Homeಪ್ರಮುಖ ಸುದ್ದಿಶಿವಮೊಗ್ಗಸಾಗರಹೊಸನಗರ

HOSANAGARA|ಹೊಸನಗರ ಮೆಸ್ಕಾಂ ಗುಜರಿ ಲಾರಿಗಳ ಶೆಡ್ಡಾ.? |ಒಂದು ಲಾರಿ ಶೆಡ್ ಸೇರಿದ ಹಿನ್ನೆಲೆ | ಇಲಾಖೆ ಕಳುಹಿಸಿಕೊಟ್ಟ ಮತ್ತೊಂದು ಲಾರಿಯೂ ಗುಜರೀನಾ? |ಮುಳುಗಡೆ ತಾಲೂಕಿನ ಬಗ್ಗೆ ಯಾಕಿಷ್ಟು ನಿರ್ಲಕ್ಷ !

  • HOSANAGARA|ಹೊಸನಗರ ಮೆಸ್ಕಾಂ ಗುಜರಿ ಲಾರಿಗಳ ಶೆಡ್ಡಾ.? |ಒಂದು ಲಾರಿ ಶೆಡ್ ಸೇರಿದ ಹಿನ್ನೆಲೆ | ಇಲಾಖೆ ಕಳುಹಿಸಿಕೊಟ್ಟ ಮತ್ತೊಂದು ಲಾರಿಯೂ ಗುಜರೀನಾ? |ಮುಳುಗಡೆ ತಾಲೂಕಿನ ಬಗ್ಗೆ ಯಾಕಿಷ್ಟು ನಿರ್ಲಕ್ಷ !

ಹೊಸನಗರ: ಇಲ್ಲಿಯ ಮೆಸ್ಕಾಂ ಇಲಾಖೆಗೆ ವಾಹನದ್ದೆ ಸಮಸ್ಯೆ. ಹಿಂದಿದ್ದ ವಿದ್ಯುತ್ ಪರಿಕರ ಸರಬರಾಜು ಲಾರಿ ಸ್ಕ್ರಾಪ್ ಆದ ಕಾರಣ.. ಸಾಕಷ್ಟು ಪ್ರಯತ್ನದ ನಂತರ ಮತ್ತೊಂದು ಲಾರಿಯನ್ನು ಕಳುಹಿಸಿ‌ಕೊಡಲಾಯ್ತು. ಈಗ ಅದು ಸಂಚಾರಕ್ಕೆ ಯೋಗ್ಯವಿರದ ಕಾರಣ ಮೆಸ್ಕಾಂ ಶೆಡ್ ಸೇರಿದೆ.

ಹೌದು ತಾಲೂಕಿನ ಮೂಲೆಮೂಲೆಗೆ ವಿದ್ಯುತ್ ಸಂಪರ್ಕ ಸಾಧಿಸಲು ಸುಸಜ್ಜಿತ ಸರಬರಾಜು ವಾಹನದ ಅಗತ್ಯವಿದೆ. ಆದರೆ ಹೊಸನಗರದಲ್ಲಿ ಈವರೆಗೆ ಕಾರ್ಯನಿರ್ವಹಿಸುತ್ತಿದ್ದ ಸರಬರಾಜು ವಾಹನ ಸ್ಕ್ರಾಪ್ ಅನೇಕ ತಿಂಗಳ ನಂತರ ತುರ್ತು ಕಾರ್ಯನಿರ್ವಹಿಸಲು 6 ತಿಂಗಳ ಹಿಂದೆ ಇನ್ನೊಂದು ಲಾರಿಯನ್ನು ವ್ಯವಸ್ಥೆ ಮಾಡಿದ್ದೇನೋ ಸರಿ. ಆದರೆ ಒಂದು ತಿಂಗಳು ಕೂಡ ಕಾರ್ಯನಿರ್ವಹಿಸದೇ ಶೆಡ್ ಸೇರಿದೆ.

