
ಮೆಟ್ಕಲ್ಲು ಗುಡ್ಡ
ಪ್ರತಿಸಲ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಬಾಳೆಬರೆ ಘಾಟಿ ದೇವಸ್ಥಾನಕ್ಕೆ ಹೋದಾಗ ಅಥವಾ ಕುಂದಾಪುರ- ಉಡುಪಿಗೆ ಈ ಮಾರ್ಗದಲ್ಲಿ ಹೋಗುವಾಗ ಘಾಟಿ ದೇವಸ್ಥಾನ ದಾಟಿದಾಗ ಸಿಗುವ ಮೊದಲ ತಿರುವಿನಲ್ಲಿ ನಿಂತು ಪ್ರಕೃತಿಯ ಸೌಂದರ್ಯವನ್ನ ಸವಿಯುವ ಅಭ್ಯಾಸ ಹೆಚ್ಚು. ಅಲ್ಲಿ ನಿಂತಾಗ ದೂರದಲ್ಲಿ ಒಂದು ಬೆಟ್ಟದ ತುದಿಯಲ್ಲಿರುವ ಒಂದು ಸಣ್ಣ ಗಣೇಶ ದೇವಾಲಯ ಯಾವತ್ತೂ ಕಣ್ಣಿಗೆ ಬೀಳುತ್ತಿತ್ತು.
ಕೆಲವರಲ್ಲಿ ಕೇಳಿದ ಹಾಗೆ ಅದರ ಹೆಸರು ಮೆಟ್ಕಲ್ಲು ಗುಡ್ಡ ಮತ್ತು ಅಲ್ಲಿ ಪುರಾತನ ಗಣಪತಿಯ ದೇವಾಲಯವಿದೆ ಮತ್ತು ಅಲ್ಲಿ ಹಾಳಾದ ಕೋಟೆ ಮತ್ತು ಸುತ್ತಮುತ್ತಲಿನ ಸುಂದರವಾದ ಹಸಿರು ಕಣಿವೆಗಳು ಮತ್ತು ಹಾಲಿನ ಜಲಪಾತಗಳ ಅತ್ಯುತ್ತಮ ನೋಡಬಹುದು ಎಂದು ಹೇಳಿದ್ದರು. ಈ ಸ್ಥಳ ಬಹಳ ಜನಪ್ರಿಯವಾಗಿದೆ. ಅಲ್ಲಿ ನಿಂತರೆ ಬೆಟ್ಟದ ತುದಿಯಿಂದ ಕುಂಚಿಕಲ್ ಜಲಪಾತಗಳನ್ನು ಸುಲಭವಾಗಿ ಗುರುತಿಸಬಹುದು ಎಂದು ಹೇಳಿದ್ದರು.
ಮುಖ್ಯವಾಗಿ ಮೆಟ್ಕಲ್ ಗುಡ್ಡವು ಬಿದನೂರು ಮತ್ತು ಕೆಳದಿ ಸಾಮ್ರಾಜ್ಯದ ಐತಿಹಾಸಿಕವಾಗಿ ಮಹತ್ವದ್ದಾಗಿದೆ ಮತ್ತು ಕೆಳದಿ ಸಾಮ್ರಾಜ್ಯದ ರಾಜ ಶಿವಪ್ಪ ನಾಯಕ ಈ ಪ್ರದೇಶವನ್ನು ಆಳಿದಾಗ ಪ್ರಮುಖ ಸ್ಥಳವಾಗಿತ್ತು. ವಿಶೇಷವಾಗಿ ಬೆಟ್ಟದ ತುದಿಯಲ್ಲಿ ಕೋಟೆಗಳ ಅವಶೇಷಗಳಿವೆ.
ಹೊಸಂಗಡಿಯಲ್ಲಿ…


ತುಂಬಾ ಎತ್ತರದ ಆ ಜಾಗ. ಅಂದ ಹಾಗೆ ಈ ಸ್ಥಳ ಇರುವುದು ಹೊಸಂಗಡಿಯನ್ನ ದಾಟಿ 7-8 ಕಿಮೀ ಸಾಗಬೇಕು. ಮುಖ್ಯವಾಗಿ ರಸ್ತೆ ಹಾಳಾಗಿದ್ದರಿಂದ 2 ಕಿ.ಮೀ ನಡೆಯಲೇಬೇಕು. ಕೆಲವರಂತೂ ಸರ್ಕಸ್ ಮಾಡಿ ಬೈಕ್ ಅನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ರಸ್ತೆಯ ಆರಂಭದಿಂದಲೇ ಅತಿಯಾದ ಏರು ಜಾಗ ಇರುವುದರಿಂದ ಅಪಾಯ ಜಾಸ್ತಿ, ಮತ್ತು ಕಲ್ಲು, ಕೆಸರು ಬೇರೆ.
