
ಹೊಸನಗರ ತಾಲೂಕಿನ 3 ಸರ್ಕಾರಿ ಶಾಲೆಗೆ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ | ಪ್ರಶಸ್ತಿ, ನಗದು ಪುರಸ್ಕಾರಕ್ಕೆ ಭಾಜನವಾದ ಕುಗ್ರಾಮದ ನೀರುತೊಟ್ಟಿಲು ಶಾಲೆ | ಅಂದು ನಕ್ಸಲ್ ಬಾಧಿತ ಪ್ರದೇಶ.. ಇಂದು ಸರ್ಕಾರಿ ಶಾಲೆಗೆ ಪ್ರಶಸ್ತಿಯ ಗರಿಮೆ
ಹೊಸನಗರ: ಯಡೂರು ಮಾಣಿ ಜಲಾಶಯದ ಆಚೆಯ ಕುಗ್ರಾಮದ ನೀರುತೊಟ್ಟಿಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ತಾಲೂಕಿನ ಮೂರು ಸರ್ಕಾರಿ ಶಾಲೆಗಳು ಉತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ಭಾಜನವಾಗಿವೆ.
ಪ್ರೌಢಶಾಲೆ, ಹಿರಿಯ ಪ್ರಾಥಮಿಕ, ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಮೂರು ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು ಬೆಳ್ಳೂರು ಸರ್ಕಾರಿ ಪ್ರೌಢಶಾಲೆ, ಬಿದರಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೀರುತೊಟ್ಟಿಲು ಕಿರಿಯ ಪ್ರಾಥಮಿಕ ಶಾಲೆ ಉತ್ತಮ ಎಸ್‌ಡಿಎಂಸಿಯಾಗಿ ಪುರಸ್ಕಾರಕ್ಕೆ ಭಾಜನವಾಗಿವೆ.
ನೀರುತೊಟ್ಟಿಲು ಬಗ್ಗೆ ಒಂದಿಷ್ಟು:
ಮಾಣಿ ಜಲಾಶಯದ ಆಚೆಯ ಕಿರಿಯ ಪ್ರಾಥಮಿಕ ಶಾಲೆ ಇತರ ಶಾಲೆಗಳಂತಲ್ಲ. ಇಲ್ಲಿರುವ ವ್ಯವಸ್ಥೆಗೆ ಶಿಕ್ಷಣ ನೀಡುವುದೇ ಒಂದು ಸವಾಲು.
ಕರ್ನಾಟಕ ಸರಕಾರದ ಸಮಗ್ರ ಶಿಕ್ಷಣ ಕರ್ನಾಟಕದ 2025-26ನೇ ಸಾಲಿನ ಅತ್ಯುತ್ತಮ ಎಸ್‌ಡಿಎಂಸಿ ಸಮೀಕ್ಷೆ – ಪುಷ್ಠಿ ಕಾರ್ಯಕ್ರಮ ಇದರಲ್ಲಿ ಹೊಸನಗರ ತಾಲೂಕಿನ ಮಾಣಿ ಡ್ಯಾಂ ಆಚೆಗಿನ ಸ.ಕಿ.ಪ್ರಾ.ಶಾಲೆ ನೀರುತೊಟ್ಟಿಲು ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಆಯ್ಕೆ ಆಗಿ ರೂಪಾಯಿ 50000 ನಗದು ಪುರಸ್ಕಾರ ಕ್ಕೆ ಭಾಜನವಾಗಿದೆ.ಶಾಲೆಯ ಭೌತಿಕ ಹಾಗೂ ಶೈಕ್ಷಣಿಕ ಪರಿಸರವನ್ನು ಬಲಪಡಿಸಲು ಶಾಲಾಭಿವೃದ್ಧಿ ಸಮಿತಿ ದಾನಿಗಳ ಮುಖಾಂತರ ಹಲವಾರು ಸೌಲಭ್ಯಗಳನ್ನು ಪಡೆದಿರುತ್ತಾರೆ.2024-25ನೇ ಸಾಲಿನಲ್ಲಿ ನಡೆಸಿರುವ ಚಟುವಟಿಕೆಗಳನ್ನು ವಿದ್ಯಾವಾಹಿನಿ ತಂತ್ರಾಂಶದಲ್ಲಿ ಸಲ್ಲಿಸಬೇಕಿತ್ತು.ಹೀಗೆ ಸಲ್ಲಿಸಿದ ದಾಖಲೆಗಳನ್ನು ಆಧರಿಸಿ ಕ್ಲಸ್ಟರ್,ತಾಲೂಕು ಹಾಗೂ ಜಿಲ್ಲಾ ಹಂತದ ಎರಡು ತಂಡಗಳ ಸಮಗ್ರ ಪರಿಶೀಲನೆ ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಜನವಸತಿ ಪ್ರದೇಶದಿಂದ ಬಹುದೂರ ಇರುವ ಈ ಶಾಲೆಯ ಕಾರ್ಯಚಟುವಟಿಕೆಗಳು ಮಾದರಿಯಾಗಿದೆ.
ಮಾದರಿ:
ಇಡೀ ಶೈಕ್ಷಣಿಕ ವರ್ಷ ಕ್ಕೆ ಬೇಕಾಗುವಷ್ಟು ನೋಟ್ ಪುಸ್ತಕಗಳು,ಶಾಲಾ ಬ್ಯಾಗ್,ನೀರಿನ ಬಾಟಲಿ, ಸ್ಯಾಂಡಲ್ಸ್,ಫಿಲ್ಟರ್,ಗುಣಮಟ್ಟದ ರಬ್ಬರ್ ಮ್ಯಾಟ್,Smart TV, ಪ್ರಯಾಣ ವ್ಯವಸ್ಥೆ, ಕಲಿಕೋಪಕರಣ,ಸೌಂಡ್ ಸಿಸ್ಟಮ್, ಕೊಡೆ,ರೈನ್ ಕೋಟ್, ಮಕ್ಕಳಿಗೆ ಊಟಕ್ಕೆ ಕುಳಿತುಕೊಳ್ಳಲು ವ್ಯವಸ್ಥೆ, ಪೌಷ್ಠಿಕ ವನ ಹೀಗೆ ಎಸ್ ಡಿಎಂಸಿ ದಾನಿಗಳ ಸಹಕಾರದಿಂದ ಮಕ್ಕಳಿಗೆ ಸೌಲಭ್ಯ ದೊರಕುವಂತೆ ಮಾಡಿದೆ.ಕೇವಲ 11 ಮಕ್ಕಳು ಒಂದರಿಂದ ನಾಲ್ಕನೇ ತನಕ ವ್ಯಾಸಂಗ ಮಾಡುತ್ತಿದ್ದು ಓರ್ವ ಕ್ರಿಯಾಶೀಲ ಶಿಕ್ಷಕ ಶರವಣ ಎಸ್.ಕಾರ್ಯ ನಿರ್ವಹಿಸುತ್ತಿದ್ದಾರೆ.
ಒಂದಷ್ಟು ಇಚ್ಚಾಶಕ್ತಿ, ಪ್ರಾಮಾಣಿಕ ಕಾಳಜಿ ಇದ್ದಲ್ಲಿ ಆ ಶಾಲೆ ಎಲ್ಲೇ ಇರಲಿ..ಹೇಗೆ ಇರಲಿ ಅದು ಗಮನಸೆಳೆಯುತ್ತದೆ. ಇದಕ್ಕೆ ಒಂದು ಸಮಯದಲ್ಲಿ ನಕ್ಸಲ್ ಬಾಧಿತ ಪ್ರದೇಶವಾಗಿ ಗುರುತಿಸಿಕೊಂಡಿದ್ದ ನೀರುತೊಟ್ಟಿಲು ಪ್ರದೇಶ ಇದೀಗ ಉತ್ತಮ ಶಿಕ್ಷಣದ ಮೂಲಕ ಗಮನಸೆಳೆದಿರುವುದು ಹೆಮ್ಮೆಯ ಸಂಗತಿ
ಮಾದರಿ ನೀರುತೊಟ್ಟಿಲು|
ನಿಜಕ್ಕು ಮೂಲಸೌಕರ್ಯದಿಂದ ವಂಚಿತವಾದ ಮಾಣಿ ಡ್ಯಾಂ ಆಚೆಯ ನೀರುತೊಟ್ಟಿಲು ಶಾಲೆ ಪ್ರಶಸ್ತಿಗೆ ಭಾಜನವಾಗಿರುವುದು ಗಮನಾರ್ಹ. ಆ ಊರಿನ ಕಾಳಜಿ, ಮುಖ್ಯ ಶಿಕ್ಷಕ ಶರವಣ ಇವರ ಅವಿರತ ಶ್ರಮ ಇದಕ್ಕೆ ಕಾರಣ,– ರೇಖಾ ಪ್ರಭಾಕರ್, CRP












