![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
-
Hosanagara | ತಲತಲಾಂತರದಿಂದ ವಾಸವಿರುವ ಕುಟುಂಬಗಳಿಗೆ ಹಕ್ಕುಪತ್ರ ವಿಳಂಬ | ಬಂಡವಾಳಶಾಹಿಗಳ ಪರ ಮಾತ್ರ ತುರ್ತುಕ್ರಮ | ಮದ್ಯದಂಗಡಿಗಳಲ್ಲಿ ಬಿಲ್ ನೀಡಿ | ಕೇವಲ ಅಮಾಯಕರ ಮೇಲೆ ಕೇಸು ದಾಖಲಿಸುವುದನ್ನು ನಿಲ್ಲಿಸಿ |
ರೈತರ ಸಮಾಲೋಚನ ಸಭೆಯಲ್ಲಿ ರೈತ ಪ್ರಮುಖರ ಆಗ್ರಹ
ಹೊಸನಗರ: ತಲತಲಾಂತರದಿಂದ ವಾಸಿಸಿಕೊಂಡು ಬರುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ವಿಳಂ ಧೋರಣೆ ಅನುಸರಿಸಲಾಗುತ್ತಿದೆ. ಆದರೆ ಬಂಡವಾಳಶಾಹಿಗಳು ಅರ್ಜಿ ಹಾಕಿದ ಕೂಡಲೇ ಹಕ್ಕುಪತ್ರ ಮಂಜೂರಾಗುತ್ತದೆ ಇದಕ್ಕೆ ಕಡಿವಾಣ ಹಾಕಿ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಜಿ.ವಿ.ರವೀಂದ್ರ ಆಗ್ರಹಿಸಿದರು.
ತಾಪಂ ಸಭಾಂಗಣದಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿ ಯಲ್ಲಿ ತಾಲೂಕಿನ ಸಮಸ್ಯೆಗಳ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
50 ಮತ್ತು 53ಯಲ್ಲಿ ಹಾಕಿದ ಅರ್ಜಿಗಳು ನೆನಗುದಿಗೆ ಬಿದ್ದಿವೆ. ಆದರೆ 57 ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಂಜೂರಾಗುತ್ತಿದೆ. ಇಲ್ಲಿ ಬಡವರಿಗೆ ಅನ್ಯಾಯವಾಗುತ್ತಿದ್ದು ಗಮನ ಹರಿಸುವಂತೆ ಒತ್ತಾಯಿಸಿದರು.
![](https://goodmorningkarnataka.com/wp-content/uploads/2022/11/IMG-20221121-WA0002.jpg)
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-3.jpg)
-
ಮದ್ಯದಂಗಡಿಯಲ್ಲಿ ಬಿಲ್ ನೀಡಿ:
ಹಳ್ಳಿಯಲ್ಲಿರುವ ಮನೆಗಳು ಪೇಟೆಯಿಂದ ದೂರ ಇರುತ್ತವೆ. ದಿನಂಪ್ರತಿ ಪೇಟೆಗೆ ಬರಲು ಸಾಧ್ಯವಿಲ್ಲ. ಮದ್ಯಪಾನ ಸೇವಿಸುವವರು ವಾರಕ್ಕಾಗುವಷ್ಟು ಒಮ್ಮೆಲೆ ಖರೀಧಿ ಮಾಡಿ ಹೋಗುತ್ತಾರೆ. ಅಬಕಾರಿ ಅಧಿಕಾರಿಗಳು ಅಂತವರನ್ನು ಹಿಡಿದು ಪ್ರಕರಣ ದಾಖಲಿಸುತ್ತಾರೆ. ಆದರೆ ಆ ಮದ್ಯ ಎಲ್ಲಿಂದ ಬಂದಿದೆ ಎಂದು ಗೊತ್ತಿದ್ದರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮದ್ಯದಂಗಡಿಯಲ್ಲಿ ಬಿಲ್ ಯಾಕೆ ನೀಡುವುದಿಲ್ಲ. ಬಿಲ್ ಇದ್ದರೆ ಮಾಲು ಎಲ್ಲಿಂದ ಸರಬರಾಜು ಆಗುತ್ತಿದೆ ಎಂದು ತಿಳಿಯುತ್ತದೆ. ಅಂತವರ ವಿರುದ್ಧ ಕ್ರಮಕೈಗೊಳ್ಳಲು ಪೂರಕವಾಗುತ್ತದೆ. ಹಾಗಾಗಿ ಪ್ರತಿ ಮದ್ಯದಂಗಡಿಯಲ್ಲಿ ಕಡ್ಡಾಯವಾಗಿ ಬಿಲ್ ನೀಡಲು ಸೂಚಿಸಲು ಸಭೆಯಲ್ಲಿ ಆಗ್ರಹಿಸಲಾಯಿತು.
