
ಕರಿ ‘ಮನೆ’ ಮಾಲೀಕ ನಾನಲ್ಲ |
ಗ್ರಾಪಂ ಸೇರಿ ಸರ್ಕಾರಿ ಕಟ್ಟಡಗಳಿಗೂ ಮಾಲಿಕತ್ವ ಇಲ್ಲ.!
1991-92 ವರೆಗೆ ಧನದ ಮುಫತ್ತಾಗಿದ್ದ 1993-94 ರಲ್ಲಿ ಪಿಎಫ್ ಆಗಿದ್ದೇಗೆ? ಈ ಬಗ್ಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ:
4 ದಶಕದ ಸಮಸ್ಯೆ ಜೀವಂತವಾಗಿರುವಾಗಲೇ.. ಜೆಜೆಎಂಗೆ 4.20 ಎಕರೆ ಭೂಮಿ ಮಂಜೂರಾಗಿದ್ದು ಹೇಗೆ?
ನಮ್ಮದಲ್ಲದ ತಪ್ಪಿಗೆ ನಮಗ್ಯಾಕೆ ಶಿಕ್ಷೆ ಸ್ವಾಮಿ?
* Editor
ಹೊಸನಗರ: ಇಡೀ ರಾಜ್ಯದಲ್ಲಿ ಎಲ್ಲೂ ಇರಲಾರದ ಸಮಸ್ಯೆ ಇಲ್ಲೊಂದು ಗ್ರಾಮವನ್ನು ಕಾಡುತ್ತಿದೆ. ಇಲ್ಲಿ ಗ್ರಾಪಂ ಕಟ್ಟಡ ಸೇರಿದಂತೆ ಸರ್ಕಾರಿ ಕಟ್ಟಡಗಳು ಕೂಡ ಇಲ್ಲಿ ಬೇನಾಮಿ.. ಕರಿಮನೆಯಲ್ಲಿ ಮನೆಕಟ್ಟಿ ಹಲವು ದಶಕದಿಂದ ವಾಸಿಸುತ್ತಿದ್ದರೂ ಕೂಡ ಮನೆ ಮಾಲೀಕ ನಾನಲ್ಲ ಎಂಬ ಸಮಸ್ಯೆ ಇಲ್ಲಿ ಪ್ರತಿ ನಿವಾಸಿಯ ಜೀವ ಹಿಂಡುತ್ತಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ಸೇರಿದಂತೆ ಮನೆ ಹಕ್ಕು, ಭೂಮಿ ಹಕ್ಕು ಸಿಗದೇ ಪರದಾಡುತ್ತಿರುವ ನೂರಾರು ಬಡ ರೈತ, ಕೂಲಿಕಾರ್ಮಿಕ, ಮುಳುಗಡೆ ಸಂತ್ರಸ್ಥರ ಹಲವು ದಶಕಗಳ ಧಾರುಣ ಸ್ಥಿತಿ ಇದು.
1991-92 ರಲ್ಲಿ ನೀಡಿದ ಆಶ್ರಯ ಸೈಟಿಗೆ ಮನ್ನಣೆ ಇಲ್ಲ:
ಎಸ್.ಬಂಗಾರಪ್ಪ ಸಿಎಂ ಆದ ಸಂದರ್ಭದಲ್ಲಿ ಕರಿಮನೆ ಸ.ನಂ 106 ರಲ್ಲಿ 86 ಆಶ್ರಯ ನಿವೇಶನ ನೀಡಲಾಗಿತ್ತು. ಅಲ್ಲಿ ಮನೆ ಕಟ್ಟಿಕೊಂಡು ಸಂತ್ರಸ್ಥ ಬಡ ರೈತ ಕೂಲಿಕಾರ್ಮಿಕರು ವಾಸವಾಗಿದ್ದಾರೆ. ಆದರೆ ಈವೆರಗೂ ಮನೆ ಮಾಲೀಕತ್ವವಾಗಲಿ, ಭೂಮಿ ಹಕ್ಕಾಗಲಿ ಈವರೆಗೆ ಸಿಕ್ಕದೆ ಪರದಾಡುವಂತಾಗಿದೆ.
