
-
ಭಾರತ ಎಂದರೆ ಭಾವ..ರಾಗ..ತಾಳಗಳ ಸಂಗಮ |
ಎಲ್ಲ ವರ್ಗಗಳ ಮಿಳಿತದೊಂದಿಗೆ ಶರಣ ಸಾಹಿತ್ಯ ಪರಿಷತ್ ಕಟ್ಟಬೇಕಿದೆ|
ಸಮ್ಮೇಳನದ ಸಮಾರೋಪದ ನುಡಿಯಲ್ಲಿ ಮೂಲಗದ್ದೆ ಶ್ರೀ ಅಭಿಮತ
ಹೊಸನಗರ: ಶರಣ ಸಾಹಿತ್ಯ ಪರಿಷತ್ತು, ಸಮ್ಮೇಳನಗಳು ಕೇವಲ ಒಂದು ವರ್ಗ, ಜಾತಿಗೆ ಸೀಮಿತವಾಗದೇ ಎಲ್ಲಾ ವರ್ಗಗಳ ಮಿಳಿತದೊಂದಿಗೆ ಕಟ್ಟಬೇಕಿದೆ ಎಂದು ಮೂಲಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಅಭಿಪ್ರಾಯಿಸಿದರು.
6ನೇ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಸಮಾರೋಪ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಸಮಾರೋಪ ಭಾಷಣ ಮಾಡಿ, ಶರಣ ಸಾಹಿತ್ಯ ಪರಿಷತ್ತು ಎಂದರೆ ಬಸವಣ್ಣ ವಿಚಾರ ಧಾರೆಗಳ ಸಂಗಮ ಎಂದರು.
ಶರಣ ಸಾಹಿತ್ಯ ಪರಿಷತ್ತು ಬಸವಣ್ಣನ ಅನುಭವ ಮಂಟಪದಂತಿರಬೇಕು. ಕೇವಲ ಬಸವಣ್ಣನವರ ವಚನ ಹೇಳುವುದಕ್ಕೆ ಸೀಮಿತವಾಗದೇ ಪ್ರತಿ ಕಾರ್ಯಕ್ರಮದಲ್ಲಿ ಅದು ಅನುಷ್ಠಾನಗೊಳ್ಳಬೇಕಿದೆ ಎಂದರು.
ಇಂದು ಜಾತಿಗೊಂದು ಮಠ, ಪೀಠ ಆಗುತ್ತಾ ವ್ಯವಸ್ಥೆ ಹಾಳಾಗುತ್ತಿದೆ. ಭಾರತ ಎಂದರೆ ಭಾವ, ರಾಗ, ತಾಳಗಳ ಸಂಗಮ. ಜಾತಿ ಮತ ಧರ್ಮ ಮೀರಿದ ಸಾಮರಸ್ಯ ಹೊರಹೊಮ್ಮಬೇಕು. ಎಲ್ಲವೂ ಹಿತ ಮಿತವಾಗಿದ್ದರೆ ಚೆನ್ನ ಎಂದರು.
ಸಮ್ಮೇಳನಾಧ್ಯಕ್ಷ ಅಂಬ್ರಯ್ಯಮಠ ವಿಶೇಷ ಸಾಹಿತಿ, 12 ಶತಮಾನದ ಘಟನೆಗಳು ಸೇರಿದಂತೆ ಇತಿಹಾಸ ಅನೇಕ ಮಜಲುಗಳನ್ನು ತಮ್ಮ ಕೃತಿಗಳಲ್ಲಿ ಪ್ರಕಟಗೊಳಿಸಿದ್ದಾರೆ. ಅಂತಹ ಸಾಹಿತಿಗೆ ಜಿಲ್ಲಾ ಸಮ್ಮೇಳನಾಧ್ಯಕ್ಷ ಗೌರವ ಸಂದಿರುವುದು ಮಲೆನಾಡಿಗೆ ಹೆಮ್ಮೆ ತಂದಂತಾಗಿದೆ ಎಂದರು.


ಈ ವೇಳೆ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಿದ ಜಿಲ್ಲಾ, ತಾಲೂಕು ಘಟಕದ ಪ್ರತಿನಿಧಿಗಳು, ವಿವಿಧ ಸಾಧಕರನ್ನು ಗೌರವಿಸಲಾಯಿತು. ಕೊನೆಯಲ್ಲಿ ಸಮ್ಮೇಳನಾಧ್ಯಕ್ಷ ಅಂಬ್ರಯ್ಯಮಠರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್.ಮಹಾರುದ್ರ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ಪ್ರಕಾಶ ಬಾರಂದೂರು, ತಾಲೂಕು ಘಟಕದ ಅಧ್ಯಕ್ಷ ಡಿ.ವಿ.ರೇವಣಪ್ಪಗೌಡ, ಕಾರ್ಯದರ್ಶಿ ಹ.ರು.ಗಂಗಾಧರಯ್ಯ, ಕುವೆಂಪು ವಿದ್ಯಾಶಾಲೆಯ ಸಂಸ್ಥಾಪಕ ಬಿ.ಶ್ರೀನಿವಾಸ ಸೊನಲೆ, ಯುವ ಘಟಕದ ಅಧ್ಯಕ್ಷ ಶಿವಯೋಗಿ ಹಂಚಿನಮನೆ, ಪ್ರಮುಖರಾದ ಡಾ.ಬಿ.ಡಿ.ಭೂಕಾಂತ್, ಕಲ್ಯಾಣಪ್ಪ ಗೌಡ, ಚನ್ನಬಸಪ್ಪಗೌಡ, ಎ.ವಿ.ಮಲ್ಲಿಕಾರ್ಜುನ್, ಪರಿಷತ್ ಪ್ರತಿನಿಧಿಗಳು ಇದ್ದರು.
ಸಮ್ಮೇಳನದಲ್ಲಿ ಮಲೆನಾಡು ಶರಣ ಪರಂಪರೆ, ಸಮ್ಮೇಳನಾಧ್ಯಕ್ಷರ ಬದುಕು ಬರಹ, ಅಕ್ಕಮಹಾದೇವಿ ಸಂದೇಶಸಾರ, ಮಲೆನಾಡ ಕಾಯಕ ಪರಂಪರೆ, ಮಲೆನಾಡಿನ ವೈಚಾರಿಕ ಸಾಹಿತ್ಯದಲ್ಲಿ ವಚನಗಳ ಪ್ರಭಾವ ಕುರಿತ ವಿಚಾರ ಗೋಷ್ಠಿ ನಡೆಯಿತು
