HOSANAGARA|ಮಾಧ್ಯಮಗಳು ಒಳ್ಳೆಯ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಬೇಕು: ಕವಿ ಕೃಷ್ಣಪ್ರಸಾದ್ ಬದಿ | ಕಾರಣಗಿರಿಯಲ್ಲಿ ಕಲಾದರ್ಶನ ನಾರದ ಪುರಸ್ಕಾರ ಪ್ರಧಾನ ಸಮಾರಂಭ
ಹೊಸನಗರ : ಮಾಧ್ಯಮಗಳು ಒಳ್ಳೆಯ ಸಂಗತಿಗಳ ಕುರಿತು ಹೆಚ್ಚು ಪ್ರಚಾರ ಮಾಡುವಂತಾಗಬೇಕೆಂದು ಕವಿ, ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ರಸಾದ್ ಬದಿ ಹೇಳಿದ್ದಾರೆ.
ಕಾರಣಗಿರಿ ಗ್ರಾಮಭಾರತಿ ಟ್ರಸ್ಟ್, ಕಲಾದರ್ಶನ ಮಾಸಪತ್ರಿಕೆಯ ಆಶ್ರಯದಲ್ಲಿ ನಡೆದ ಕಲಾದರ್ಶನ ನಾರದ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಧ್ಯಮಗಳು ರಾಜಕೀಯ, ಅಪರಾಧ, ಕ್ರೀಡೆ, ಸಿನಿಮಾ ಸುದ್ಧಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಆದರೆ ಹವಮಾನ ವೈಪರೀತ್ಯದಂಥ ಸಮಸ್ಯೆಗಳು, ಕುಟುಂಬಗಳಲ್ಲಿನ ಸಮಸ್ಯೆ ಹಾಗೂ ಸಾಮರಸ್ಯದಂಥ ವಿಷಯಗಳಿಗೆ ಹೆಚ್ಚು ಒತ್ತುಕೊಟ್ಟು ಜಾಗೃತಿ ಮೂಡಿಸಿದರೆ ಪ್ರತಿ ಮನೆ, ಗ್ರಾಮ, ದೇಶ ಚೆನ್ನಾಗಿರಲು ಸಾಧ್ಯ ಎಂದರು.
ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಆನವಟ್ಟಿ ಮಾತನಾಡಿ ಸಮಾಜದ ಎಲ್ಲಾ ಕ್ಷೇತ್ರಗಳ ಜನರೂ ಕೆಟ್ಟವರಾದಂತೆ ಮಾಧ್ಯಮ ಕ್ಷೇತ್ರದಲ್ಲೂ ಕೆಲವರು ಕೆಟ್ಟವರಿದ್ದಾರೆ. ಆದರೆ ಸಮಾಜದ ಮೇಲೆ ಮಾಧ್ಯಮಗಳು ಹೆಚ್ಚು ಪ್ರಭಾವ ಬೀರುವುದರಿಂದ ಅದನ್ನು ಸರಿಯಾಗಿಡುವುದು ಅಗತ್ಯ ಎಂದರು.
