
ರಿಪ್ಪನ್‌ಪೇಟೆ.ಸೆ.08 : ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಆನಾಹುತ ಸೃಷ್ಟಿ ಮಾಡಿದ್ದು, ಅಂತಹ ಪ್ರದೇಶಗಳಿಗೆ ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಅರಸಾಳು ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಗರೆಹಳ್ಳದ ಬಳಿಯ ರಸ್ತೆಯ ಹಾನಿ, ಹೆಬ್ಬಳ್ಳಿ ಹಳ್ಳದ ದಂಡೆ, ಅಡ್ಡೇರಿ ಸಂಪರ್ಕರಸ್ತೆ, ಮಚಳಿಜಡ್ಡು ಹಳ್ಳದ ದಂಡೆ ಒಡೆದು ಕೊಚ್ಚಿಹೋಗಿರುವುದನ್ನು ಪರಿಶೀಲಿಸಿದರು.


ತುರ್ತು ಪರಿಹಾರ ಚೆಕ್ ವಿತರಣೆ:
ಬಸವಾಪುರ ಸುಶೀಲಮ್ಮ ಎಂಬುವರ ಮನೆಗೆ ನೀರು ನುಗ್ಗಿ ಹಾನಿ, ಗಾಮನಗದ್ದೆ ಲೋಕೆಶ ಎಂಬುವರ ಮನೆ ಗೋಡೆ ಕುಸಿದು ಬಿದ್ದು ಹಾನಿಗೊಂಡ ಸ್ಥಳಕ್ಕೆ ಭೇಟಿ ನೀಡಿದರು. ಗೋಡೆ ಕುಸಿದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮನೆಗಳಿಗೆ ಭೇಟಿ ನೀಡಿ ತುರ್ತು ಪರಿಹಾರ ಚೆಕ್ ವಿತರಿಸಿದರು.ಹೆಚ್ಚಿನ ಪರಿಹಾರದ ಕುರಿತು ಸರ್ಕಾರಕ್ಕೆ ವರದಿ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಚರಂಡಿ ದುರಸ್ಥಿ ಗೊಳಿಸಲು ನಿರಾಸಕ್ತಿ:
ಈ ಹಿಂದೆ ಜೂನ್ ತಿಂಗಳ ಮುಂಗಾರು ಅರಂಭಕ್ಕೆ ಮುನ್ನ ರೈತರು ತಮ್ಮ ಮನೆ ಜಮೀನಿ ಬಳಿಯಲ್ಲಿನ ಚರಂಡಿ ಚಾನಲ್‌ಗಳನ್ನು ಸ್ವಚ್ಚಗೊಳಿಸಿ ಮಳೆಗಾಲದಲ್ಲಿ ಕಾಡಿನಿಂದ ಹರಿದು ಬರುವ ನೀರನ್ನು ಸರಾಗವಾಗಿ ಹೋಗುವಂತೆ ಮಾಡುವ ಪದ್ದತಿ ಇತ್ತು ಈಗ ನಮ್ಮ ರೈತರು ಚರಂಡಿ ಚಾನಲ್ ಯನ್ನು ದುರಸ್ಥಿಗೊಳಿಸಿಕೊಳ್ಳುವುದರಲ್ಲಿ ನಿರ್ಲಕ್ಷ ತೋರಲಾಗುತ್ತಿದೆ. ಎಲ್ಲವನ್ನು ಸರ್ಕಾರ ಸ್ಥಳೀಯಾಡಳಿತವೇ ಮಾಡಲಿ ಎಂಬ ಮನೋಭಾವನೆಯಿಂದಾಗಿ ಇಂತಹ ಅನಾಹುತಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ ಎಂದರು.
ಕೃಷಿ ಬೆಳೆಗಳು ನೀರಿಗಾಹುತಿಯಾಗಿದ್ದು ರೈತರು ನಷ್ಟವನ್ನು ಅನುಭವಿಸುವಂತಾಗಿದೆ ಈ ಬಗ್ಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ ಎಂದರು.
