
ನಿಮ್ಮೂರಿನ ಸುದ್ದಿ ನಮಗೆ ಕಳುಹಿಸಿ 7899128099
ಹೊಸನಗರ: ಜೇನು ಕೃಷಿ ರೈತರಿಗೆ ಆರ್ಥಿಕ ಚೈತನ್ಯ ನೀಡುವುದರ ಜೊತೆಗೆ ಪರಿಸರ ಮತ್ತು ವಿವಿಧ ಬೆಳೆಗಳ ಉತ್ತಮ ಬೆಳವಣಿಗೆಗೆ ಪೂರಕ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಸಿ.ಪುಟ್ಟನಾಯ್ಕ ತಿಳಿಸಿದರು.
ತಾಲೂಕಿನ ನಿಟ್ಟೂರು ಗ್ರಾಪಂ ಸಭಾಂಗಣದಲ್ಲಿ ತೋಟಗಾರಿಕಾ ಇಲಾಖೆ, ಮಲೆನಾಡು ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಜೇನು ಕೃಷಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಸಾಗರ ಮಲೆನಾಡು ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಿವಾನಂದ ಕುಗ್ವೆ, ವೈಜ್ಞಾನಿಕವಾಗಿ ಜೇನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಗಮನ ಕೇಂದ್ರೀಕರಿಸಿದರೆ ಉತ್ತಮ ಲಾಭ ಕೂಡ ಪಡೆಯಬಹುದು. ಮತ್ತು ಜೇನು ಕೃಷಿಯಿಂದಾಗುವ ಪರಾಗಸ್ಪಷ್ಟ ಕೂಡ ರೈತರ ಎಲ್ಲಾ ಕೃಷಿಗಳಿಗೆ ಸಹಕಾರಿ ಎಂದರು.


ಅಧ್ಯಕ್ಷತೆ ವಹಿಸಿದ್ದ ನಿಟ್ಟೂರು ಗ್ರಾಪಂ ಅಧ್ಯಕ್ಷೆ ವಿನೋದ, ಜೇನು ಕೃಷಿಗೆ ಹೇರಳವಾದ ಜಮೀನು ಬೇಕಿಲ್ಲ. ಮನೆಹಿತ್ತಲಿನಲ್ಲೂ ಮಾಡಬಹುದು. ಬಂದ ತುಪ್ಪ ಮಾರಾಟ ಮಾಡುವ ಜೊತೆಗೆ ಸೊಸೈಟಿಗಳ ಮೂಲಕ ಸಾಲವನ್ನು ಪಡೆಯಬಹುದು. ಜೀವನ ನಿರ್ವಹಣೆಗೂ ಸಹಕಾರಿ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ವಿಘ್ನೇಶ ತಲಕಾಲಕೊಪ್ಪ ಉಪನ್ಯಾಸ ನೀಡಿದರು.
ಬುಡಕಟ್ಟು ಒಕ್ಕೂಟದ ರಾಜ್ಯ ಸಂಚಾಲಕ ರಾಮಣ್ಣ ಹಸಲರು, ಗ್ರಾಪಂ ಸದಸ್ಯರಾದ ಚಂದ್ರಾವತಿ ಶೆಟ್ಟಿ, ಲಕ್ಷ್ಮಮ್ಮ, ಸಚಿನ್, ವೆಂಕಟರಮಣ ಉಪಸ್ಥಿತರಿದ್ದರು.