ಆರಂಭದಿಂದಲೇ ನಡೆದುಕೊಂಡು ಹೋಗುವಾಗ ಪ್ರಕೃತಿಯನ್ನ ಸವಿಯಬಹುದು, ಸಣ್ಣ ಪುಟ್ಟ ಜಲಪಾತಗಳು, ವಿಶೇಷ ಜಾತಿಯ ಹುಲ್ಲಿನ ಗಿಡಗಳು, ಬೃಹತ್ ಆದ ಮರಗಳು ನಮ್ಮನ್ನ ಸ್ವಾಗತಿಸುತ್ತವೆ. ಬೆಟ್ಟದ ಮೇಲೆ ಕೆಲವು ವಿಶೇಷ ರೀತಿಯ ಹುಲ್ಲುಗಳು ಕಣ್ಣಿಗೆ ಕುಕ್ಕುವಂತಿತ್ತು. ಯಾವುದೇ ವಾಹನಗಳು ಮೇಲೆ ಹೋಗದೆ ಇರುವುದರಿಂದ ಪಕ್ಷಿ, ಕೀಟಗಳ ಸದ್ದು ಮಾತ್ರ ಸ್ಪಷ್ಟವಾಗಿ ಕೇಳುತ್ತದೆ.
ಗಣಪತಿ ದರ್ಶನ:
ಮೆಟ್ಕಲ್ ಗುಡ್ಡ ತಲುಪಿದ ನಂತರ ಮೊದಲು ಗಣಪತಿ ದರ್ಶನವಾಗುತ್ತದೆ. ದರ್ಶನದ ನಂತರ ಸುತ್ತಲಿನ ಪರಿಸರ ನಮ್ಮನ್ನ ಬೇರೆ ಲೋಕಕ್ಕೆ ತೆಗೆದುಕೊಂಡು ಹೋಗುತ್ತದೆ.
ಅಲ್ಲಿ ಬೀಸುವ ಗಾಳಿ ಮಾತ್ರ ಅಬ್ಬಬ್ಬ….. ನಿಜ, ಗಾಳಿಯ ಶಬ್ದ ಸ್ಪಷ್ಟವಾಗಿ ಕಿವಿಗೆ ಹೊಡೆಯುತ್ತಿರುತ್ತದೆ. ಬೆಟ್ಟದ ಮೇಲೆ ನಿಂತು, ಸುತ್ತಲೂ ನೋಡಿದರೆ ಭೂಮಿಗೆ ಹಸಿರ ಸೀರೆಯನ್ನ ಉಡಿಸಿದ ಹಾಗೆ ಕಾಣುತ್ತದೆ. ದೂರದಿಂದ ಕಾಣುವ ಕುಂಚಿಕಲ್ ಜಲಪಾತ, ಒಂದೇ ಸಲ ದೊಡ್ಡದಾಗಿ ಸುರಿಯುವ ಮಳೆ, ಕೆಲವು ಸಲ ಏನು ಕಾಣದೇ ಇರುವ ಹಾಗೆ ಮಂಜಿನ ಹನಿ, ಕೆಳಗೆ ಕಾಣುವ ರಸ್ತೆಗಳು, ವಾಹನಗಳು, ಗದ್ದೆಯಲ್ಲಿ ನಟ್ಟಿ ಮಾಡುತ್ತಿರುವುದು… ನಿಜ ಮಲೆನಾಡು ಸ್ವರ್ಗ ಎನ್ನುವುದರಲ್ಲಿ ಸಂಶಯವಿಲ್ಲ….
ಈ ಸ್ಥಳ ಸ್ವಚ್ಛಂದವಾಗಿದೆ. ಮುಖ್ಯವಾಗಿ ಈ ಸ್ಥಳಗಳಿಗೆ ಹೋಗುವಾಗ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಕುವುದು, ನೀರಿನ ಬಾಟಲಿ ಬಿಸಾಡುವುದು, ಕೂಗುವುದು ಇವೆಲ್ಲ ಮಾಡಲೇಬೇಡಿ…. ಇಂತಹ ಸುಂದರವಾದ ಸ್ಥಳವನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಮೇಲೆ ಇದೆ ಮತ್ತೆ ಅದು ನಮ್ಮ ಆದ್ಯ ಕರ್ತವ್ಯ ಕೂಡ ಹೌದು
……………..
– ವಿನಾಯಕ ಪ್ರಭು ವಾರಂಬಳ್ಳಿ
