
-
ವಕೀಲರ ರಕ್ಷಣಾ ಕಾಯಿದೆ ತುರ್ತು ಜಾರಿಗೆ ತನ್ನಿ : ವಕೀಲರ ಸಂಘದ ಅಧ್ಯಕ್ಷ ವಾಲೆಮನೆ ಶಿವಕುಮಾರ್ |
ಹೊಸನಗರದಲ್ಲಿ ವಕೀಲರ ಪ್ರತಿಭಟನೆ
ಹೊಸನಗರ: ವಕೀಲರ ಜೀವದ ರಕ್ಷಣೆ ಸಲುವಾಗಿ ವಕೀಲರ ರಕ್ಷಣಾ ಕಾಯಿದೆಯನ್ನು ಕೂಡಲೇ ಜಾರಿಗೆ ತರುವಂತೆ ವಕೀಲರ ಸಂಘದ ಅಧ್ಯಕ್ಷ ವಾಲೆಮನೆ ಶಿವಕುಮಾರ್ ಆಗ್ರಹಿಸಿದರು.
ಗುಲ್ಬರ್ಗದಲ್ಲಿ ವಕೀಲ ಈರಣ್ಣಗೌಡರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದನ್ನು ಖಂಡಿಸಿ ಪಟ್ಟಣದ ನ್ಯಾಯಾಲಯದ ಎದುರು ಪ್ರತಿಭಟನೆ ನಡೆಸಿ ಮಾತನಾಡಿದರು.


ಈರಣ್ಣಗೌಡ ಕರ್ತವ್ಯ ಹಾಜರಾಗುವ ಹೊತ್ತಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವುದು ಖಂಡನೀಯ. ವಕೀಲರ ಜೀವಕ್ಕೆ ರಕ್ಷಣೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಅಡಿಯಲ್ಲಿ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದರು. ಸರ್ಕಾರ ಕೂಡಲೇ ವಕೀಲರ ರಕ್ಷಣಾ ಕಾಯಿದೆಯನ್ನು ಜಾರಿಗೆ ತರುವಂತೆ ವಕೀಲರು ಒತ್ತಾಯಿಸಿದರು.
ಕಾರ್ಯದರ್ಶಿ ಚಂದ್ರಪ್ಪ, ವಕೀಲರಾದ ಷಣ್ಮುಖಪ್ಪ, ಮಹಾದೇವಪ್ಪ, ಕೆ.ಬಿ.ಪ್ರಶಾಂತ್, ಹಿರಿಯಪ್ಪ, ವಿಜಯ, ಮಹೇಶ್, ಗುರುಕಿರಣ್, ಬಸವರಾಜು, ವಿನಾಯಕ, ಸವಿತಾ, ಈರಪ್ಪ, ರವೀಂದ್ರ, ಕರುಣಾಕರ್, ಮೋಹನಶೆಟ್ಟಿ, ಲೋಕೇಶ್, ಮುಕುಂದ ಚಂದ್ರ ಇದ್ದರು.
