
ಯಕ್ಷಗಾನ ಹಣಕ್ಕಾಗಿ ಕಲೆಯಲ್ಲ- ಕಲೆಗಾಗಿ ಬದುಕು : ಆರಗ ಜ್ಞಾನೇಂದ್ರ
ಹೊಸನಗರ: ಅತ್ಯಂತ ಬಡತನ ಇದ್ದಾಗಲೂ ಕನ್ನಡದ ಕಲೆಯೊಂದನ್ನು ವಿಶ್ವಕ್ಕೆ ಪರಿಚಯಿಸಿರುವ ಹಿರಿಮೆ ಯಾರಿಗಾದರೂ ಇದ್ದರೆ ಅದು ಯಕ್ಷಗಾನ ಕಲಾವಿದರಿಗೆ ಮಾತ್ರ ಎಂದು ಮಾಜಿ ಗೃಹ ಸಚಿವರು, ಹಾಲಿ ತೀರ್ಥಹಳ್ಳಿ ಶಾಸಕರೂ ಆದ ಆರಗ ಜ್ಞಾನೇಂದ್ರ ಹೇಳಿದರು.


ಹೊಸನಗರ ಯಕ್ಷ ಸಂಗಮ ಬಳಗದಿಂದ ಇಲ್ಲಿನ ಶಿವಪ್ರಕಾಶ್ ಸಭಾಂಗಣದಲ್ಲಿ ಭಾನುವಾರ ಮುಸ್ಸಂಜೆಯ ವೇಳೆ ಏರ್ಪಡಿಸಿದ್ದ ಯಕ್ಷ ವೈಭವ ಕರ‍್ಯಕ್ರಮವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಹಣಕ್ಕಾಗಿ ಕಲೆಯಲ್ಲ ಬದಲಾಗಿ ಕಲೆಗಾಗಿ ಬದುಕು ಎನ್ನುವುದನ್ನು ಕೂಡ ತೋರಿಸಿಕೊಟ್ಟ ಕೀರ್ತಿ ಇದ್ದರೆ ಅದು ಯಕ್ಷಗಾನದಂತಹ ಕಲೆಯಲ್ಲಿ ಮಾತ್ರ. ಸಿನಿಮಾಕ್ಕೂ ಆಶು ಕಲೆಯಾಗಿರುವ ಯಕ್ಷಗಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಲಾವಿದನ ಶ್ರೇಷ್ಠತೆ ತಿಳಿಯುವುದು ಇಂತಹ ಕಲೆಯಲ್ಲಿ ಮಾತ್ರ ಎಂದ ಅವರು, ಇಂದಿಗೂ ಎಲ್ಲ ಯಕ್ಷ ಕಲಾವಿದರ ಜೀವನ ಸಂತೋಷವಾಗಿಲ್ಲ ಆದರೆ ರಂಗದಲ್ಲಿ ನಮಗೆ ಸಂತೋಷ ನೀಡುತ್ತಿದ್ದಾರೆ ಮತ್ತು ಇಂದಿಗೂ ಶುದ್ದ ಕನ್ನಡದ ಏಕೈಕ ಕಲೆಯಾಗಿ ಯಕ್ಷಗಾನ ಉಳಿದು ಬಂದಿದೆ ಎಂದರು.
ಬಡಗುತಿಟ್ಟಿನ ಖ್ಯಾತ ಭಾಗವತ ರಾಘವೇಂದ್ರ ಜನ್ಸಾಲೆ, ಯಕ್ಷ ಸಂಗಮ ಬಳಗದ ನಾಗರಾಜ್ ಕುಸುಗುಂಡಿ, ರಾಜಶ್ರೀ ಕಾರಣಗಿರಿ, ಸತೀಶ್ ರಿಪ್ಪನಪೇಟೆ, ಗಾಯಕ ಸುರೇಶ್ ಮತ್ತಿತರರು ಇದ್ದರು. ನಂತರ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕಣಾರ್ಜುನ ಕಾಳಗ ಮತ್ತು ಶಶಿಪ್ರಭೆ ಪ್ರಸಂಗದ ಪ್ರದರ್ಶನ ನಡೆಯಿತು.