43 ಮನೆಗಳ ಹಕ್ಕುಪತ್ರ ಪೆಂಡಿಂಗ್:
ಸನಂ.106 ರಲ್ಲಿ ಮುಳುಗಡೆ ಸಂತ್ರಸ್ಥರು ಸೇರಿದಂತೆ ಬಡ ರೈತ ಕೂಲಿಕಾರ್ಮಿಕರು ಮನೆ ಕಟ್ಟಿಕೊಂಡಿದ್ದಾರೆ. ಇವರಿಗೆ ಹಕ್ಕುಪತ್ರ ನೀಡುವ ಸಂಬಂಧ, ಸರ್ವೇ ಮಾಡಿ ಫೈಲ್ ಪುಟಪ್ ಮಾಡಿ ನಾಡ ಕಚೇರಿಯಿಂದ ತಾಲೂಕು ಕಚೇರಿಗೆ ಹೋಗಿದ್ದು ಪೈಲ್ ಗೆದ್ದಲು ಹಿಡಿಯುತ್ತಿದೆ ಹೊರತು ಹಕ್ಕು ಮಾತ್ರ ದೊರೆತಿಲ್ಲ.
295 ಅರಣ್ಯ ಹಕ್ಕು ಅರ್ಜಿಗಳಿಗೆ ಮನ್ನಣೆ ಇಲ್ಲ:
ಇನ್ನು 2011-12 ರಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ 295 ಅರ್ಜಿಗಳು ಅರಣ್ಯ ಹಕ್ಕು ಸಮಿತಿಯಿಂದ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಕೆಯಾಗಿತ್ತು. ಆದರೆ ಇದು ಅರಣ್ಯ ವ್ಯಾಪ್ತಿಗೆ ಬರೋದಿಲ್ಲ ಎಂದು ಅರ್ಜಿಗಳು ಹೋದ ದಾರಿಯಲ್ಲೇ ವಾಪಾಸಾಗಿವೆ. ಇದರಿಂದ ಬಗರ್ ಹುಕುಂ ಮಾಡಿಕೊಂಡ ರೈತ, ಕೂಲಿಕಾರ್ಮಿಕರು ಅತಂತ್ರರಾಗಿದ್ದಾರೆ.
ಗ್ರಾಪಂ ಕಚೇರಿಗೆ ಹಕ್ಕುಪತ್ರವಿಲ್ಲ
ಸನಂ 106ರಲ್ಲಿ ಕರಿಮನೆ ಗ್ರಾಪಂ ಕಚೇರಿ ಇದ್ದು ಈ ಕಚೇರಿಯ ಹಕ್ಕು ಸಿಗದೇ ಸರ್ಕಾರಿ ಕಚೇರಿಯೇ ಬೇನಾಮಿಯಂತಿದೆ. ಇದಲ್ಲದೇ ಬಸ್ ತಂಗುದಾಣ, ಅಂಗನವಾಡಿ, ದೇವಸ್ಥಾನ, ಪಂಚಾಯ್ತಿ ನಡುತೋಪು, ವಾಟರ್ ಟ್ಯಾಂಕ್ , ಗ್ರಂಥಾಲಯ, ಶೌಚಾಲಯಗಳ ಕಟ್ಟಡದ ಸ್ಥಿತಿ ಕೂಡ ಇದೇ ಆಗಿದೆ. ಸನಂ 106 ರಲ್ಲಿ ಸರ್ಕಾರಿ ಮತ್ತು ಖಾಸಗಿ ಅಂಗಡಿ ಮುಗ್ಗಟ್ಟುಗಳು, ಮನೆಗಳು ಸೇರಿಬ150 ಕ್ಕಿಂತ ಹೆಚ್ಚು ಕಟ್ಟಡಗಳಿದ್ದು, ಯಾವ ಕಟ್ಟಡದ ಮಾಲೀಕತ್ವವಾಗಲಿ, ಭೂಮಿ ಹಕ್ಕಾಗಲಿ ಇದುವರೆಗೆ ಸಿಕ್ಕಿಲ್ಲ. ಆದರೆ ತನ್ನ ಹಕ್ಕೇ ಹೊಂದಿರದ ಗ್ರಾಪಂಯಿಂದ ಡಿಮ್ಯಾಂಡ್ ಮಾತ್ರ ಇವರಿಗಿರುವ ಏಕೈಕ ದಾಖಲೆಯಾಗಿದ್ದು ವಿಪರ್ಯಾಸ ಎನಿಸಿದೆ.