ಪತ್ರಿಕಾಕ್ಷೇತ್ರದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ಈಗಿಗಿಂತ ಹಿಂದೆ ಬಹಳ ಕಷ್ಟವಿತ್ತು. ಅಂಥ ಕಾಲದಲ್ಲಿ ಪತ್ರಿಕೆಯ ಕೆಲಸ ಮಾಡಿದವರನ್ನು ಗುರುತಿಸಿ ನಾರದ ಪುರಸ್ಕಾರ ನೀಡಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ತರಗತಿಯನ್ನು ಉದ್ಘಾಟಿಸಿದ ಯಕ್ಷಗಾನ ಕಲಾವಿದ ಶ್ರೀಕಾಂತ್ ಹೊನ್ನೇಸರ ಮಾತನಾಡಿ ಯಕ್ಷಗಾನ ಕಲಾವಿದರು ಪ್ರಚಾರಕ್ಕೋ, ಹಣಕ್ಕೋ ಕಲಿಯದೆ ಗುರುಮುಖೇನ ಕಲಿತು ಪಾರಂಪರಿಕ ಕಲೆಯನ್ನು ಉಳಿಸುವ ಜೊತೆ ಸಮಾಜ ಜಾಗೃತಿಯ ಮಾಧ್ಯಮ ಮಾಧ್ಯಮವನ್ನಾಗಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕಾರಣಗಿರಿ ಕಲಾದರ್ಶನ ಪತ್ರಿಕೆಯ ಪ್ರಧಾನ ಸಂಪಾದಕ ಹಾದಿಗಳು ಲಕ್ಷ್ಮೀನಾರಾಯಣ ಮಾತನಾಡಿ ಪತ್ರಿಕೆ ಮತ್ತು ಯಕ್ಷಗಾನ ಎರಡೂ ಸಮಾಜದಲ್ಲಿ ಉತ್ತಮ ವಿಚಾರ ಮತ್ತು ಸಂಸ್ಕಾರ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದರು.
ಪತ್ರಿಕ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಅಮೂಲ್ಯ ಸೇವೆ ಸಲ್ಲಿಸಿದ ತೀರ್ಥಹಳ್ಳಿಯ ಆನಂತರಾಜ್ ಜೈನ್, ಶಿಕಾರಿಪುರದ ನೀಲಾಡಿ ರಾಮಚಂದ್ರ, ಹೊಸನಗರದ ಜಿ. ವಿ. ವೇಣುಗೋಪಾಲ, ತೀರ್ಥಹಳ್ಳಿಯ ಜಿ. ಆರ್. ಸತ್ಯನಾರಾಯಣ, ಕೋಣಂದೂರಿನ ದಿನೇಶ್ ರಾವ್ ಹಾಗೂ ಶಿವಮೊಗ್ಗದ ಎಬಿ ಮಂಜುನಾಥ್ ಬಸವಾನಿ ಇವರಿಗೆ ಕಲಾದರ್ಶನದ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗ್ರಾಮ ಭಾರತದ ಗ್ರಾಮಭಾರತಿ ಟ್ರಸ್ಟಿನ ಗೌರವಾಧ್ಯಕ್ಷ ಎನ್. ಡಿ. ನಾಗೇಂದ್ರರಾವ್ ವೇದಿಕೆಯಲ್ಲಿದ್ದರು.
ಗಾಯತ್ರಿ ಅರುಣ ಪ್ರಾರ್ಥಿಸಿ, ರಾಮಚಂದ್ರ ಹೊರಣೇಬೈಲು ಸ್ವಾಗತಿಸಿ, ಕಲಾದರ್ಶನ ಸಂಪಾದಕ ಹನಿಯ ರವಿ ಪ್ರಸ್ತಾವನೆಗೈದರು. ಅಶ್ವಿನಿ ಪಂಡಿತ್ ನಿರೂಪಿಸಿ, ವಸುಧಾ ಚೈತನ್ಯ ವಂದಿಸಿದರು. ಸರ್ವಜ್ಞ ಪತ್ರಿಕೆ ಸಂಪಾದಕ ಎಸ್. ಬಿ. ಮಠದ್, ಸಾಹಿತಿ ಡಾ|| ಶಾಂತರಾಮ್ ಪ್ರಭು, ಡಾ|| ರಾಮಚಂದ್ರರಾವ್, ರಾಮನ್ ಉಡುಪ, ಮಾಜಿ ಸೈನಿಕ ಕೆ. ಪಿ. ಕೃಷ್ಣಮೂರ್ತಿ, ನಿವೃತ್ತ ಪ್ರಾಚಾರ್ಯ ನಳಿನಚಂದ್ರ, ವಿನಾಯಕ ಪ್ರಭು ಮುಂತಾದವರಿದ್ದರು.