ರಿಪ್ಪನಪೇಟೆಯಲ್ಲಿ ವಿದ್ಯುತ್ ಪರಿವರ್ತಕಗಳು ಹಾಳಾಗುತ್ತಿವೆ. ಟಿಸಿ ಬದಲಾವಣೆಯನ್ನು ಕೂಡ ತ್ವರಿತವಾಗಿ ಮಾಡುತ್ತಿಲ್ಲ. ದಿನಂಪ್ರತಿ ವಿದ್ಯುತ್ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ ಎಂದು ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಮೆಸ್ಕಾಂ ಎಇಇ ಈಗಾಗಲೇ ಹೊಸ ಟಿಸಿ ಅಳವಡಿಸಲು ಪತ್ರವ್ಯವಹಾರ ನಡೆದಿದೆ. ಶಾಸಕರ ಜೊತೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ತಾಲೂಕಿನ ಹಲವು ನಾಡಕಚೇರಿಗಳಲ್ಲಿ ಗ್ರಾಮಲೆಕ್ಕಿಗರು ಹಲವು ವರ್ಷಗಳಿಂದ ಮೊಕ್ಕಾಂ ಹೂಡಿದ್ದಾರೆ. ಬಡವರ ಕೆಲಸ ಆಗುತ್ತಿಲ್ಲ. ಅನ್ನಭಾಗ್ಯ, ವಿಧವಾ ವೇತನ, ಪೌತಿ ಬದಲಾವಣೆ, ಸರ್ಕಾರಿ ವಿವಿಧ ಯೋಜನೆಗಳಿಗಾಗಿ ಬಡವರು ಅಲೆದಾಡುವಂತಾಗಿದೆ ಎಂದು ಸಭೆಯಲ್ಲಿ ಆರೋಪ ವ್ಯಕ್ತವಾಯಿತು.
ಜನರಿಗೆ ಅಗತ್ಯವಾದ ಮೆಡಿಕಲ್, ನ್ಯಾಯಬೆಲೆ ಅಂಗಡಿ, ಮತ್ತು ಸರ್ಕಾರಿ ಕಚೇರಿಗಳು ನಿಗಧಿತ ಅವಧಿಯೊಳಗೆ ತೆರೆಯುವಂತೆ ಮನವಿ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ರಶ್ಮಿ ಹಾಲೇಶ್, ಹಕ್ಕುಪತ್ರ ಸಮಸ್ಯೆ, ನಾಡಕಚೇರಿಗಳಲ್ಲಿ ತ್ವರಿತ ಸ್ಪಂದನೆ ಸೇರಿದಂತೆ ಎಲ್ಲಾ ಸಮಸ್ಯೆಗಳ ಬಗ್ಗೆ ಸ್ಪಂದಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಇಒ ನರೇಂದ್ರಕುಮಾರ್, ರೈತ ಪ್ರಮುಖರಾದ ಅದಮ್, ಭಾಸ್ಕರ್ ಅಮಗುಡ್ಡೆ, ಶುಶ್ರುತ್ ಅಡಗೋಡಿ, ಸುಗಂದರಾಜ್, ಲೋಕಪ್ಪ, ಮೂರ್ತಿ, ಅರಣ್ಯ, ಕೃಷಿ, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-4.jpg)