
ಭಜರಂಗ ದಳ ನಿಷೇಧ ಕಾಂಗ್ರೆಸ್ ಪ್ರಸ್ತಾಪ ವಿರೋಧಿಸಿ ಪ್ರತಿಭಟನೆ
ಹೊಸನಗರ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧದ ಪ್ರಸ್ತಾಪ ವಿರೋಧಿಸಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ನಗರದಲ್ಲಿ ಬುಧವಾರ ರಾತ್ರಿ ಪ್ರತಿಭಟಿಸಿದರು.
ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ, ಕಾಂಗ್ರೆಸ್ ಭಜರಂಗದಳವನ್ನು ಯಾಕಾಗಿ ನಿಷೇಧ ಮಾಡುತ್ತಿದೆ ಎಂದು ಸ್ಪಷ್ಟ ಪಡಿಸಬೇಕು. ಹಿಂದೂ ಸಮಾಜದ ರಕ್ಷಣೆ, ಗೋರಕ್ಷಣೆ, ಹಿಂದೂ ಮಹಿಳೆಯರ ರಕ್ಷಣೆಗಾಗಿ ಹೋರಾಟ ಮಾಡುತ್ತಿರುವುದು ತಪ್ಪೇ ಎಂದು ಪ್ರಶ್ನಿಸಿದರು.


ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಿತಿನ್ ನಗರ, ಯಾವುದೋ ಒಂದು ಸಮುದಾಯದ ಓಲೈಕೆಗಾಗಿ ಬಹುಸಂಖ್ಯಾತ ಹಿಂದೂ ವಿರೋಧಿ ಧೋರಣೆ ಹೊಂದಿರುವ ಕಾಂಗ್ರೆಸ್ ಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಿದೆ. ಅಧಿಕಾರಕ್ಕೆ ಬರುವ ಮುಂಚೆಯೇ ಈ ಧೋರಣೆ ಹೊಂದಿರುವ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳು ಆತಂಕದಲ್ಲಿ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘ ಪರಿವಾರ ಪ್ರಮುಖ ಕುಮಾರ ಭಟ್, ನೆಹರೂರವರ ಅಧಿಕಾರದ ಆಸೆಗಾಗಿ ಅಂದು ಭಾರತವನ್ನು ವಿಭಜನೆ ಮಾಡಲಾಯಿತು. ಇದೀಗ ಭಜರಂಗದಳವನ್ನು ನಿಷೇಧ ಮಾಡಲು ಮುಂದಾಗಿದೆ. ಹಿಂದೂಗಳೆಲ್ಲ ಒಟ್ಟಾಗಿ ಇದನ್ನು ಖಂಡಿಸಬೇಕು ಎಂದರು.
ಪ್ರಮುಖರಾದ ರಾಜೇಶ ಹಿರಿಮನೆ, ರವೀಕಾಂತ್, ಸಂತೋಷ್, ರಮೇಶ, ಮಹಾಬಲ ಕೊಠಾರಿ, ಮಹೇಂದ್ರ, ರಾಘವೇಂದ್ರ, ಉಮೇಶ್, ನವೀನ ಇತರರು ಇದ್ದರು.
