
ಬಿದನೂರು| ಕಗ್ಗೋಡಿ ಬ್ಯಾಣದಲ್ಲಿ ಪತ್ತೆಯಾದ ನವಶಿಲಾಯುಗ ಕಾಲದ ಡೋಲೆರೈಟ್ ಕಲ್ಲಿನ ಉಂಗುರ!
ಹೊಸನಗರ: ತಾಲ್ಲೂಕಿನ ನಿಲಸಕಲ್, ಬೈಸೆ, ಮುಂಬಾರು, ಮೇಲುಸುಂಕ ಮತ್ತು ದಿಬ್ಬಣಗಲ್ಲು ಆದಿಮಾನವನ ನೆಲೆಗಾಳಾಗಿರುವ ಬಗ್ಗೆ ಈಗಾಗಲೆ ಸಾಕಷ್ಟು ಸಂಶೋಧನೆಗಳು ನಡೆದು ಹೋಗಿವೆ. ಇವುಗಳ ಮಧ್ಯದಲ್ಲಿ ನವಶಿಲಾಯುಗ ಕಾಲದ ಬೆಲೆ ಕಟ್ಟಲಾದ ಅತ್ಯಂತ ಅಮೂಲ್ಯವಾದ ಡೋಲೆರೈಟ್ ಕಲ್ಲಿನ ಉಂಗುರವು ಕಲಾವತಿ ಮತ್ತು ಇಳಾವತಿ ಹೊಳೆಗಳ ಸಂಗಮ ಕ್ಷೇತ್ರದಲ್ಲಿ ಇರುವ ಕಗ್ಗೋಡಿ ಬ್ಯಾಣದಲ್ಲಿ ಇತಿಹಾಸ ಸಂಶೋಧಕ ಅಜಯಕುಮಾರ ಶರ್ಮಾ ಪತ್ತೆ ಹಚ್ಚಿದ್ದಾರೆ.
ಉಂಗುರಗಲ್ಲು ದೊರೆತ ಸ್ಥಳವು ಬಿದನೂರು ನಗರದಿಂದ ಸರಿಸುಮಾರು 4 ಕಿಲೋಮೀಟರ್ ದೂರದಲ್ಲಿದೆ. ಈ ಭಾಗದಲ್ಲಿ 6000 ವರ್ಷಗಳಷ್ಟು ಹಳೆಯದಾದ ಈ ಕಲ್ಲಿನ ಉಂಗುರ ಪತ್ತೆಯಾಗಿರುವುದು, ಕಗ್ಗೋಡಿ ಬ್ಯಾಣ ಪ್ರದೇಶದಲ್ಲಿ ನವಶಿಲಾಯುಗದ ಜನವಸತಿ ಇತ್ತು ಎನ್ನಲು ಜೀವಂತ ಸಾಕ್ಷಿಯಾಗಿದೆ. ಕಗ್ಗೋಡಿ ಪದದ ಅರ್ಥ ದೊಡ್ಡ ಗೋಡೆ, ಇದು ಕೆಳದಿ ಅರಸರ ರಾಜಧಾನಿ ಬಿದನೂರು ನಗರದ ಪ್ರಮುಖ ಸುರಕ್ಷತಾ ಕವಚ ಆಗಿತ್ತು ಎಂದು ತಿಳಿಸಿದ್ದಾರೆ.


ನವಶಿಲಾಯುಗದ ಅವಧಿಯು ನೆಲೆಗೊಂಡ ಮಾನವ ಜೀವನಶೈಲಿಯ ಆರಂಭದಿಂದ ನಿರೂಪಿಸಲ್ಪಟ್ಟಿದೆ. ಜನರು ಕೇವಲ ಬೇಟೆ ಮತ್ತು ಸಂಗ್ರಹಣೆಯ ಮೇಲೆ ಅವಲಂಬಿತರಾಗುವುದಕ್ಕಿಂತ ಹೆಚ್ಚಾಗಿ ಸಸ್ಯಗಳನ್ನು ಬೆಳೆಸಲು ಮತ್ತು ಆಹಾರಕ್ಕಾಗಿ ಪ್ರಾಣಿಗಳನ್ನು ಸಾಕಲು ಕಲಿಯುತ್ತಾರೆ. ಇದು ಹೆಚ್ಚು ಅತ್ಯಾಧುನಿಕ ಕಲ್ಲಿನ ಉಪಕರಣಗಳ ಬಳಕೆಗೆ ಹೊಂದಿಕೆಯಾಗಿದ್ದು, ಇದು ಕೃಷಿ ಮತ್ತು ಪ್ರಾಣಿಗಳ ಹಿಂಡಿಗೆ ಉಪಯುಕ್ತವಾಗಿತ್ತು. ದಕ್ಷಿಣ ಭಾರತದಲ್ಲಿ, ಈ ಅವಧಿಯು ಸರಿಸುಮಾರು 6000 BCE (ಸಾಮಾನ್ಯ ಯುಗದ ಮೊದಲು) ಯಲ್ಲಿ ಪ್ರಾರಂಭವಾಗಿ 1500 BCE ವರೆಗೆ ನಡೆದಿರುವುದು ಅಧ್ಯಯನದಿಂದ ಕಂಡುಬಂದಿದೆ.
ಕಬ್ಬಿಣದ ಆವಿಷ್ಕಾರಕ್ಕೂ ಮೊದಲು ತಯಾರಿಸಲಾದ ಈ ಕಲ್ಲಿನ ಉಂಗುರವನ್ನು ಅಗೆಯಲು ಮತ್ತು ಬಲೆಗಳನ್ನು ನೀರಿನಲ್ಲಿ ಮುಳುಗಿಸಲು ಒಂದು ತೂಕವಾಗಿ, ಮತ್ತು ಮಣಿಗಳಿಗೆ ಹೊಳಪು ಕೊಡಲು ಆಧಾರವಾಗಿ ಇದನ್ನು ಬಳಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಸ್ಥಳೀಯರಾದ ಶ್ರೀಮತಿ ರಾಜಶ್ರೀ ರಾವ್, ಗೋಪಾಲ್ ಇದ್ದರು.











