ಹೊಸನಗರ: ಮೃತ ನೀರುಗಂಟಿ ಕುಟುಂಬಕ್ಕೆ ಪರಿಹಾರ ನೀಡುವ ಸಲುವಾಗಿ ಗ್ರಾಪಂಯಲ್ಲಿ ಮರುಪ್ರಸ್ಥಾವನೆ ಸಲ್ಲಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಇಬ್ಬರು ಗ್ರಾಪಂ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಘಟನೆ ನಿಟ್ಟೂರು ಗ್ರಾಪಂನಲ್ಲಿ ನಡೆದಿದೆ.
ಈ ಹಿಂದೆ ನೀರುಗಂಟಿ ಮಜಿದ್ ಬ್ಯಾರಿ ಅಹಮದ್ ಸಾವಪ್ಪಿದ್ದು, ಕರೊನಾ ಸೋಂಕಿನಿಂದ ಮೃತಪಟ್ಟ ಕಾರಣ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಸುಳ್ಳು ದಾಖಲೆ ಸೃಷ್ಟಿ ಪರಿಹಾರ ನೀಡಲಾಗುತ್ತಿದೆ ಎಂದು ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಿಹಾರಕ್ಕೆ ಹಿನ್ನಡೆಯಾಗಿತ್ತು.
ಆದರೆ ಗುರುವಾರ ನಿಟ್ಟೂರು ಗ್ರಾಪಂ ಅಧ್ಯಕ್ಷೆ ವಿನೋದ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಸೇರಿದಂತೆ 7 ಜನ ಸದಸ್ಯರು ಪರಿಹಾರ ಸಂಬಂಧ ಮರುಪ್ರಸ್ಥಾವನೆ ಸಲ್ಲಿಸಿ ನಿರ್ಣಯ ಮಾಡಿದೆ.
ಆದರೆ ಇದನ್ನು ಸದಸ್ಯರಾದ ಪುರುಷೋತ್ತಮ ಶ್ಯಾನುಬೋಗ್ ಮತ್ತು ಸ್ವರೂಪ ಉಡುಪ ವಿರೋಧಿಸಿದ್ದಾರೆ. ಆದರೆ ನಿರ್ಣಯ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಈ ಇಬ್ಬರು ಸದಸ್ಯರು ಆತ್ಮಸಾಕ್ಷಿಯ ಕಾರಣ ನೀಡಿ ತಮ್ಮ ಗ್ರಾಪಂ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆಯನ್ನು ಅಧ್ಯಕ್ಷರಿಗೆ ನೀಡಿದ್ದಾರೆ.
ಆತ್ಮಸಾಕ್ಷಿ ಹಿನ್ನೆಲೆ ರಾಜೀನಾಮೆ
ನಮ್ಮ ಗ್ರಾಪಂನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವಲ್ಲಿ ವಿಫಲ ವಾಗಿರುವುದರಿಂದ ನಾನು ನನ್ನ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ
ಇಲ್ಲಿನ ನೀರುಗಂಟಿ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮಪಂಚಾಯತ್ ಮಟ್ಟದಲ್ಲಿ ಯಾವುದೇ ಪೂರಕ ಧಾಖಲೆಗಳು ಇಲ್ಲದಿದ್ದರೂ ಅವರಿಗೆ ಪರಿಹಾರ ನೀಡುವಂತೆ ಇಂದಿನ ಮೀಟಿಂಗ್ ನಲ್ಲಿ ಸದಸ್ಯರ ಒಂದು ಗುಂಪು ಮರುಪ್ರಸ್ತಾವನೆ ಸಲ್ಲಿಸಿರುವುದು ವಿಪರ್ಯಾಸವಾಗಿದೆ. ನಡೆಯುತ್ತಿರುವ ಅನ್ಯಾಯವನ್ನು ತಡೆಯಲು ಸಾಧ್ಯವಾಗದೆ, ಅದಕ್ಕೆ ಬೆಂಬಲ ಕೊಡಲು ಆತ್ಮ ಸಾಕ್ಸಿ ಒಪ್ಪದೇ ಅನಿವಾರ್ಯವಾಗಿ ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ.
ನನ್ನೊಂದಿಗೆ ಸಹ ಸದಸ್ಯರಾದ ಶ್ರೀಮತಿ ಸ್ವರೂಪ ಉಡುಪ ರವರೂ ಇದೆ ಅಭಿಪ್ರಾಯ ವ್ಯಕ್ತಿಪಡಿಸಿ ರಾಜೀನಾಮೆ ಸಲ್ಲಿಸಿದ್ದಾರೆ.
ಪುರುಷೋತ್ತಮ್ ಶಾನುಬೋಗ್, ಗ್ರಾಪಂ ಸದಸ್ಯರು