ಒಕ್ಕಲೆಬ್ಬಿಸಲ್ಲ:
ಅರಣ್ಯ ಮತ್ತು ಕಾನ್ ಕರಾಬು ಗೋಮಾಳ ಕಂದಾಯ ಜಮೀನನ್ನು ಸಾಕಷ್ಟು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದವರನ್ನು ಯಾವುದೇ ಕಾರಣದಿಂದಲೂ ಒಕ್ಕಲೆಬ್ಬಿಸುವುದಿಲ್ಲ ಆದರೆ ಹೊಸದಾಗಿ ಅಕ್ರಮವಾಗಿ ಅರಣ್ಯ ಮತ್ತು ಸರ್ಕಾರಿ ಜಾಗದಲ್ಲಿ ಸಾಗುವಳಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
395 ಕೋಟಿ ವೆಚ್ಚದಲ್ಲಿ ಚಕ್ರದಿಂದ ಸೂಡೂರುವರೆಗೆ ಕುಡಿಯುವ ನೀರು:
ಈಗಾಗಲೇ ಸಾಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಶರಾವತಿ ನದಿಯಿಂದ ಮತ್ತು ಅಂಬ್ಲಿಗೊಳ ಡ್ಯಾಂ ನಿಂದ ನೂರಾರು ಹಳ್ಳಿಗಳ ರೈತ ನಾಗರಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಯಶಸ್ವಿಯಾಗಿದೆ. ಅದೇ ಮಾದರಿಯಲ್ಲಿ ಹೊಸನಗರ ತಾಲ್ಲೂಕಿನ ಚಕ್ರಾ ವಾರಾಹಿ ನೀರನ್ನು ಸುಮಾರು 60 ಕಿಮೀ ದೂರದ ಸೂಡೂರು ತನಕ ತಂದು ಹಲವು ಗ್ರಾಮಗಳಿಗೆ ಕುಡಿಯುವ ನೀರು ಹರಿಸಲು ಸುಮಾರು 395 ಕೋಟಿ ಅಂದಾಜು ವೆಚ್ಚದ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ. ಮಂಜುನಾಥ, ಜಿಪಂ ಮಾಜಿ ಸದಸ್ಯೆ ಎ.ಟಿ.ನಾಗರತ್ನ, ತರಕಾರಿ ಯೋಗೇಂದ್ರ ಗೌಡ, ತಹಶೀಲ್ದಾರ್ ವಿ.ಎಸ್.ರಾಜೀವ್, ಮೆಣಸೆ ಅನಂದ, ಜಿಪಂ ಎಇ ಶಿವಮೂರ್ತಿ, ತೋಟಗಾರಿಕಾ ಇಲಾಖೆಯ ಅಧಿಕಾರಿ ಚಂದ್ರಶೇಖರ, ಕೃಷಿ ಇಲಾಖೆಯ ಅಧಿಕಾರಿ ಶಾಂತಕುಮಾರ್,
ಉಪತಹಶೀಲ್ದಾರ್ ಟಿ.ಹುಚ್ಚರಾಯಪ್ಪ, ಬುಕ್ಕಿವರೆ ರಾಜೇಶ್, ಬೆಳ್ಳೂರು ತಿಮ್ಮಪ್ಪ, ದೇವೇಂದ್ರಪ್ಪಗೌಡ ನೆವಟೂರು, ಗ್ರಾಮ ಲೆಕ್ಕಾಧಿಕಾರಿ ಜಾಕೀರ್, ಹೆಡತ್ರಿ ಷಣ್ಮುಖಪ್ಪ, ಯೋಗೇಂದ್ರ ಬಸವಾಪುರ, ದಿವಾಕರ, ಇತರರು ಹಾಜರಿದ್ದರು.
ಚಕ್ರಾ ಜಲಾಶಯದಿಂದ ಸೂಡೂರಿಗೆ ನೀರು:
ರೂ.395 ಕೋಟಿ ವೆಚ್ಚದಲ್ಲಿ ಚಕ್ರಾ ಜಲಾಶಯದಿಂದ 60 ಕಿಮೀ ದೂರದ ಸೂಡೂರಿಗೆ ನೀರನ್ನು ಹರಿಸಿ ಸುತ್ತಮುತ್ತಲ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲೇ ಅನುಮೋಧನೆ ಸಿಗಲಿದೆ.
ಹರತಾಳು ಹಾಲಪ್ಪ, ಶಾಸಕ