ಹೊಸನಗರ ಮೆಸ್ಕಾಂ ಹಳೇ ಲಾರಿಗಳ ಶೆಡ್ ಆಗಿದೆಯೇ?
ಮೆಸ್ಕಾಂ ಮೇಲಾಧಿಕಾರಿಗಳ ವರ್ತನೆ ನೋಡಿದರೇ ಹೊಸನಗರ ತಾಲೂಕು ಮೆಸ್ಕಾಂ ಇಲಾಖೆ ಹಳೇ ಮತ್ತು ಸ್ಕ್ರಾಪ್ ಲಾರಿಗಳ ಶೆಡ್ ಆಗಿದೆಯೇ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಇದ್ದ ಒಂದು ಲಾರಿ ಸ್ಕ್ರಾಪ್ ಆದ ಕಾರಣ ಟಿಸಿ ಸೇರಿದಂತೆ ವಿದ್ಯುತ್ ಪರಿಕರಗಳ ಸರಬರಾಜಿಗೆ ತೊಡಕು ಉಂಟಾಗಿತ್ತು. ಎಡಬಿಡದ ಪ್ರಯತ್ನದ ಫಲವಾಗಿ ಮೆಸ್ಕಾಂ ಹೊಸನಗರ ಶಾಖೆಗೆ ಮತ್ತೊಂದು ಲಾರಿಯ ವ್ಯವಸ್ಥೆಯನ್ನೇನೋ ಮಾಡಿದೆ. ಅದು ಹಳೇ ಮಾದರಿ ಲಾರಿ. ಉಪಯೋಗಕ್ಕೆ ಬಾರದ ಲಾರಿಯನ್ನು ವ್ಯವಸ್ಥೆ ಮಾಡಿದ ಪರಿಣಾಮ. ಸಹಜವಾಗಿ ಶೆಡ್ ಸೇರಿದೆ.

ಹೊಸನಗರ ಮೆಸ್ಕಾಂ ವಿಸ್ತಾರ ದೊಡ್ಡದು:
ಹೊಸನಗರ ತಾಲೂಕು ವಿಸ್ತಾರ ದೊಡ್ಡದು. ಸಾಗರ ಸಮೀಪದ ಪುರಪ್ಪೇಮನೆ ಯಿಂದ ಕೊಲ್ಲೂರು ಗಡಿಭಾಗ ನಾಗೋಡಿ ಗೇಟ್‌ವರೆಗೆ, ಶಿವಮೊಗ್ಗ ಸೂಡೂರು ಗೇಟ್‌ನಿಂದ ಯಡೂರು ಸುಳುಗೋಡು ಗ್ರಾಪಂಯ ಕೊರನಕೋಟೆವರೆಗೂ ಹಬ್ಬಿದೆ. ವಿದ್ಯುತ್ ಸರಬರಾಜು ಹೊಸನಗರ ತಾಲೂಕು ಕೇಂದ್ರದಿಂದಲೇ ನಿರ್ವಹಣೆಯಾಗಬೇಕು. ಇಲ್ಲಿಂದ ಕೊರನಕೋಟೆಗೆ 90 ಕಿಮೀ ಕ್ರಮಿಸಬೇಕು. ಇನ್ನು ಗಡಿಭಾಗ ಸಂಪರ್ಕಿಸಲು 50 ಕಿಮೀಗಿಂತಲೂ ಅಧಿಕ ದೂರ ಸಾಗಬೇಕು. ಹೀಗಾಗಿ ಸರಬರಾಜು ವಾಹನವಿಲ್ಲದೇ ಪರದಾಟಕ್ಕೆ ಕಾರಣವಾಗಿದೆ.

ಟ್ರಾನ್ಸ್ ಫರ್ಮರ್, ಕಂಬಗಳ ಸಾಗಾಟಕ್ಕೆ ತೊಂದರೆ:
ತಾಲೂಕಿನಲ್ಲಿ ಎಲ್ಲೇ ವಿದ್ಯುತ್ ಪರಿವರ್ತಕ ಬದಲಾವಣೆಗೆ, ಹೊಸದಾಗಿ ಅಳವಡಿಕೆಗೆ ಸಾಗರದಿಂದ ವಿದ್ಯುತ್ ಪರಿವರ್ತಕ ತರಬೇಕು. ಅಲ್ಲದೇ ಹಳ್ಳಿಯ ಮೂಲೆಗೆ ಕೊಂಡೊಯ್ದು ಅಳವಡಿಸಬೇಕಾದ ಅನಿವಾರ್ಯತೆ ಇದೆ. ಇನ್ನು ವಿದ್ಯುತ್ ಕಂಬಗಳು ಹೊಸನಗರ ಯಾರ್ಡಿಗೆ ಸರಬರಾಜು ಮಾಡಲಾಗುತ್ತದೆ. ಆದರೆ ಅಲ್ಲಿಂದ ಕಾಮಗಾರಿ ಸ್ಥಳಗಳಿಗೆ ಕೊಂಡೊಯ್ಯಲು ವಾಹನ ಇಲ್ಲದಂತಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲೇ ಇಲ್ಲಿಯ ಮೆಸ್ಕಾಂ ವ್ಯಾಪ್ತಿ ದೊಡ್ಡದಾಗಿದ್ದರು ಅದಕ್ಕೆ ಪೂರಕ ಸೌಲಭ್ಯಗಳು ದೊರೆಯದೇ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ.

