
ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..!
ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.!
ಹೊಸನಗರ: ಮೇಲ್ನೋಟಕ್ಕೆ ನೋಡಿದ್ರೆ.. ಇಲ್ಲಿ ಯಾವುದೋ ಗುಡ್ಡ ಗಾಡು ಪ್ರದೇಶದಲ್ಲಿ ಕಾರ್ ರೇಸ್ ನಡೆಯುತ್ತಿದೆ ಎಂದೇ ಹೇಳಬೇಕು.. ಆದ್ರೆ ಇದು ಶಿವಮೊಗ್ಗ ಜಿಲ್ಲೆಯ ಪ್ರಮುಖ ಹೆದ್ದಾರಿಯ ದುರಾವಸ್ಥೆ ಇದು..
ಹೌದು ತಾಲೂಕಿನ ಮಾಸ್ತಿಕಟ್ಟೆ ಯಿಂದ ಯಡೂರು ತೀರ್ಥಹಳ್ಳಿ ಮುಖ್ಯ ಹೆದ್ದಾರಿಯಲ್ಲಿ ಸಿಗುವ ಕರಿಕೆಹಕ್ಕಲು ಸೇತುವೆ ಬಳಿಯ ಬೃಹತ್ ತಿರುವಿನ ದುಸ್ಥಿತಿ ಇದು.


ಪ್ರಮುಖ ರಸ್ತೆ:
ಹೇಳಿ ಕೇಳಿ ಮಾಸ್ತಿಕಟ್ಟೆ ಯಿಂದ ತೀರ್ಥಹಳ್ಳಿ ಪ್ರಮುಖ ವಾಹನ ದಟ್ಟನೆ ಇರುವ ಮಾರ್ಗ. ದಿನಂಪ್ರತಿ ನೂರಾರು ಬಸ್ಸುಗಳು ಇದೇ ಮಾರ್ಗ ಬಳಸಿ ಶಿವಮೊಗ್ಗ, ಕುಂದಾಪುರ, ಉಡುಪಿ, ಮಂಗಳೂರು, ಕಾರ್ಕಳ, ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಸಂಪರ್ಕ ಸಾಧಿಸುತ್ತವೆ. ಅಲ್ಲದೆ ಹುಲಿಕಲ್ ಘಾಟ್ ಮುಖೇನ ಬರುವ ಸರಕು ಲಾರಿಗಳು ಕೂಡ ಇದೆ ಮಾರ್ಗದಲ್ಲಿ ಸಂಚರಿಸುತ್ತವೆ.
ಅಪಾಯಕ್ಕೆ ರಹದಾರಿ:
ಕಡಿದಾದ ತಿರುವುಗಳಿಂದ ಕೂಡಿದ ಈ ಮಾರ್ಗದಲ್ಲಿ ಉಳುಕೋಪ್ಪ ಸುಳುಗೋಡು ಮದ್ಯದ ಕರಿಕೆಹಕ್ಕಲು ಸೇತುವೆ ಸಮೀಪದ ಕ್ರಾಸ್ ಬಾರಿ ಅಪಾಯಕಾರಿಯಾಗಿದೆ. ರಸ್ತೆ ಉತ್ತಮವಾಗಿದ್ದರೆ ಸಂಚಾರ ಕಷ್ಟ ಎಂಬಂತಿದೆ. ಅದರಲ್ಲೂ ರಸ್ತೆ ಸಂಪೂರ್ಣ ಹಾಳಾಗಿ.. ಹೊಂಡ ಗುಂಡಿಗಳಿಂದ ತುಂಬಿ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿದ್ದು.. ಈ ತಿರುವಿನಲ್ಲಿ ಸಾಗಲು ಎಂಟದೆ ಬೇಕು ಎನ್ನುವಂತಿದೆ. ರಸ್ತೆಯಲ್ಲಿ ಸಂಚಾರ ಕಷ್ಟವಾದ ಕಾರಣ ರಸ್ತೆ ಬದಿಯನ್ನು ವಾಹನ ಸವಾರರು ಬಳಸಿ ಸಾಗುತ್ತಿದ್ದು.. ಕಾರ್ ರೇಸ್ ಗೆ ಹೇಳಿ ಮಾಡಿಸಿದಂತೆ.. ಸ್ಪರ್ಧಾ ಕಣ ಸಜ್ಜುಗೊಂಡಂತಿದೆ.
