ಕರ್ನಾಟಕ ಎರಡನೇ ಮರುಭೂಮಿಯಾಗುತ್ತಿದೆ: ಪರಿಸರ ವಿಜ್ಞಾನಿ ನಾಗೇಶ ಹೆಗಡೆ ಕಳವಳ : ಬಟ್ಟಮಲ್ಲಪ್ಪ ಸಾರ ಸಂಸ್ಥೆಯಲ್ಲಿ ಶಿಕ್ಷಣ ಮತ್ತು ಪರಿಸರ ವ್ಯವಸ್ಥೆ ಕುರಿತು ಸಂವಾದ
ಹೊಸನಗರ: ಮರುಭೂಮಿ ಎಂದೊಡನೆ ತಾರ್ ಮರುಭೂಮಿ ನೆನಪಾಗುತ್ತದೆ. ಆದರೆ ಸ್ವಚ್ಚ ಹಸಿರಿನ ಸಮೃದ್ಧ ಕರ್ನಾಟಕ ಎರಡನೇ ಮರುಭೂಮಿಯಾಗುತ್ತ ಸಾಗುತ್ತಿದೆ ಎಂಬುದನ್ನು ಅರಿಯಲು ಸೋತಿದ್ದೇವೆ ಎಂದು ಪರಿಸರ ವಿಜ್ಞಾನಿ ನಾಗೇಶ ಹೆಗಡೆ ಕಳವಳ ವ್ಯಕ್ತಪಡಿಸಿದರು.
ಶನಿವಾರ ತಾಲೂಕಿನ ಬಟ್ಟೆಮಲಪ್ಪ ಸಾರಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಶಿಕ್ಷಣ ಮತ್ತು ಪರಿಸರ ವ್ಯವಸ್ಥೆ ಕುರಿತು ಅವರು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಮರಳುಗಾಡು ಮಾತ್ರ ಮರುಭೂಮಿಯಲ್ಲ. ಮುಳುಗಡೆ ಕೂಡ ಮರುಭೂಮಿಯೇ.. ಏಕಜಾತಿಯ ನಡುತೋಪುಗಳು, ಸಮುದ್ರ ಮಾಲಿನ್ಯ, ಹೆದ್ದಾರಿ ನಿರ್ಮಾಣ, ಪವರ್ ಪ್ಲಾಂಟ್ ನಿರ್ಮಾಣ, ಶರಾವತಿ ನದಿಯ ಯೋಜನೆಗಳು ಸೇರಿದಂತೆ ಅಭಿವೃದ್ಧಿಯ ಹೆಸರಲ್ಲಿ ಕರ್ನಾಟಕ ಸದ್ದಿಲ್ಲದೇ ಮರುಭೂಮಿಯಾಗುತ್ತಿದೆ ಎಂದರು.
ಅಲ್ಲದೇ ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಹಾಡನ್ನು ತೋರಿಸಿ ಹಿಂದೆ ಕನ್ನಡನಾಡು ಹೇಗಿತ್ತು. ಈಗ ಹೇಗಾಗಿದೆ ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದ ಅವರು, ನಮ್ಮಲ್ಲಿ ಬರಗಾಲ ಪ್ರತಿವರ್ಷ 20 ಕಿಮೀ ಹೆಚ್ಚಾಗುತ್ತಿದೆ. ಆದರೆ ಆಫ್ರಿಕಾದಲ್ಲಿ ಮಹಾ ಹಸಿರುಗೋಡೆ ನಿರ್ಮಾಣ ಮಾಡುತ್ತಿದ್ದಾರೆ ಎಂದರು.
ನಮ್ಮಲ್ಲಿ ಈಗಾಗಲೇ ಎಂಡೋಸಲ್ಫಾನ್ ದುರಂತ, ಬೆಂಗಳೂರು ಬೆಳಂದೂರು ಕೆರೆ ದುರಂತ, ಮಂಗನಕಾಯಿಲೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಆದರೆ ಪರಿಹಾರ ಮರೀಚಿಕೆ ಎಂಬಂತಾಗಿದೆ. ಪರಿಸರದ ಕುರಿತಾಗಿ ಪರಿಸರ ದಿನ, ಅರಣ್ಯ ದಿನ, ವಿಜ್ಞಾನ ದಿನ, ವಿಶ್ವಜಲ ದಿನ ಆಚರಣೆಗಷ್ಟೆ ಸೀಮಿತವಾಗಿದೆ. ಪರಿಸರ ಉಳಿವಿಗಾಗಿ ಪಶ್ಚಿಮ ಘಟ್ಟ ಉಳಿಸಿ ಹೋರಾಟ, ಶರಾವತಿ ಅವಲೋಕನ ಸೇರಿದಂತೆ ಅನೇಕ ಚಳುವಳಿಗಳು ನಡೆದಿದೆ. ಆದರೆ ಅದರ ಫಲ ಏನು ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.
ಪಶ್ವಿಮಘಟ್ಟದ ವೈವಿಧ್ಯತೆ, ಸೋಲಾರಣ್ಯ, ಕಾಳಿಂಗ ಸರ್ಪ, ಜೀವ ವೈವಿಧ್ಯತೆ, ವಿಶಿಷ್ಠ ಸಸ್ಯ ಪ್ರಬೇಧಗಳು ಸೇರಿದಂತೆ ವನ್ಯಜೀವಿ ಜಗತ್ತಿನ ಶ್ರೀಮಂತಿಕೆ ಬರಿದಾಗುತ್ತಿದೆ. ಬದಲಾಗಿ ಬಿಸಿಯೇರುತ್ತಿದೆ. ಇದು ಪರಿಸರಕ್ಕೆ ಮಾರಕ. ಇಂದು ಪರಿಸರ ಉಳಿಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಮಕ್ಕಳಿಗೆ ಆರಂಭದಿನದಲ್ಲೇ ಪರಿಸರದ ಮಹತ್ವ, ಪರಿಸರದ ನಡುವಿನ ಬದುಕು, ಇವುಗಳ ಬಗ್ಗೆ ಪರಿಣಾಮಕಾರಿಯಾಗಿ ತಿಳುವಳಿಕೆ ಮೂಡಿಸುವ ಅಗತ್ಯವಿದೆ ಎಂದರು.
ಸಂವಾದದಲ್ಲಿ ಹಿರಿಯ ಪತ್ರಕರ್ತ ವೈ.ವಿ. ಶೃಂಗೇಶ್, ಸಾರಾ ಸಂಸ್ಥೆಯ ಮುಖ್ಯಸ್ಥ ಹೆಚ್.ಜಿ.ಅರುಣಕುಮಾರ್, ಪ್ರತಿಭಾ ರಾಘವೇಂದ್ರ, ಡಯಟ್ ಪ್ರಾಂಶುಪಾಲ ಬಿಂಬ, ಶಿಕ್ಷಕರಾದ ಹನುಮಂತಪ್ಪ, ಶೈಲಜಾ, ಕರುಣಾಕರ, ಗಣೇಶ್, ಶಂಕರ ಶಾಸ್ತ್ರೀ, ಶಾಂತಮೂರ್ತಿ, ಸ್ಥಳೀಯರಾದ ಗುರುರಾಜ್, ಮಂಜುನಾಥ್, ಶ್ರೀಪಾದ ಭಾಗವತ್, ಧನುಷ್ ಕುಮಾರ್, ಶಿವಕುಮಾರ್, ಆದರ್ಶ, ಮಧುನಿಶ, ಮೋಹಿತ್ ಮತ್ತು ಮಾರುತಿಪುರ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.