ವಿದ್ಯುತ್ ಸಮಸ್ಯೆ ಉಲ್ಭಣ:
ಸರಬರಾಜು ವಾಹನ ಇರದ ಕಾರಣ ವಿದ್ಯುತ್ ಸಮಸ್ಯೆಯನ್ನು ನಿಗಧಿತ ಅವಧಿಯಲ್ಲಿ ನೀಗಿಸಲು ಆಗುತ್ತಿಲ್ಲ. ಕೆಲವು ಕಡೆಯಂತೂ ತಿಂಗಳಾದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ದೂರದ ನಿಟ್ಟೂರು, ನಾಗೋಡಿ, ಯಡೂರು, ಸುಳುಗೋಡು, ನಿಡಗೋಡು, ಕಟ್ಟಿನಹೊಳೆ, ಬೇಳೂರು, ಗರ್ತಿಕೆರೆ, ಹೆದ್ದಾರಿಪುರ, ಹುಂಚಾ, ಹರತಾಳು ಸೇರಿದಂತೆ ಹಳ್ಳಿಗಳಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ವಾಹನ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಬಡವರು ಕೂಲಿಕಾರ್ಮಿಕರು, ರೈತರು ಹೈರಾಣಾಗುವಂತೆ ಮಾಡಿದೆ.

ತೀರ್ಥಹಳ್ಳಿ ಮೂಲಕ ಹೋಗಬೇಕು:
ನಕ್ಸಲ್ ಪೀಡಿತ ಗ್ರಾಮವಾದ ಕೊರನಕೋಟೆ ಸುತ್ತಮುತ್ತಲಿನ ಪ್ರದೇಶಗಳಿಗೆ 90 ಕಿಮೀ ಅಂತರವಾಗುತ್ತದೆ. ಅಲ್ಲದೇ ಮಾಣಿ ಜಲಾಶಯದ ಪರಿಣಾಮ, ಹಿನ್ನೀರು ವ್ಯಾಪಿಸಿದ ಕಾರಣ ಹಳೇ ಮಾರ್ಗದಲ್ಲಿ ಸಂಪರ್ಕ ಸಾಧ್ಯವಿಲ್ಲ. ಹೀಗಾಗಿ ತೀರ್ಥಹಳ್ಳಿ ಮೇಗರವಳ್ಳಿ ಮಾರ್ಗ ಬಳಸಿ ಸಾಗಬೇಕು. ಮೊದಲೇ ಇಲ್ಲಿಯ ವಿದ್ಯುತ್ ಸಮಸ್ಯೆ ನೀಗಿಸುವಲ್ಲಿ ವಿಳಂಬ ಎದ್ದುಕಾಣುತ್ತಿತ್ತು. ವಾಹನದ ಸಮಸ್ಯೆಯ ನಂತರ ಇನ್ನಷ್ಟು ಪರದಾಟ ಕಂಡು ಬರುತ್ತಿದೆ.

ವೆಚ್ಚ ಕೊಡಲ್ಲ:
ಇನ್ನು ಕಂಬ ಅಳವಡಿಕೆ, ಸೇರಿದಂತೆ ವಿವಿಧ ಕಾಮಗಾರಿ ನಡೆಸುವ ಗುತ್ತಿಗೆದಾರರ ಅಗತ್ಯಕ್ಕೆ ವಾಹನ ಸಿಗುತ್ತಿಲ್ಲ. ಅವರದ್ದೇ ಸಣ್ಣಪುಟ್ಟ ವಾಹನ ಬಳಸಿ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ ಸೇರಿದಂತೆ ವಿವಿಧ ಪರಿಕರಗಳನ್ನು ಸಾಗಿಸಲಾಗುತ್ತಿದೆ. ಆದರೆ ಇದು ಸುರಕ್ಷಿತ ಅಲ್ಲ. ಅಲ್ಲದೇ ಸಾಗಾಟದ ವೆಚ್ಚವನ್ನು ಮೆಸ್ಕಾಂ ಇಲಾಖೆ ಭರಿಸುತ್ತಿಲ್ಲ ಎಂಬುದು ಗುತ್ತಿಗೆದಾರರ ಆರೋಪ.