ರೂ.16 ಲಕ್ಷದಲ್ಲಿ ದುರಸ್ತಿ:
ಈಗಾಗಲೇ ನಗರದಿಂದ ಕಾನುಗೋಡು 8 ಕಿಮೀ, ಮಾಸ್ತಿಕಟ್ಟೆ ಯಿಂದ ಯಡೂರು ವರೆಗೆ, ಹೊಸನಗರ ತಾಲೂಕು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ವರೆಗೆ 20 ಕಿಮೀ ರಸ್ತೆ ದುರಸ್ತಿಗೆ ರು.16 ಲಕ್ಷ ವೆಚ್ಚ ಮಾಡಲಾಗಿದೆ. ಆದರೆ ಈ ತಿರುವನ್ನು ಮಾತ್ರ ದುರಸ್ತಿ ಮಾಡದೆ ಹಾಗೆ ಬಿಡಲಾಗಿದೆ.
ರಸ್ತೆ ನಿರ್ವಹಣೆಗೆ ಮುಕ್ಕಾಲು ಇಂಚ್ ಡಾಂಬರೀಕರಣ ಮಾಡಿ ನಿರ್ವಹಿಸಲಾಗಿದೆ. ಆದರೆ ತಿರುವು ಸಂಪೂರ್ಣ ಹಾಳಾಗಿದ್ದು ಈ ನಿರ್ವಹಣೆ ಸಾಲದು. ಹೀಗಾಗಿ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಡಲಾಗಿದೆ. ಹಣ ಬಂದ ನಂತರ ತಿರುವು ದುರಸ್ತಿ ಮಾಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ನಿರ್ಲಕ್ಷ್ಯ:
ಮಾಸ್ತಿಕಟ್ಟೆ ಯಿಂದ ಯಡೂರು ಮಾರ್ಗದ ತೀರ್ಥಹಳ್ಳಿ ವರೆಗಿನ 32 ಕಿಮೀ ರಸ್ತೆ.. ಅಭಿವೃದ್ಧಿಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. 15 ವರ್ಷದ ಹಿಂದೆ ಒಂದಷ್ಟು ಅಭಿವೃದ್ಧಿ ಮಾಡಲಾಗಿದ್ದು ಹೊರತು ಪಡಿಸಿದರೆ.. ಮತ್ತೆ ಗಮನಹರಿಸಿಲ್ಲ. ತೀರ್ಥಹಳ್ಳಿ ತಾಲೂಕಿನ ಕೈಮರ ನಿಂದ ಶಂಕರಮನೆ ವರೆಗೆ ರಸ್ತೆ ಅಭಿವೃದ್ಧಿಗೆ ಶಾಸಕ ಆರಗ ಜ್ಞಾನೇಂದ್ರ ತಮ್ಮ ಪ್ರದೇಶಾಭಿವೃದ್ಧಿ ಅನುದಾನದಿಂದ ರು.2ಕೋಟಿ ನೀಡಿದ್ದಾರೆ. ಆದರೆ ಕಳೆದ ಎರಡು ತಿಂಗಳ ಹಿಂದೆ ಹಳೆ ರಸ್ತೆ ಅಗೆದು ಅದನ್ನೇ ಸಮತಟ್ಟು ಮಾಡಲಾಗಿದೆ. ಅದಕ್ಕೆ ವೆಟ್ ಮಿಕ್ಸ್ ಆಗಲಿ.. ಬೇರೆ ಕಾಮಗಾರಿಯನ್ನು ಮುಂದುವರೆಸಿಲ್ಲ.. ಕೇಳಿದರೆ.. ಇನ್ನೂ ಸೆಟ್ ಆಗಬೇಕು ಅಂತಾರೆ. ಒಟ್ಟಾರೆ ಕಾಮಗಾರಿ ವಿಳಂಬ ಆಗುತ್ತಿದೆ ಎಂಬುದು ಸ್ಥಳೀಯರ ಆರೋಪ.
ಹಂಪ್ ಸಮಸ್ಯೆ: ಮಾರ್ಗ ಸೂಚಿ ಫಲಕ ಇಲ್ಲ!
ಮಾಸ್ತಿಕಟ್ಟೆ ಯಿಂದ ಯಡೂರು ವರೆಗೆ ಅಲ್ಲಲ್ಲಿ ಹಂಪ್ ಹಾಕಲಾಗಿದೆ. ಆದರೆ ಬಣ್ಣ ಹಾಕದ ಕಾರಣ ಸವಾರರಿಗೆ ಸಮಸ್ಯೆಯಾಗಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಇನ್ನು ಕಡಿದಾದ ತಿರುವುಗಳು ಇದ್ದರು ಕೂಡ ಮಾರ್ಗಸೂಚಿ ಫಲಕ ಹಾಕದೆ ಸಂಚಾರಕ್ಕೆ ಸಮಸ್ಯೆ ಯಾಗಿದೆ.
