
ತೀರ್ಥಹಳ್ಳಿ ಜು.26: ನನ್ನ ವಿರುದ್ಧ ಕಿಮ್ಮನೆ ನೂರು ಪತ್ರ ಬರೆಯಲಿ ನಾನು ಕಾಂಗ್ರೆಸ್ ಬಿಡೋ ಮಾತೆ ಇಲ್ಲ ಕಾಂಗ್ರೆಸ್ ಪ್ರಮುಖ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಕಿಡಿಕಾರಿದ್ದಾರೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತನ್ನ ವಿರುದ್ಧ ಬರೆದ ಬಹಿರಂಗ ಪತ್ರ ಉಲ್ಲೇಖಿಸಿದ ಅವರು, ನನಗೂ ಮನಸ್ಸು ಇದೆ, ನೋವಿದೆ, ಎಲ್ಲಿಯವರೆಗೆ ತಡೆದುಕೊಳ್ಳಬೇಕು. ಪಕ್ಷ ವಿರೋಧಿ ಚಟುವಟಿಕೆ ಯಾರು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ನಾನು ಟಿಕೇಟ್ ಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ. ಡಿ.ಕೆ.ಶಿವಕುಮಾರ್ ನನ್ನ ಆತ್ಮೀಯರು. ಅಂದು ಸಹಕಾರ ಸಚಿವರಾಗಿದ್ದರು. ಇಂದು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಅವರು ವಯಕ್ತಿಕ ಎತ್ತರಕ್ಕೆ ಬೆಳೆಯಬೇಕು. ಜಾತ್ಯಾತೀತ ಮತ್ತು ಹಗಲಿರುಳು ಪಕ್ಷಕ್ಕಾಗಿ ದುಡಿಯುವ ಅವರಿಗೆ ಪಕ್ಷ ಮುನ್ನೆಡೆಸುವ ಸಾಮರ್ಥ್ಯವಿದೆ. ಈ ಆಶಯದೊಂದಿಗೆ ಕಾಂಗ್ರೆಸ್ ಸೇರಿದ್ದೇನೆ. ಟಿಕೇಟ್ ಗಾಗಿ ಅಲ್ಲ.. ಆದರೆ ನಾನೊಬ್ವ ಆಕಾಂಕ್ಷಿ ಎಂದು ಸ್ಪಷ್ಟ ಪಡಿಸಿದರು.
ಪಕ್ಷ ವಿರೋಧಿ ಚಟುವಟಿಕೆ ಯಾರು ಮಾಡುತ್ತಿದ್ದಾರೆ ನಾನಾ.. ಅವರಾ.? ಅಸಾದಿ ವಿರುದ್ಧ ಬಂಡಾಯ ಎದ್ದವರು ಇನ್ನು ಕಾಂಗ್ರೆಸ್ ನಲ್ಲಿದ್ದಾರೆ. ಅಂತವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಅನೇಕ ಹಿರಿಯರು ದೂರ ಹೋಗಿದ್ದು ಏಕೆ?
ಡಿ.ಬಿ.ಚಂದ್ರೇಗೌಡರನ್ನು ಯಾರು ಬಿಡಿಸಿದ್ರು, ಸ್ವರ್ಣ ಪ್ರಬಾಕರ್ ಯಾಕೆ ರಾಜಕೀಯ ಬಿಟ್ರು, ಖಂಡಿಕಾ ಕೃಷ್ಣಮೂರ್ತಿ ಯಾಕೆ ಸೋತ್ರು, ಕಡಿದಾಳ್ ದಿವಾಕರ್ ಯಾಕೆ ಹೊರಗಡೆ ಹೋದ್ರು, ಹೀಗೆ ಬಹಳ ಜನ ರಾಜಕೀಯದ ಹಿರಿಯರು ಯಾಕೆ ಮನೆ ಸೇರಿದ್ರು ಎಂಬುದು ನನಗೆ ಗೊತ್ತು ಮುಂದಿನದಲ್ಲಿ ಎಲ್ಲವನ್ನು ತೆರೆದಿಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ನಾನು ಇಲ್ಲಿಯವರೆಗೆ ಮಾತನಾಡದೇ ಸುಮ್ಮನಿದ್ದೆ ಎಂದರೆ ಕಾಂಗ್ರೆಸ್ ಕಾರ್ಯಕರ್ತರನ್ನು ನೈತಿಕವಾಗಿ ಕುಗ್ಗಿಸಬಾರದು, ಅವರ ಮನಸ್ಸು ನೋಯಿಸಬಾರದು. ಕಾರ್ಯಕರ್ತರಿಂದಲೇ ಪಕ್ಷ ಇರೋದು. ನನಗೆ ಏನೇನು ತೊಂದರೆ ಕೊಟ್ಟಿದ್ದಾರೆ, ಬೆನ್ನಿಗೆ ಚೂರಿ ಹಾಕಿದ್ದಾರೆ ಎನ್ನೋದು ಗೊತ್ತು ಎಂದು ಚಾಟಿ ಬೀಸಿದ್ದಾರೆ.
ನಾನು 100 ಪತ್ರ ಬರೆಯುತ್ತೇನೆ ನನಗೆ ಸ್ವಾಭಿಮಾನ, ಆತ್ಮಗೌರವವಿದೆ. ನನ್ನ ಬಗ್ಗೆ ಜನರು ಕಾರ್ಯಕರ್ತರು ತಪ್ಪು ತಿಳಿಬಾರದು ಅಲ್ವಾ ಅದಕ್ಕಾಗಿ ಪತ್ರ ಬರೆಯುತ್ತೇನೆ ಎಂದಿದ್ದಾರೆ.
ನನ್ನನ್ನು ಹೀಯಾಳಿಸುವವರಿಗೆ, ದೂಷಿಸುವವರಿಗೆ ನನ್ನ ಸಾಮರ್ಥ್ಯ ಏನು ಅಂತ ಗೊತ್ತಿದೆ. ಎದೆ ಗುಂದುವ ಪ್ರಶ್ನೆಯೂ ಇಲ್ಲ ಪಕ್ಷ ಬಿಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವಂತಹ ಐತಿಹಾಸಿಕ ಪಾದಯಾತ್ರೆ ಅಂದುಕೊಂಡಂತೆ ನಡೆಯಲಿದೆ. ಐತಿಹಾಸಿಕ ಪಾದಯಾತ್ರೆಯನ್ನು ಯಾರಾದರೂ ತಡೆಯುತ್ತೇನೆ ಎಂದು ಭಾವಿಸಿದ್ದರೆ ಅವರ ಭ್ರಮೆ ಎಂದು ತೀಕ್ಷ್ಣವಾಗಿ ಪ್ರತಿಕ್ರಯಿಸಿದ್ದಾರೆ.