ಕಂದಾಯ ಭೂಮಿ ಪಿಎಫ್ ಆಗಿದ್ದು ಹೇಗೆ:
ಸನಂ 106ರ ಒಟ್ಟಾರೆ ಪ್ರದೇಶ 1991-92 ವರೆಗೆ ದನದ ಮುಫತ್ತು (ಕಂದಾಯ ಭೂಮಿ) ಆಗಿದ್ದು 1994-95ರ ಹೊತ್ತಿಗೆ ಪಿಎಫ್ (ಸೂಚಿತ ಅರಣ್ಯ) ಆಗಿದ್ದು ಹೇಗೆ ಎಂಬದು 3 ದಶಕದಿಂದ ಕಾಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಕಂದಾಯ, ಅರಣ್ಯ ಇಲಾಖೆಗೆ ಅಲೆದು ಅಲೆದು ಸುಸ್ತಾಗಿದ್ದರು ಕೂಡ ಉತ್ತರ ಮಾತ್ರ ಸಿಗುತ್ತಿಲ್ಲ. ಯಾವುದೇ ನೋಟಿಫಿಕೇಶನ್ ಆಗದೇ ಇದ್ದಕ್ಕಿದ್ದಂತೆ ಪಿಎಫ್ ಎಂದು ದಾಖಲಾದ ಬಗ್ಗೆ ಗ್ರಾಪಂ ಮಟ್ಟದಿಂದ ವಿಧಾನಸೌಧದವರೆಗೂ ಯಾವುದೇ ಅಧಿಕಾರಿ ಬಳಿಯೂ ಉತ್ತರವಿಲ್ಲ. ತಮ್ಮದಲ್ಲದ ತಪ್ಪಿಗೆ ಕರಿಮನೆಯ ನಿವಾಸಿಗಳು ಮೂವತ್ತು ವರ್ಷಗಳಿಂದಲೂ ಶಿಕ್ಷೆ ಅನುಭವಿಸುತ್ತಿದ್ದಾರೆ.
ಜೆಜೆಎಂ ಗೆ ತರಾತುರಿ ಭೂಮಿ ಮಂಜೂರು ಹೇಗೆ?
ಮೂರ್ನಾಲ್ಕು ದಶಕದಿಂದ ಒಂದು ಸೂರಿಗೆ ಭೂಮಿ ಮಂಜೂರು ಸಾಧ್ಯವಾಗದೇ ಇರುವಾಗ, ಪಂಚಾಯ್ತಿ ಕಚೇರಿಯೇ ಹಕ್ಕು ಕಳೆದುಕೊಂಡಿರುವ ಸನ್ನಿವೇಶದಲ್ಲಿ ಕರಿಮನೆ ಸನಂ 106 ರಲ್ಲಿ ಜೆಜೆಎಂ, ಅಂದಾಜು ರೂ.420 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 4.20 ಎಕರೆ ಮಂಜೂರು ಮಾಡಿ ಆರ್ಟಿಸಿ ನೀಡಿರುವುದು ಹೇಗೆ ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಅಲ್ಲದೇ ಇದೇ ಸನಂನಲ್ಲಿ ಸ್ಮಶಾನಕ್ಕು ಕೂಡ ಜಾಗ ಮಂಜೂರಾಗಿದೆ ಇದು ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ.
ಧರಣಿ, ಪ್ರತಿಭಟನೆ, ಸಭೆ ಲೆಕ್ಕವೇ ಇಲ್ಲ:
ಯಾವುದೇ ನೋಟಿಫಿಕೇಶನ್ ಇಲ್ಲದೇ ಕಂದಾಯ ಭೂಮಿಗೆ, ಪಿಎಫ್ ಎಂದು ದಾಖಲಿಸಿದ ಬಗ್ಗೆ, ಸಮಸ್ಯೆ ಇತ್ಯರ್ಥದ ಬಗ್ಗೆ ಪಂಚಾಯ್ತಿ ಕಚೇರಿಯಿಂದ ಹಿಡಿದು, ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರ, ಸರ್ಕಾರದಿಂದ ಸಿಎಂ ಉಪಸ್ಥಿತಿಯಲ್ಲೂ ನಡೆದ ಸಭೆಗಳು, ಹೋರಾಟ, ಉಪವಾಸ, ಸತ್ಯಾಗ್ರಹಗಳು ಹತ್ತಾರು ಬಾರಿ ನಡೆದಿವೆ. ಕರಿಮನೆ ಸೇರಿದಂತೆ ಪ್ರತಿಭಟನಾ ಸಭೆಗಳಿಗೆ ಐದಾರು ಜಿಲ್ಲಾಧಿಕಾರಿಗಳು ಬಂದು ಹೋಗಿದ್ದಾರೆ ಎಂಬುದು ಬಿಟ್ಟರೇ ಯಾವುದೇ ಪ್ರಯೋಜನವಾಗಿಲ್ಲ.