ರಸ್ತೆ ಅಭಿವೃದ್ಧಿ ಮಾಡದೆ 15 ವರ್ಷ ಆಯ್ತು:
ಕಳೆದ 15 ವರ್ಷದ ಹಿಂದೆ ತೀರ್ಥಹಳ್ಳಿ ಯಡೂರು ರಸ್ತೆಯ ಸಮಗ್ರ ಅಭಿವೃದ್ಧಿ ಆಗಿದ್ದು ಬಿಟ್ಟರೆ ನಂತರ ಗಮನ ಹರಿಸಿಲ್ಲ. ಕೈಮರದಿಂದ ಶಂಕರಮನೆ ವರೆಗೆ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ಅನುದಾನದಿಂದ 2 ಕೋಟಿ ನೀಡಿದ್ದಾರೆ. ಆದರೆ ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸದೆ ರಸ್ತೆ ಅಗೆದು ಹಾಗೆ ಬಿಟ್ಟು ಸಂಚಾರಕ್ಕೆ ಇನ್ನಷ್ಟು ಸಮಸ್ಯೆ ಆಗಿದೆ. ಕಾಮಗಾರಿ ವಿಳಂಬ ಆಗುತ್ತಿದೆ.
ರಾಜಾರಾಂ ಯಡೂರು, ಸ್ಥಳೀಯರು.
ಬಣ್ಣ ಕಾಣದ ಹಂಪ್:
ಯಡೂರು ರಸ್ತೆಯಲ್ಲಿ ಸಾಕಷ್ಟು ತಿರುವುಗಳಿವೆ. ಆದರೆ ಮಾರ್ಗ ಸೂಚಿ ಫಲಕಗಳಿಲ್ಲ. ಅಲ್ಲದೆ ಅಲ್ಲಲ್ಲಿ ಹಂಪ್ ಹಾಕಲಾಗಿದೆ. ಆದರೆ ಹಂಪ್ ಗೆ ಬಣ್ಣ ಹಾಕದೆ ಅಪಘಾತಕ್ಕೆ ದಾರಿ ಮಾಡಿಕೊಟ್ಟಂತೆ ಆಗಿದೆ.
ದಿನೇಶ್ ಯಡೂರು, ಗ್ರಾಪಂ ಮಾಜಿ ಸದಸ್ಯರು
ಸವಾರರಿಗೆ ಸಮಸ್ಯೆ:
ಈ ತಿರುವು ಬಹಳ ದುರ್ಗಮವಾಗಿದ್ದು ಈ ರಸ್ತೆಯಲ್ಲಿ ದೊಡ್ಡ ಲಾರಿಗಳು ಹೆಚ್ಚಿನ ಸಂಚಾರವಿದ್ದು, ಇಲ್ಲಿ ಬೈಕು, ಕಾರ್ ಸವಾರರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ತಕ್ಷಣ ಗಮನಹರಿಸಲಿ.
ಟಿ.ಎನ್.ಚಂದ್ರಕುಮಾರ್, ವಾಹನ ಸವಾರರು.
4 ಲಕ್ಷ ಅನುದಾನಕ್ಕೆ ಬೇಡಿಕೆ:
ಈಗಾಗಲೇ ಮಾಸ್ತಿಕಟ್ಟೆ ಯಡೂರು ರಸ್ತೆ ನಿರ್ವಹಣೆ ಮಾಡಲಾಗಿದೆ. ತಿರುವು ದುರಸ್ತಿಗಾಗಿ ರು.4 ಲಕ್ಷ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಹತ್ತು ದಿನದೊಳಗೆ ತುರ್ತು ದುರಸ್ತಿ ಮಾಡಲಾಗುವುದು.
ಸುನೀಲ್ ಕುಮಾರ್ ಎಇಇ ಹೊಸನಗರ
ಅಧಿಕಾರಿಗಳಿಗೆ ಸೂಚನೆ:
ಕೈಮರ ಶಂಕರಮನೆ ರಸ್ತೆಗೆ 2 ಕೋಟಿ ನೀಡಲಾಗಿದೆ. ಟೆಂಡರ್ ಶೀಘ್ರ ತೆರೆಯಲಿದ್ದು ಕೂಡಲೇ ಕಾಮಗಾರಿ ನಿರ್ವಹಿಸಲಾಗುವುದು. ಇನ್ನು ಉಳುಕೊಪ್ಪ ತಿರುವು ಕೂಡಲೇ ದುರಸ್ತಿ ಮತ್ತು, ಹಂಪ್, ಮಾರ್ಗಸೂಚಿ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು
ಆರಗ ಜ್ಞಾನೇಂದ್ರ, ಶಾಸಕರು.
