
ಹೊಸನಗರ: ಹೊಸನಗರ ತಾಲ್ಲೂಕು ಪರಿಸರ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದ್ದು, ಸುಸ್ಥಿರ ಅಭಿವೃದ್ಧಿಯ ಕುರಿತು ಚಿಂತನೆ ಸ್ವಾಗತರ‍್ಹವಾಗಿದೆ. ಯಾವುದೇ ಸಾಧನೆ ಮಾಡಬೇಕಾದರೆ ಗುರಿ ಮತ್ತು ಯೋಜನೆ ಮುಖ್ಯ ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟೊತ್ಥಾನ ಬಳಗದ ಆಶ್ರಯದಲ್ಲಿ ‘ವಿಷನ್ ಹೊಸನಗರ 2025’ ಹೆಸರಿನಲ್ಲಿ ಹೊಸನಗರ ತಾಲ್ಲೂಕಿನ ಸುಸ್ಥಿರ ಅಭಿವೃದ್ಧಿ ಕುರಿತ ಚಿಂತನೆಗೋಷ್ಠಿ ಉದ್ಘಾಟಸಿ ಅವರು ಮಾತನಾಡುತ್ತಿದ್ದರು.
ಹೊಸನಗರ ತಾಲ್ಲೂಕು ಮುಳುಗಡೆಯಿಂದಾಗಿ ಅನೇಕ ನಷ್ಟ ಅನುಭವಿಸಿದ್ದು ಹಲವು ಸಮಸ್ಯೆ ಇದ್ದು ಅದರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನಾವೂ ಕೂಡ ಪರಿಸರ ಪ್ರಿಯರೇ. ಪರಿಸರ ನಾಶದ ಪರ ನಾನಿಲ್ಲ. ಜನರಿಂದಲೇ ಅರಣ್ಯ ಉಳಿದಿದೆ ಎಂಬ ವಾಸ್ತವ ನೆಲೆಗಟ್ಟಿನ ಮೇಲೆ ಕಸ್ತೂರಿರಂಗನ್ ವರದಿಗೆ ವಿರೋಧ ವ್ಯಕ್ತಪಡಿಸುತ್ತಿರುವುದಾಗಿ ಹೇಳಿದರು.
ಸಹಿ ಹಾಕಿದ ಪರಿಣಾಮ:
ಭೂತಾನ್‌ನಿಂದ ಅಡಿಕೆ ಆಮದಿನ ವಿಚಾರ ಪ್ರಸ್ತಾಪಿಸಿ ಚೈನಾವನ್ನು ಎದುರಿಸಲು ಭೂತಾನ್‌ನೊಂದಿಗೆ ಸ್ನೇಹ ಅಗತ್ಯವಿದ್ದು ಈ ಹಿಂದೆ ಅಂತರ ರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ ಆಮದಿಗೆ ಅನುಮತಿ ನೀಡಲಾಗಿದೆ. ಅದರಿಂದ ತುಂಬಾ ಹಾನಿಯೇನು ಆಗದಿದ್ದರೂ ಅದರ ನಿರ್ಬಂಧಕ್ಕೆ ಏನು ಮಾಡಬೇಕೆಂಬ ವಿಚಾರವಾಗಿ ಕೇಂದ್ರ ಸರ‍್ಕಾರದ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಆತಂಕ ಬೇಡ:
ಎಲೆಚುಕ್ಕಿ ರೋಗದ ವಿಚಾರ ರೈತರು ದೃತಿಗೆಡುವ ಅವಶ್ಯಕತೆ ಇಲ್ಲ. ಯಾವುದೇ ಕಾರಣಕ್ಕೂ ಆತಂಕ ಬೇಡ. ಯಾವುದೇ ಸಮಸ್ಯೆ ಬಂದರೂ ಬೆಳೆಗಾರರ ಜೊತೆ ನಾನಿದ್ದೇನೆ ಎಂದು ತಿಳಿಸಿದರು.
