
ಬಡ ಅಂಗವಿಕಲ ಕುಟುಂಬಕ್ಕೆ ಸೂರು ನಿರ್ಮಿಸಲು ಮುಂದಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮತ್ತು ತಂಡ| ಮನೆ ಉದ್ಘಾಟನೆಗೆ ನೀವೇ ಬನ್ನಿ ಎಂದ ಕಾಡಿಗ್ಗೇರಿ ಗ್ರಾಮಸ್ಥರು
ಹೊಸನಗರ: ಶಿಥಿಲಗೊಂಡ ಮನೆ ಈಗಲೋ ಆಗಲೋ ಎಂಬಂತ ಸ್ಥಿತಿಯಲ್ಲಿ ಬಡ ಕುಟುಂಬಕ್ಕೆ ಗ್ರಾಮಸ್ಥರ ಸಹಕಾರದೊಂದಿಗೆ ಸೂರು ನಿರ್ಮಿಸಿಕೊಡಲು ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮತ್ತು ಅವರ ತಂಡ ಮುಂದಾಗಿದೆ.
ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಾಡಿಗ್ಗೇರಿ ನಿವಾಸಿ ಅನಂದು ಎಂಬುವವರ ಮನೆ ಸಂಪೂರ್ಣ ಶಿಥಿಲಗೊಂಡಿದ್ದು ಇನ್ನೊಂದು ಮಳೆಗೆ ಕುಸಿಯುವ ಆತಂಕದಲ್ಲಿದೆ. ಆನಂದು ಕುಟುಂಬಕ್ಕೆ ಬಡತನ ಬಾಧಿಸುತ್ತಿದ್ದು ಮಾತ್ರವಲ್ಲ ಅಂಗವಿಕಲರು ಕೂಡ ಹೌದು. ಆನಂದು ಎಂಬುವವರಿಗೆ ಬಾಯಿ ಬರುವುದಿಲ್ಲ. ಅವರ ಪತ್ನಿಗೆ ಕಿವಿ ಕೇಳಿಸುವುದಿಲ್ಲ. ವೃದ್ಧ ದಂಪತಿಯಾದ ಕಾರಣ ಕೂಲಿ ಮಾಡಿ ಬದುಕುವುದು ಕೂಡ ಕಷ್ಟ.
ಗ್ರಾಮಸ್ಥರ ಕೋರಿಕೆ ಮೇರೆಗೆ ಸ್ಥಳಕ್ಕೆ ಧಾವಿಸಿದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮತ್ತು ತಂಡ ನೆರವಿಗೆ ಮುಂದಾಗಿದೆ.


ರು. 10 ಸಾವಿರ ಆರಂಭಿಕ ನೆರವು ನೀಡಿ ನಾವೆಲ್ಲ ಸೇರಿ 50 ಸಾವಿರ ನೆರವು ನೀಡುವುದಾಗಿ ತಿಳಿಸಿದರು. ಗ್ರಾಮಸ್ಥರ ಪರವಾಗಿ ಮಾತನಾಡಿದ ಕಾಡಿಗ್ಗೇರಿ ಕೃಷ್ಣಮೂರ್ತಿ, ಸೂರು ನಿರ್ಮಿಸಿಲು ಗ್ರಾಮಸ್ಥರೆಲ್ಲ ಸಹಕಾರ ನೀಡುತ್ತೇವೆ. ನೀವೇ ಮುಂದೆ ನಿಂತು ನಿರ್ಮಿಸಿಕೊಡಿ ಮತ್ತು ಮನೆಯ ಉದ್ಘಾಟನೆ ಕೂಡ ನಿಮ್ಮಿಂದ ಆಗಲಿ ಎಂದು ಮನವಿ ಮಾಡಿದರು.
ಈ ವೇಳೆ ಗ್ರಾಪಂ ಸದಸ್ಯ ಕರುಣಾಕರ ಶೆಟ್ಟಿ, ತಾಪಂ ಮಾಜಿ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಪಿಕಾರ್ಡ್ ಬ್ಯಾಂಕ್ ಸದಸ್ಯ ಸತೀಶ್ ಪಟೇಲ್, ಗ್ರಾಪಂ ಸದಸ್ಯ ಪ್ರಕಾಶ್ ಮಳಲಿ, ಪವನ್ ನಗರ, ವಿಶ್ವನಾಥ್ ಎಂ, ಬೈಸೆ ಮಹೇಶ್ ಗೌಡ, ಸುಭಾಷ್, ಸ್ಥಳೀಯರು ಸಾಥ್ ನೀಡಿದರು.
ವೃದ್ಧ ಅನಂದೂ ದಂಪತಿಗಳು ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