ರಿಪ್ಪನ್ ಪೇಟೆಯಲ್ಲಿ 11 ಟಿಸಿ ಕೊರತೆ:
ಅಕಾಲಿಕ ಮಳೆ, ಗುಡುಗು‌‌ ಸಿಡಿಲಿನ ಆರ್ಭಟ ತಾಲೂಕಿನಲ್ಲಿ‌ಹೆಚ್ಚು. ಇದರ ಪರಿಣಾಮ ನೇರವಾಗಿ ಟಿಸಿ ಮೇಲೆ ಆಗುತ್ತದೆ. ಈಗಾಗಲೇ ತಾಲೂಕಿನ ರಿಪ್ಪನಪೇಟೆಯೊಂದರಲ್ಲೇ 11 ಟಿಸಿಗಳ ಕೊರತೆ ಇದೆ. ಹೊಸ ಟಿಸಿಗಳು ಬರುತ್ತಿಲ್ಲ ಬಂದರೆ ಅದನ್ನು ಸೂಕ್ತ ಸ್ಥಳಗಳಿಗೆ ಸರಬರಾಜು ಮಾಡಲು ವಾಹನದ ವ್ಯವಸ್ಥೆ ಇಲ್ಲದಂತಾಗಿದೆ.

ಹೇಳಿಕೇಳಿ ಹೊಸನಗರ ತಾಲೂಕಿಗೆ ಮುಳುಗಡೆ ತಾಲೂಕು ಎಂಬ ಹಣೇಪಟ್ಟಿ ಇದೆ. ನಾಡಿಗೆ ಬೆಳಕು‌ಕೊಟ್ಟ ತಾಲೂಕು ಎಂಬ ಹಿರಿಮೆ ಇದೆ. ಆದರೆ ಕತ್ತಲಿನ ಹೊಸನಗರಕ್ಕೆ‌ ಬೆಳಕು ನೀಡಲು‌ ಸುವ್ಯವಸ್ಥಿತ ಸೌಲಭ್ಯ ಕಲ್ಪಿಸಲು ಮೆಸ್ಕಾಂ ನಿರ್ಲಕ್ಷ ತೋರುತ್ತಿರುವುದು ವಿಪರ್ಯಾಸ.

  • ತುರ್ತು ಸೇವೆ ಸಾಧ್ಯವಿಲ್ಲ:

    ಸರಬರಾಜು ವಾಹನವಿಲ್ಲದೇ ಟಿಸಿ, ವಿದ್ಯುತ್ ಕಂಬಗಳನ್ನು ತ್ವರಿತವಾಗಿ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಟೆಕ್ನಿಕಲ್ ಎಂಜಿನಿಯರ್ ಇಲ್ಲದೇ ಕಾಮಗಾರಿ ಅನುಷ್ಠಾನ ಕೂಡ ತ್ವರಿತವಾಗಿ ಆಗುತ್ತಿಲ್ಲ. ಇದರಿಂದ ದೂರದ ಹಳ್ಳಿ ಜನರು ಪರದಾಡುವಂತಾಗಿದೆ. ಇಲಾಖೆ ಈ ಬಗ್ಗೆ ತುರ್ತಾಗಿ ಗಮನಹರಿಸಬೇಕು.

    – ಸತೀಶ್ ಬಾವಿಕಟ್ಟೆ, ಹೊಸನಗರ

  • ಪ್ರಪೋಸಲ್ ಕಳಿಸಿದ್ದೇವೆ:

    ಹೊಸನಗರ ಮೆಸ್ಕಾಂಗೆ ಸರಬರಾಜು ಲಾರಿಯ ಅಗತ್ಯವಿದೆ. ಈಹಿಂದಿನ ಲಾರಿ ಸ್ಕ್ರಾಪ್ ಆದ ಕಾರಣ, ಮತ್ತೊಂದು ಲಾರಿಯನ್ನು ಮೆಸ್ಕಾಂಗೆ ನೀಡಕಾಗಿತ್ತು. ಈಗ ಆ ಲಾರಿ ಕೂಡ ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ಬಗ್ಗೆ ಮಾಹಿತಿ ಮತ್ತು ಲಾರಿ ವ್ಯವಸ್ಥೆ ಕಲ್ಪಿಸಲು ಮತ್ತೆ ಪ್ರಪೋಸಲ್ ಕಳುಹಿಸಲಾಗಿದೆ.

    – ಚಂದ್ರಶೇಖರ್ ಎಇಇ ಮೆಸ್ಕಾಂ ಹೊಸನಗರ

  • ಸೂಕ್ತ ಕ್ರಮ: ಶಾಸಕ ಬೇಳೂರು

    ಹೊಸನಗರ ಮೆಸ್ಕಾಂ ಇಲಾಖೆ ಸರಬರಾಜು ಲಾರಿಯ ಸಮಸ್ಯೆ ಇರುವುದರ ಬಗ್ಗೆ ಗಮನಹರಿಸಲಾಗುವುದು. ಅಲ್ಲದೇ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ವಿದೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಜೊತೆ ಮಾಡಿ‌ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

  • -ಗೋಪಾಲಕೃಷ್ಣ ಬೇಳೂರು, ಶಾಸಕರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *