
ಡೆಂಘೀ ಬಗ್ಗೆ ನಿರ್ಲಕ್ಷ ಮಾಡಿದರೇ ಜೋಕೆ ಎಂದ ಬೇಳೂರು: ಅರಣ್ಯಾಧಿಕಾರಿಗಳ ಮೇಲೆ ಗರಂ ಆದ ಆರಗ:
ಹೊಸನಗರದಲ್ಲಿ ಶಾಸಕದ್ವಯರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ
ಹೊಸನಗರ: ರಾಜ್ಯಾಧ್ಯಂತ ಹೆಚ್ಚುತ್ತಿರುವ ಡೆಂಘೀ ಪ್ರಕರಣದ ಬಗ್ಗೆ ನಿರ್ಲಕ್ಷ ತೋರಿದರೆ ಜೋಕೆ ಎಂದು ಶಾಸಕ ಬೇಳೂರು ತಾಕೀತು ಮಾಡಿದರೆ.. ಅಭಿವೃದ್ಧಿ ಮತ್ತು ದುರಸ್ಥಿ ಕೆಲಸಗಳಿಗೆ ಅಡ್ಡಿ ಮಾಡುತ್ತಿರುವ ಅರಣ್ಯಾಧಿಕಾರಿಗಳ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ.
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಶಾಸಕ ಆರಗ ಜ್ಞಾನೇಂದ್ರರ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂಡು ಬಂದ ದೃಶ್ಯ ಇದು.
ಈಬಾರಿ ಡೆಂಘೀ ಪ್ರಕರಣ ಹೆಚ್ಚುತ್ತಿದ್ದು ಆರೋಗ್ಯ ಇಲಾಖೆ ಎಚ್ಚರವಾಗಿರಬೇಕು. ಈಗಾಗಲೇ ರಾಜ್ಯ ಸರ್ಕಾರ ಡೆಂಘೀ ತಡೆಗಟ್ಟಲು ಅಗತ್ಯ ಸೂಚನೆ ನೀಡಿದ್ದು ಅದನ್ನು ಚಾಚು ತಪ್ಪದೇ ಪಾಲಿಸಬೇಕು ಎಂದರು.


ತಾಲೂಕು ಆಸ್ಪತ್ರೆಯಲ್ಲಿ ಡೆಂಘೀ ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಗಂಭೀರವಾಗಿದ್ದಲ್ಲಿ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಿ. ಸ್ವಚ್ಚತೆ ಮತ್ತು ಔಷಧಿ ಸಿಂಪಡಣೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಆರಗ ಗರಂ:
ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವ ಪೂರ್ಣ ಯೋಜನೆ ಜೆಜೆಎಂ ಕಾರ್ಯಗತವಾಗುತ್ತಿದೆ. ಆದರೆ ಟ್ಯಾಂಕ್ ನಿರ್ಮಾಣ ಸಂದರ್ಭದಲ್ಲಿ ಅರಣ್ಯ ಇಲಾಖೆ ತೊಂದರೆ ನೀಡುತ್ತಿದೆ. ಮತ್ತು ಶಾಲಾ ಕಟ್ಟಡಗಳ ಕಡೆ ವಾಲಿರುವ ಮರಗಳ ಕಡಿತಲೆಗೂ ಅವಕಾಶ ನೀಡುತ್ತಿಲ್ಲ. ಹೀಗಿ ಸಾಕಷ್ಟು ಅಭಿವೃದ್ಧಿ ವಿಚಾರದಲ್ಲಿ ಅರಣ್ಯ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿದೆ. ಹೀಗಾದರೆ ಹೇಗೆ ಎಂದು ಶಾಸಕ ಆರಗ ಅಧಿಕಾರಿಗಳ ಮೇಲೆ ಗರಂ ಆದರು.
ಸರ್ಕಾರಿ ಕೆಲಸಗಳಿಗೆ ಇಷ್ಟೊಂದು ಅಡೆತಡೆ ಮಾಡಿದರೇ ಜನಸಾಮಾನ್ಯರ ಕತೆ ಏನು ಎಂದು ಪ್ರಶ್ನಿಸಿದರಲ್ಲದೇ.. ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಅನಾಹುತವಾದರೇ ಅರಣ್ಯ ಇಲಾಖೆಯೇ ಹೊಣೆ ಎಂದು ಎಚ್ಚರಿಸಿದರು.
ತಹಶೀಲ್ದಾರ್ ರಶ್ಮೀ ಹಾಲೇಶ್, ಇಒ ನರೇಂದ್ರ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
