
ಹೊಸನಗರ.ಜು.28: ಗ್ರಾಪಂಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಬಹುದೊಡ್ಡ ಜವಾಬ್ದಾರಿ ಇದೆ. ರಾಜಕೀಯ ಮತ್ತು ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರ ಸಹಕಾರ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಿದೆ ಎಂದು ಮೂಡುಗೊಪ್ಪ ಗ್ರಾಪಂನ ನಿರ್ಗಮಿತ ಪಿಡಿಒ ವಿಶ್ವನಾಥ್ ಅಭಿಪ್ರಾಯಿಸಿದರು.
ಅಧಿಕಾರದಲ್ಲಿ ಅಭಿವೃದ್ಧಿಗೆ ಆಧ್ಯತೆ:
ಮೂಡುಗೊಪ್ಪ ನಗರ ಪಂಚಾಯ್ತಿ ಸಭಾಂಗಣದಲ್ಲಿ ಪಂಚಾಯ್ತಿ ವತಿಯಿಂದ ನೀಡಲಾದ ಬೀಳ್ಕೊಡುಗೆ ಮತ್ತು ಸನ್ಮಾನ ಸ್ವೀಕರಿಸಿ, 4 ವರ್ಷ ಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ತಪ್ಪು ಒಪ್ಪುಗಳು ಇರಬಹುದು ಆದರೆ ಮಾಡಿದ ಕಾರ್ಯ ತೃಪ್ತಿ ತಂದಿದೆ ಎಂದರು.
ಗ್ರಾಪ ಆವರಣದಲ್ಲಿ ಉದ್ಯಾನವನ ನಿರ್ಮಾಣ ಮಾಡಿ ಕಚೇರಿ ಅಂದವನ್ನು ಹೆಚ್ಚಿಸಿರುವುದು. ಸುವ್ಯವಸ್ಥಿತ ಗ್ರಂಥಾಲಯ ನಿರ್ಮಾಣ, ಹಿರೇಮಠದ ಸ್ವಚ್ಚ ಸಂಕೀರ್ಣ ಘಟಕ, ಪೊಲೀಸ್ ವಸತಿ ಗೃಹಕ್ಕೆ ನಿವೇಶನ, ಪಂಚಾಯ್ತಿ ಆದಾಯ ಹೆಚ್ಚಿಸಲು ವಾಣಿಜ್ಯ ಮಳಿಗೆ ನಿರ್ಮಾಣ, 2350ಕ್ಕು ಹೆಚ್ಚು ಅಂಗಡಿ, ಹೊಟೆಲ್ ಮತ್ತು ಮನೆಗಳಿಗೆ ಕಸದ ಬುಟ್ಟಿಗಳ ವಿತರಣೆ, ಕರೊನಾ ಸೋಂಕು ತಡೆಗಟ್ಟು ನಿಟ್ಟಿನಲ್ಲಿ ಸಮಗ್ರ ನಿರ್ವಹಣೆ, ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನ ಮಾಡಿ ಸರ್ಕಾರದ ಗುರಿಯ ಶೇ.80 ರಷ್ಟು ಸಾಧನೆ, ಕಂದಾಯ ವಸೂಲಾತಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಕೀರ್ತಿ ಪಂಚಾಯ್ತಿಗೆ ಬಂದಿದೆ ಎಂದರು.
ಹಲವು ದಶಕದಿಂದ ನೆನಗುದಿಗೆ ಬಿದ್ದಿದ್ದ ಗ್ರಾಮಠಾಣಾ ನೀವೇಶನ ಈಸ್ವತ್ತು ವಿತರಣೆ ಮಾಡಿರುವುದು ಬಡರೈತ ಕೂಲಿಕಾರ್ಮಿಕರಿಗೆ ಆಶ್ರಯ ಒದಗಿಸಿದ ಆತ್ಮ ತೃಪ್ತಿ ಇದೆ ಎಂದರು.


ಈ ಅವಧಿಯಲ್ಲಿ ಹಾಲಿ ಪಂಚಾಯ್ತಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಉಪಾಧ್ಯಕ್ಷರು, ಸದಸ್ಯರು, ಹಿಂದಿನ ಅವಧಿಯ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ, ಜಿಪಂ ಸಿಇಒ, ತಾಪಂ ಇಒ, ಪಂಚಾಯ್ತಿ ಸಿಬ್ಬಂದಿಗಳ ಸಹಕಾರವೇ ಕಾರಣ.. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಉತ್ತಮ ಕಾರ್ಯ ನಿರ್ವಹಣೆ:
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ, ನಮ್ಮ ಪರವಿರೋಧ, ಪ್ರತಿಭಟನೆ ಮತ್ತು ಸಹಕಾರದ ನಡುವೆ ವಿಶ್ವನಾಥ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ತಪ್ಪು ಒಪ್ಪುಗಳು, ಟೀಕೆ ಟಿಪ್ಪಣಿಗಳು ಬಂದಿರಬಹುದು ಅದಕ್ಕೆ ಎದೆಗುಂದದೆ ಮುಂದಿನ ಅಧಿಕಾರ ನಡೆಸಿ ಎಂದು ಶುಭ ಹಾರೈಸಿದರು.
ಗ್ರಾಪಂ ಸದಸ್ಯ ವಿಶ್ವನಾಥ ಮಾತನಾಡಿ, ಮೂಡುಗೊಪ್ಪ ಗ್ರಾಪಂ ಪಿಡಿಒ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಮುಂದಿನ ದಿನದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಶುಭಕೋರಿದರು.
ನಿವೃತ್ತರಾದ ಅಂತೋನಿ ಡಿಸೋಜರಿಗೆ ಗೌರವ:
ಇದೇ ವೇಳೆ ಪಂಚಾಯ್ತಿ ಜವಾನರಾಗಿ 20 ವರ್ಷ ಸೇವೆ ಸಲ್ಲಿಸಿ ನಿವೃತ್ತಗೊಂಡ ಅಂತೊನಿ ಡಿಸೋಜರನ್ನು ಕೂಡ ಸನ್ಮಾನಿಸಿ ಶುಭ ಕೋರಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಅಂತೋನಿಯವರ ನಿವೃತ್ತಿ ಜೀವನ ಸುಖ ನೆಮ್ಮದಿಯಿಂದ ಕೂಡಿರಲಿ ಎಂದು ಸಭೆಯಲ್ಲಿ ಆಶಿಸಲಾಯಿತು.
ಗ್ರಾಪಂ ಉಪಾಧ್ಯಕ್ಷೆ ಸುಮತಿ ಅರುಣದಾಸ್, ಸದಸ್ಯರಾದ ಕೆ.ಬಿ.ಕುಮಾರ್, ಜಾತಪ್ಪ ಗೌಡ, ಪವನಕುಮಾರ್, ವಿಶ್ವನಾಥ ಎಂ, ಅರುಣ ಬೈಸೆ, ನಿರ್ಮಲ ಅರೋಡಿ, ಸುಮನಾ ಭಾಸ್ಕರ್, ಸವಿತಾ ಉದಯ್, ಕಾರ್ಯದರ್ಶಿ ರಾಮಚಂದ್ರ, ನಗರ ಸೊಸೈಟಿ ಉಪಾಧ್ಯಕ್ಷ ಕುಮಾರ ಹಿಲ್ಕುಂಜಿ, ಸುಬ್ರಹ್ಮಣ್ಯ ಭಾಗವತ, ಅಣ್ಣಪ್ಪ, ತುಕಾರಾಂ ಸಿಬ್ಬಂದಿಗಳು ಇದ್ದರು.
