
-
UDUPI| ಶ್ರೀ ಕೊಲ್ಲೂರಿನಲ್ಲಿ ವಿಶೇಷ ಪೂಜೆ ಮಾಡಿಸಿ ಕೊಡುವುದಾಗಿ ನಂಬಿಸಿ ವಂಚನೆ | ರೂ.30,73,600 ಹಣ ವಂಚನೆ ಆರೋಪ | ಕೊಲ್ಲೂರು ಠಾಣೆಗೆ ದೂರು ನೀಡಿದ ಬೆಂಗಳೂರು ಮೂಲದ ದಿಲ್ನಾ
ಕೊಲ್ಲೂರು (ಉಡುಪಿ)| ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಎಂದು ನಂಬಿಸಿದ ವ್ಯಕ್ತಿಯೊಬ್ಬ ಬೆಂಗಳೂರು ಮೂಲದ ಕುಟುಂಬವೊಂದಕ್ಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ ರೂ.30.73 ಲಕ್ಷ ವಂಚಿಸಿದ ಪ್ರಕರಣ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೊಲ್ಲೂರು ಮೂಲದ ಸುಧೀರ್ ಎಂಬಾತ ವಂಚನೆ ಎಸಗಿರುವ ಆರೋಪಿ. ಬೆಂಗಳೂರಿನ ದಿಲ್ನಾ ಎಂಬಾಕೆ ತನ್ನ ಪತಿ ಮತ್ತು ಕುಟುಂಬದವರೊಂದಿಗೆ ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದು, ಈವೇಳೆ ತನ್ನ ಸಹೋದರ ದಿಲೀಶ್ ಗೆ ಕೆಲವು ಸಮಯದಿಂದ ಪರಿಚಯವಿದ್ದ ಸುಧೀರ್ ಎಂಬಾತನ ಪರಿಚಯವಾಗಿದೆ. ತಾನು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಎಂದು ನಂಬಿಸಿ ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ ಹಣ ಹಾಕುವಂತೆ ಹೇಳಿದ್ದಾನೆ. ಅಲ್ಲದೇ ದಿಲ್ಲಾ ಅವರ ತಾಯಿಗೆ ಸಂಬಂಧಿಸಿದ ಜಾಗದ ಖಾತೆ ಬದಲಾವಣೆ ಮಾಡಿಸಿಕೊಡುವುದಾಗಿ ಹೇಳಿರುವ ಆತ ವಿದೇಶದಲ್ಲಿರುವ ದಿಲ್ನಾ ಮತ್ತು ಆಕೆಯ ಸಹೋದರ ದಿಲೀಶ್ ರಿಂದ ಒಟ್ಟು ರೂ.30,73,600 ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.


ಆದರೆ ಕೊಲ್ಲೂರಿನಲ್ಲಿ ಯಾವುದೇ ವಿಶೇಷ ಪೂಜೆ ಮಾಡಿಸದೇ ಇರುವುದು ಮತ್ತು ಖಾತೆ ಬದಲು ಮಾಡಿಸಿಕೊಡದ ಹಿನ್ನೆಲೆಯಲ್ಲಿ ಸಂಶಯಗೊಂಡು ದೇವಸ್ಥಾನಕ್ಕೆ ಬಂದು ವಿಚಾರಿಸಿದಾಗ ಸುಧೀರ್ ಎನ್ನುವ ವ್ಯಕ್ತಿ ಆಡಳಿತ ಮಂಡಳಿಯ ಸದಸ್ಯನಲ್ಲ ಎಂದು ತಿಳಿದುಬಂದಿದೆ. ವಂಚನೆಗೊಳಗಾದ ದಿಲ್ನಾ, ಸುಧೀರ್ ಎಂಬ ವ್ಯಕ್ತಿಯ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಿಖಾ ವಿಭಾಗದ ಪಿಎಸ್ಐ ಸುಧಾರಾಣಿ ಟಿ.ಪ್ರಕರಣ ದಾಖಲಿಸಿದ್ದಾರೆ.
