯ ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ



ಛೇ….