ಅಭಿವೃದ್ಧಿಗೆ ಗಮನ:
ಶಾಸಕ ಎಚ್. ಹಾಲಪ್ಪ ಹರತಾಳು ಮಾತನಾಡಿ, ತಾಲ್ಲೂಕು ಮುಂದಿನ ದಿನಗಳಲ್ಲಿ ಭಾರೀ ಅಭಿವೃದ್ಧಿ ಆಗಲಿದೆ. ಪರಿಸರ ಹಾನಿ ಆಗದ ರೀತಿಯಲ್ಲಿ ಎಚ್ಚರ ಅಗತ್ಯ. ತಾಲ್ಲೂಕು ನೈಸರ್ಗಿಕ ಸಂಪನ್ಮೂಲ ಹೊಂದಿದ್ದರೂ ಸಮಸ್ಯೆಗಳನ್ನು ಹೊಂದಿದೆ. ಇದರ ಪರಿಹಾರಕ್ಕೆ ಪ್ರಯತ್ನ ನಡೆಯುತ್ತಿದೆ. ಸುಸ್ಥಿರ ಅಭಿವೃದ್ಧಿಯ ಚಿಂತನೆಗಳನ್ನು ಇಲ್ಲಿನ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ಕ್ಷೇತ್ರ ಕಳೆದುಕೊಂಡು ಅನಾಥ:
ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಹೊಸನಗರ ಕ್ಷೇತ್ರವನ್ನು ಕಳೆದುಕೊಂಡು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿರುವುದರಿಂದ ಒಂದಿಷ್ಟು ಅನಾಥ ಪ್ರಜ್ಞೆ ಕಾಡುತ್ತಿದೆ. ಮತ್ತೆ ಹೊಸನಗರ ವಿಧಾನಸಭಾ ಕ್ಷೇತ್ರ ಮಾಡುವುದರಿಂದ ಅನೇಕ ಸಮಸ್ಯೆ ಪರಿಹರಿಸಬಹುದು ಎಂದರು.
ಹೊಸನಗರ ತಾಲ್ಲೂಕಿನ ಈಗಿನ ಪರಿಸ್ಥಿತಿಯ ಅವಲೋಕನ ಮತ್ತು ಮುಂದಕ್ಕೆ 2025ಕ್ಕೆ ಏನಾಗಬೇಕೆಂಬ ಬಗ್ಗೆ ಅಭಿಪ್ರಾಯ ಮಂಡನೆಯಾಯಿತು. ಶಿಕ್ಷಣದ ಕುರಿತು ಗಣೇಶ ಐತಾಳ್, ಆರೋಗ್ಯದ ಕುರಿತು ಬಿ ಎಸ್ ಸುರೇಶ್, ಕೃಷಿಯ ಕುರಿತು ವಡ್ಡಿನಬೈಲ್ ಸುಬ್ರಮಣ್ಯ, ಸಾಂಸ್ಕೃತಿಕ ವಿಭಾಗದ ಕುರಿತು ಸೊನಲೆ ಶ್ರೀನಿವಾಸ, ಪರಿಸರದ ಕುರಿತು ಚಕ್ರವಾಕ ಸುಬ್ರಮಣ್ಯ, ಕಂದಾಯ ಇಲಾಖೆ ಸಮಸ್ಯೆ ಕುರಿತು ಎಲ್. ವೆಂಕಟೇಶ್, ಪ್ರವಾಸೋದ್ಯಮದ ಕುರಿತು ವಸುಧಾ ಚೈತನ್ಯ, ಮೂಲಭೂತ ಸೌಕರ್ಯಗಳ ಕುರಿತು ಲಕ್ಷ್ಮಿ ನರಸಿಂಹ ಭಟ್ ವಿಷಯ ಮಂಡಿಸಿದರು.
ಸಾಮಾಜಿಕ ಕಾರ್ಯಕರ್ತ ಹನಿಯ ರವಿ ಕಾರ್ಯಕ್ರಮ ನಿರ್ವಹಿಸಿದರು.
