
ಹೊಸನಗರ: ಸುವರ್ಣ ಸಂಭ್ರಮದಲ್ಲಿರುವ ತಾಲೂಕಿನ ನೂಲಿಗ್ಗೇರಿ ಗಣೇಶೋತ್ಸವ ಮೆರವಣಿಗೆಯನ್ನು ಶಾಂತಿ, ಸುವ್ಯವಸ್ಥೆಯಿಂದ ಯಶಸ್ವಿ ಮಾಡಿಕೊಟ್ಟ ನಗರ ಠಾಣೆ ಪಿಎಸ್ಐ ರಮೇಶ್ ರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಗುರುವಾರ ಠಾಣೆಗೆ ತೆರಳಿದ ಗಣೇಶೋತ್ಸವ ಸಮಿತಿ, ಗೆಳೆಯರ ಬಳಗ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಪೊಲೀಸ್ ವೃಂದಕ್ಕೆ ಕೃತಜ್ಞತೆ ಸಲ್ಲಿಸಿ, ಶಾಲು ಹೊದಿಸಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಪಿಎಸ್ಐ ರಮೇಶ್, ಸಾರ್ವಜನಿಕರ ಸಹಭಾಗಿತ್ವ, ಸಹಕಾರ ಇದ್ದರೆ ಪೊಲೀಸರ ಕೆಲಸ ಸುಲಲಿತವಾಗುತ್ತದೆ. ನೂಲಿಗ್ಗೇರಿಯ ಗಣೇಶೋತ್ಸವ ಸಾಮರಸ್ಯದಿಂದ ಕೂಡಿದ್ದು ಯುವಕರ ಕಾಳಜಿ ಉತ್ತಮವಾಗಿದೆ. ಎಲ್ಲಾ ಒಳ್ಳೆಯ ಕಾರ್ಯಕ್ರಮಗಳಿಗೆ ಪೊಲೀಸರ ಸಹಕಾರ ಇರುತ್ತದೆ ಎಂದರು.


ದಫೈದಾರ್ ವೆಂಕಟೇಶ್, ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ಮಂಜುನಾಥ್, ವಿಶ್ವನಾಥ, ಶಾಂತಪ್ಪ, ಸಮಿತಿ ಅಧ್ಯಕ್ಷ ಮುರುಗೇಶಪ್ಪ, ಹರೀಶರಾವ್, ಆನಂದಶೆಟ್ಟಿ, ಅಬುಬಕರ್, ನಾಗೇಂದ್ರ, ಮುಜಾಫರ್, ನೂಲಿಗ್ಗೇರಿ ಯುವಕರು ಭಾಗವಹಿಸಿದ್ದರು.
ಗಣಪತಿ ವಿಸರ್ಜನೆ:
ನೂಲಿಗ್ಗೇರಿಯ ಗಣಪತಿ ವಿಸರ್ಜನಾ ಮೆರವಣಿಗೆ ಬುಧವಾರ ಯಶಸ್ವಿಯಾಗಿ ನಡೆಯಿತು. ಗಣನಾಯಕನ ಜಯಘೋಷ, ಹಾಡು ಕುಣಿತದೊಂದಿಗೆ ಸಾಗಿ ಚಿಕ್ಕಪೇಟೆ ಕಲಾವತಿ ನದಿಗೆ ವಿಸರ್ಜನೆ ಮಾಡಲಾಯಿತು.
