
ಮೆಸ್ಕಾಂ ಇಲಾಖೆಯಿಂದ ನೂತನ ಲಾರಿಗಳಿಗೆ ಚಾಲನೆ | ಹೊಸನಗರಕ್ಕು ಬರಲಿದೆ ಹೊಸ ಲಾರಿ | ಬಹುಕಾಲದ ಬೇಡಿಕೆ ಈಡೇರಿಕೆ| ಮೆಸ್ಕಾಂ ಇಲಾಖೆಯಲ್ಲಿ ಮನೆಮಾಡಿದ ಸಂಭ್ರಮ
ಸಾಗರ/ಹೊಸನಗರ: ಮೆಸ್ಕಾಂ ಸಾಗರ ಉಪವಿಭಾಗದ ವತಿಯಿಂದ ಮಂಜೂರಾಗಿರುವ ನೂತನ ಲಾರಿಗಳಿಗೆ ಆ.07 ಬುಧವಾರ ಶಾಸಕರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಲಿದ್ದಾರೆ.
ಸಾಗರ ಮೆಸ್ಕಾಂ ಕಚೇರಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಹೊಸನಗರ ಮೆಸ್ಕಾಂ ಇಲಾಖೆಗೂ ಹೊಸ ಲಾರಿ ಮಂಜೂರಾಗಿದ್ದು, ಮೆಸ್ಕಾಂ ಕಚೇರಿ, ಸಿಬ್ಬಂದಿಗಳು, ಗುತ್ತಿಗೆದಾರರು, ಕಾರ್ಮಿಕರಲ್ಲಿ ಸಂಭ್ರಮ ಮನೆ ಮಾಡಿದೆ.


ಹೊಸನಗರಕ್ಕು ಹೊಸ ಲಾರಿ: ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಹೊಸನಗರ ತಾಲೂಕಿನ ಮೆಸ್ಕಾಂ ಇಲಾಖೆ ಸೂಕ್ತ ವಾಹನ ಇಲ್ಲದೇ ವಿದ್ಯುತ್ ಸಂಪರ್ಕ, ನಿರ್ವಹಣೆಗೆ ತೊಂದರೆಯಾಗಿತ್ತು. ಇದ್ದ ಲಾರಿ ಅವಧಿ ಮುಗಿದು ಶೆಡ್ ಸೇರಿತ್ತು. ಈ ಬಗ್ಗೆ ಗಮನಸೆಳೆದ ನಂತರ ಬೇರೆ ಲಾರಿ ಕಳುಹಿಸಿಕೊಡಲಾಯಿತು. ಅದು ಕೂಡ ಸಂಚಾರಕ್ಕೆ ಯೋಗ್ಯವಲ್ಲದ ಕಾರಣ ಬರಬರುತ್ತಿದ್ದಂತೆ ಶೆಡ್ ಪಾಲಾಗಿತ್ತು. ಈ ಬಗ್ಗೆ ಕೂಡ ಮಾಧ್ಯಮದ ಮೂಲಕ ಬೆಳಕು ಚೆಲ್ಲಲಾಗಿತ್ತು. ಇದೀಗ ಆ ಸಮಸ್ಯೆ ಈಡೇರುವ ಸಮಯ ಬಂದಿದೆ.
ಅರಸಾಳಿನಿಂದ ನಿಟ್ಟೂರು ವರೆಗೆ, ಪುರಪ್ಪೇಮನೆಯಿಂದ ಯಡೂರು ವರೆಗೆ, ಮಾತ್ರವಲ್ಲ ಮಾಣಿ ಜಲಾಶಯದ ಆಚೆಗಿರುವ ಕೊರನಕೋಟೆ ಸುತ್ತಮುತ್ತಲಿನ ಗ್ರಾಮದ ವಿದ್ಯುತ್ ಸಮಸ್ಯೆಯನ್ನು ಹೊಸನಗರ ಮೆಸ್ಕಾಂ ಇಲಾಖೆಯಿಂದಲೇ ನಿರ್ವಹಿಸಬೇಕಿತ್ತು. ಅದರಲ್ಲು ಲಾರಿ ಇಲ್ಲದೇ ವಿದ್ಯುತ್ ಕಂಬಗಳು, ಪರಿವರ್ತಕ ಸರಬರಾಜು ಮಾಡಲು ಹೆಣಗಾಡಬೇಕಿತ್ತು. ಸಕಾಲದಲ್ಲಿ ಸೇವೆ ಸಲ್ಲಿಸಲು ಕೂಡ ಕಷ್ಟವಾಗಿತ್ತು. ಇದೀಗ ಹೊಸ ಲಾರಿ ಮಂಜೂರಾದ ಹಿನ್ನೆಲೆಯಲ್ಲಿ ಮೆಸ್ಕಾಂ ಇಲಾಖೆ, ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ.