ಸಿ.ಎನ್.ಡಿ ಲ್ಯಾಂಡ್ ಇಲ್ಲ:
ಇನ್ನು ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅರಣ್ಯ ಭೂಮಿಗೆ ಬದಲಾಗಿ ಕಂದಾಯ ಭೂಮಿಗೆ ನೀಡಬಹುದಾದ ಸಿ.ಎನ್.ಡಿ ಲ್ಯಾಂಡ್ ಇಡೀ ಕರಿಮನೆಯಲ್ಲಿ ಇಲ್ಲ. ಆದರೂ ಅಧಿಕಾರಿಗಳು ಮಾಡಿದ ತಪ್ಪಿಗೆ ಕರಿಮನೆಯ ನಿವಾಸಿಗಳು ಇಂದಿಗೂ ಪರದಾಡುವಂತಾಗಿದೆ.
ಯೋಜನೆಗೆ ತೋರುವ ಉತ್ಸಾಹ ಸೂರಿನ ಮೇಲೆ ಏಕಿಲ್ಲ?
ಹೌದು ಈ ಪ್ರಶ್ನೆ ಇಡೀ ಕರಿಮನೆ ನಿವಾಸಿಗಳನ್ನು ಕಾಡುತ್ತಿದೆ. ಜಿಲ್ಲಾಧಿಕಾರಿಗಳೇ ಬಂದರೂ.. ಸರ್ಕಾರದ ಮಟ್ಟದಲ್ಲಿ ಅರಣ್ಯ ಮತ್ತು ಕಂದಾಯ ಜಂಟಿ ಸಭೆಗಳು ನಡೆದರೂ ಮೂರು ದಶಕದಿಂದ ಬಗೆಹರಿಯದ ಸೂರಿನ ಹಕ್ಕು ಸಮಸ್ಯೆ.. ರೂ.420 ಕೋಟಿ ವೆಚ್ಚದ ಜೆಜೆಎಂ ಬಹುಗ್ರಾಮ ಕುಡಿಯುವ ನೀರು ಯೋಜನೆ (ಬೇರೆಡೆ ನೀರು ಕೊಂಡೊಯ್ಯುವ ಯೋಜನೆ) ಗೆ ಇತ್ಯರ್ಥವಾಗಿ ತರಾತುರಿಯಲ್ಲಿ ಭೂಮಿ ಮಂಜೂರಾಗುತ್ತದೆ ಎಂದರೆ ಏನರ್ಥ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಎರಡು ಜಲಾಶಯಗಳು:
ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ ಚಕ್ರಾ ಸಾವೇಹಕ್ಲು ಅವಳೀ ಜಲಾಶಯಗಳು ನಿರ್ಮಾಣ ಕಂಡಿವೆ. ಇದರಿಂದಾಗಿ ಇಲ್ಲಿಯ ಬಡರೈತ ಕೂಲಿಕಾರ್ಮಿಕರು ಮುಳುಗಡೆಯಾಗಿ ದಾಖಲೆ ಇಲ್ಲದೇ ಯಾವುದೇ ಪರಿಹಾರ ಸಿಗದೇ ಅತಂತ್ರರಾಗಿದ್ದರು. ಆ ಸಂತ್ರಸ್ಥರೇ ಏನೋ ಅಲ್ಲಲ್ಲಿ ಸೂರು ಕಟ್ಟಿಕೊಂಡು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಜಲಾಶಯದ ನೀರನ್ನು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ನೂರಾರು ಕೋಟಿ ಯೋಜನೆಯ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಆದರೆ ಜಲಾಶಯದಿಂದ ಬದುಕು ಕಳೆದುಕೊಂಡ ಸಂತ್ರಸ್ಥರ ಸೂರಿಗೆ ಮಾತ್ರ ಮನ್ನಣೆ ಇಲ್ಲದಂತಾಗಿದೆ.
ಜೆಜೆಎಂಗೆ ಭೂಮಿ ಮಂಜೂರಾಗಿದ್ದು ಹೇಗೆ?
