
-
ವಿಜೃಂಭಣೆಯ ನೂಲಿಗ್ಗೇರಿ ದೀಪೋತ್ಸವ |
ಜಾತಿ ಧರ್ಮ ಮೀರಿದ ಆಚರಣೆ ಮೌಲ್ಯಯುತ : ಮೂಲೆಗದ್ದೆ ಶ್ರೀ| ಗೆಳೆಯರ ಬಳಗದಿಂದ ಮೆಸ್ಕಾಂ ನೌಕರರಾದ ಅಂತೋನಿ ನಾದನ್, ಯು.ರಮೇಶ್ ರಿಗೆ ಸನ್ಮಾನ
ಹೊಸನಗರ: ಜಾತಿ ಧರ್ಮಗಳನ್ನು ಮೀರಿದ ಯಾವುದೇ ಆಚರಣೆ ಮೌಲ್ಯಯುತ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಅಭಿಪ್ರಾಯಿಸಿದರು.
ತಾಲೂಕಿನ ನೂಲಿಗ್ಗೇರಿ ಶ್ರೀನಾಗದೇವರು, ಭೂತರಾಯ ಶ್ರೀಚೌಡೇಶ್ವರಿ ದೇವಿಯ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಅಜ್ಞಾನದ ಕತ್ತಲಿನಿಂದ ಸುಜ್ಞಾನದ ಬೆಳಕಿನಡೆಗೆ ಸಾಗುವ ಸಂಕೇತವೇ ದೀಪೋತ್ಸವದ ಮಹತ್ವ ಎಂದರು.


ಭಾರತ ವಿವಿಧತೆಯಲ್ಲಿ ