
ಶಿವಮೊಗ್ಗ: ಸರ್ಕಾರಿ ಶಾಲೆಯೊಂದರಲ್ಲಿ ಖಾಯಂ ಶಿಕ್ಷಕರಿಲ್ಲದಿರುವುದನ್ನು ಖಂಡಿಸಿ ಪೋಷಕರು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಿಇಒ ಕಚೇರಿಗೆ ಚಲೋ ಹೋರಾಟ ಕೈಗೊಂಡಿದ್ದಾರೆ.
ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದುಬಾರತಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ. ಈ ಬಗ್ಗೆ ಶಿಕ್ಷ ಇಲಾಖೆಯ ಗಮನಕ್ಕೆ ತಂದು ಸಮಸ್ಯೆ ನೀಗಿಸುವಂತೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಪೋಷಕರು ಆರೋಪಿಸಿದರು.
ಸದರಿ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ 15 ಮಕ್ಕಳು ವ್ಯಾಸಾಂಗ ಮಾಡುತ್ತಿದ್ದು ಶಿಕ್ಷಕರಿಲ್ಲದೇ ಸೂಕ್ತ ಶಿಕ್ಷಣ ದೊರೆಯುತ್ತಿಲ್ಲ ಎಂದು ಆರೋಪಿಸಿದರು.


ಬಿಇಒ ಕಚೇರಿಗೆ ತೆರಳಿ ಮನವಿ ಮಾಡುತ್ತೇವೆ. ಒಂದು ಇಂದೇ ಖಾಯಂ ಶಿಕ್ಷಕರನ್ನು ನೀಡದಿದ್ದಲ್ಲಿ ಮಕ್ಕಳನ್ನು ಅಲ್ಲೇ ಬಿಡುತ್ತೇವೆ. ಮಕ್ಕಳ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಂತರ ದುಬಾರತಟ್ಟಿ ಮಾರ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ 16 ಕಿ.ಮೀ ದೂರದ ಹೊಸನಗರ ತಾಲೂಕು ಕಚೇರಿಗೆ ತೆರಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಪ್ರಮುಖರಾದ ನಾಗೇಶ್, ಇದಾಯತ್, ಗಫರ್, ಗಣೇಶ್, ಮಾರುತಿ, ರಮೇಶ್, ನಾಗೇಶ, ರಾಘವೇಂದ್ರ, ಕಿಶೋರ ನಗರ, ಸಲೀಂ, ಇಜಾದ್, ಜನಾತ್, ಪಲ್ಲವಿ, ಶಶಿಕಲಾ, ಜಯಕ್ಕ, ಆಸ್ಮಾ, ಅಲುಮೇರ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