1991-92 ರವರೆಗೆ ದನದ ಮುಫತ್ತು ಆಗಿದ್ದ ಸನಂ 106 ರಲ್ಲಿ ಯಾವುದೇ ನೋಟಿಫಿಕೇಶನ್ ಇಲ್ಲದೇ ಪಿಎಫ್ ದಾಖಲು ಮಾಡಿದ್ದು ಹೇಗೆ? ಇಲ್ಲಿಯ ಆಶ್ರಯ ನಿವೇಶನಗಳಿಗೆ, ಕಟ್ಟಿಕೊಂಡ ಮನೆಗಳ ಹಕ್ಕು ನೀಡಲು ಇದು ಸಮಸ್ಯೆ ಆಗುತ್ತದೆ ಎಂದರೆ, ಜೆಜೆಎಂ 4.20 ಎಕರೆ ಭೂಮಿ, ಸ್ಮಶಾನಕ್ಕೆ ತರಾತುರಿಯಲ್ಲಿ ಭೂಮಿ ಮಂಜೂರು ಮಾಡಿದ್ದು ಅಲ್ಲದೇ ಆರ್ಟಿಸಿ ನೀಡಿದ್ದಾದರೂ ಹೇಗೆ. ಇದು ಯಕ್ಷ ಪ್ರಶ್ನೆಯಾಗಿದೆ.
ಎಸ್.ಎಂ.ಹರೀಶ್, ಕಾರ್ಯದರ್ಶಿ ಅರಣ್ಯ ಹಕ್ಕು ಸಮಿತಿ
ಜನರಿಗೆ ನ್ಯಾಯ ನೀಡಲಾಗುತ್ತಿಲ್ಲ
ಪಂಚಾಯ್ತಿ ಕಚೇರಿ ಕಟ್ಟಡದ ಹಕ್ಕೇ ಸಿಕ್ಕಿಲ್ಲ. ಸನಂ 106 ರಲ್ಲಿ ಪಂಚಾಯ್ತಿ ಸೇರಿದಂತೆ ಸರ್ಕಾರಿ ಕಟ್ಟಡ, ಸಂತ್ರಸ್ಥರ ಮನೆಗಳು ಸೇರಿ 150 ಕ್ಕು ಹೆಚ್ಚು ಕಟ್ಟಡಗಳಿವೆ. ಯಾವುದಕ್ಕು ಮಾಲೀಕತ್ವ ಇಲ್ಲ. ಪಂಚಾಯ್ತಿ ಅಧ್ಯಕ್ಷರಾದರೂ ಕೂಡ ಜನರಿಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ
ದೇವಮ್ಮ ಗೋಪಾಲ್ ಗ್ರಾಪಂ ಅಧ್ಯಕ್ಷರು
ಚರ್ಚೆ ಬೇಡ
ಕರಿಮನೆ ಸಮಸ್ಯೆ ಬಗೆಹರಿಸಲು ಬಂದಿದ್ದೇನೆ. ಈ ಬಗ್ಗೆ ಚರ್ಚೆ ಬೇಡ.. ಚರ್ಚೆಯೇ ನಡೆದರೇ ಸಮಸ್ಯೆ ಬಗೆಹರಿಯಲು ಇನ್ನು ಇನ್ನೂ 20 ವರ್ಷ ಮುಂದಕ್ಕೆ ಹೋಗುತ್ತದೆ. ಇನ್ನು ಐದಾರು ಜಿಲ್ಲಾಧಿಕಾರಿಗಳು ಬಂದು ಹೋಗಬೇಕಾಗುತ್ತದೆ. ಒಟ್ಟಿನಲ್ಲಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಗುರುದತ್ ಹೆಗಡೆ, ಜಿಲ್ಲಾಧಿಕಾರಿ
(ಇತ್ತೀಚೆಗೆ ಕರಿಮನೆಯಲ್ಲಿ ನಡೆದ ಸಭೆಯಲ್ಲಿ)
ಅಧಿಕಾರಿಗಳ ತಪ್ಪಿಗೆ ಜನರು ಅತಂತ್ರ
ಕರಿಮನೆ ಸಮಸ್ಯೆ ಹಲವು ದಶಕದಿಂದ ಇದೆ. ಅಧಿಕಾರಿಗಳ ತಪ್ಪಿಗೆ ಜನರ ಬದುಕು ಅತಂತ್ರವಾಗಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ವಯಂ ಪ್ರೇರಣೆಯಿಂದ ಬಂದು ಸಭೆ ನಡೆಸಿದ್ದಾರೆ. ಸಮಸ್ಯೆ ಇತ್ಯರ್ಥ ಪಡಿಸುವ ಬಗ್ಗೆ ಅವರ ಮೇಲೆ ವಿಶ್ವಾಸವಿದೆ
ಆರಗ ಜ್ಞಾನೇಂದ್ರ, ಶಾಸಕ
