
ಹೊಸನಗರ.ಜು.29: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿಸುವುದು ದೊಡ್ಡ ಕೆಲಸವಲ್ಲ. ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಪ್ರತಿಭಾವಂತರನ್ನಾಗಿ ಮಾಡುವುದು ಶಿಕ್ಷಕರ ಜವಾಬ್ದಾರಿ ಎಂದು ಶಾಸಕ ಹರತಾಳು ಹಾಲಪ್ಪ ಅಭಿಪ್ರಾಯಿಸಿದರು.
ನಿಟ್ಟೂರು ಗ್ರಾಪಂ ವ್ಯಾಪ್ತಿಯ ಹೊಸನಾಡು ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ, ಹಳ್ಳಿಗಾಡಿನಲ್ಲಿ ಶಿಕ್ಷಣ ಪಡೆಯುವವರು ಸಾಮಾನ್ಯ ವಿದ್ಯಾರ್ಥಿಗಳು ಅವರನ್ನು ಅಸಾಮಾನ್ಯರಾಗಿ ರೂಪಿಸಿ ಎಂದರು.
ಮಕ್ಕಳ ಕಲಿಕೆ ಉತ್ತಮ ವಾಗಿಸಲು ಅವರ ಬದುಕಿನ ಮೇಲೆ ಬೆಳಕು ಚೆಲ್ಲಬೇಕು. ವಿದ್ಯಾರ್ಥಿಗಳ ಮನೆಯಲ್ಲಿ ಶೌಚಾಲವಿದೆಯೇ, ವಿದ್ಯುತ್ ದೀಪ ಹೀಗೆ ಸೌಲಭ್ಯಗಳ ಬಗ್ಗೆ ಗಮನ ಹರಿಸಬೇಕು. ಆ ಸೌಲಭ್ಯಗಳು ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳ ಕಲಿಕೆ ಸುಲಭವಾಗುವುದಿಲ್ಲ. ಮತ್ತು ಅವರ ಪೋಷಕರನ್ನು ಜಾಗೃತಿ ಮೂಡಿಸಬೇಕಾದ ಕೆಲಸ ಮಾಡಬೇಕು ಎಂದರು.


ಈ ವೇಳೆ ಈ ಭಾಗದಲ್ಲಿ ಸೂಕ್ತ ಹಾಸ್ಟೆಲ್ ಸೌಲಭ್ಯ ಇದ್ದರೆ ಮಕ್ಕಳ ಸಂಖ್ಯೆ ಹೆಚ್ಚಳವಾಗುತ್ತದೆ ಎಂದು ಸ್ಥಳೀಯರು ಗಮನಸೆಳೆದಾಗ, ಮಕ್ಕಳು ಹೆಚ್ಚು ಇದ್ದು, ಅವರ ಕಲಿಕೆಗೆ ವಸತಿ, ಊಟ, ಸಂಪರ್ಕ ಸಮಸ್ಯೆಗಳಿದ್ದಾಗ ಮಾತ್ರ ಹಾಸ್ಟೆಲ್ ಸೌಲಭ್ಯ ಕೇಳಬಹುದೇ ಹೊರತು, ಮಕ್ಕಳ ಸಂಖ್ಯೆ ಹೆಚ್ಚಿಸುವುದಕ್ಕಾಗಿ ಹಾಸ್ಟೆಲ್ ಕೇಳುವುದು ಸರಿಯಲ್ಲ. ಮತ್ತು ಆರೀತಿ ಮಾಡಲು ಬರುವುದಿಲ್ಲ ಎಂದರು.
ಕಳೆದ ಬಾರಿ ಕೇವಲ 14 ವಿದ್ಯಾರ್ಥಿಗಳನ್ನು ಹೊಂದಿದ್ದು ಶೇ.80 ಪಲಿತಾಂಶ ದಾಖಲಿಸುವುದು ದೊಡ್ಡದಲ್ಲ. ಶೇ.100 ಪಲಿತಾಂಶ ಬರಬೇಕು. ಈವರ್ಷ ಆ ಸಾಧನೆ ಮಾಡಿ ಮುಂದೆ ನಿಮ್ಮ ಎಲ್ಲಾ ಬೇಡಿಕೆಗೂ ನಾನಿರುತ್ತೇನೆ ಎಂದು ಭರವಸೆ ನೀಡಿದರು.
ಹೊಸನಾಡಿನಲ್ಲಿ ನಿರ್ಮಾಣ ಮಾಡಿರುವ ಕಟ್ಟಡ ನಿರ್ಮಾಣ ಮಾದರಿ ಸರಿಯಲ್ಲ. ರೈಲು ಬೋಗಿಯಂತೆ ಕಟ್ಟಲಾಗಿದೆ. 5 ವರ್ಷ ಕಳೆದರೂ ಸೋರಲು ಆರಂಭಿಸುತ್ತದೆ. ಅದೇ ಮೇಲೆ ಕೆಳಗೆ ಸೇರಿ ನಿರ್ಮಾಣ ಮಾಡಿದ್ದರೆ 50 ವರ್ಷ ಯಾವುದೇ ಸಮಸ್ಯೆ ಇರಲಿಲ್ಲ. ಇಂತಹ ವಿಚಾರಗಳ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಗಮನಹರಿಸಬೇಕು ಎಂದರು.
ಈ ವೇಳೆ ಬಿಇಒ ಕೃಷ್ಣಮೂರ್ತಿ, ಗುತ್ತಿಗೆದಾರ ಪ್ರಭಾಕರ ಆಚಾರ್ ಸಂಪೇಕಟ್ಟೆ ಇವರನ್ನು ಸನ್ಮಾನಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಸಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಅಧ್ಯಕ್ಷೆ ವಿನೋದ ಗುರುಮೂರ್ತಿ, ಸದಸ್ಯರಾದ ಬಿ.ಜಿ.ಮಂಜಪ್ಪ, ಎಂ.ರಾಘವೇಂದ್ರ, ಯಶೋಧ ಯೋಗೇಂದ್ರ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು, ಸ್ಥಳೀಯ ಪ್ರಮುಖರು ಇದ್ದರು.
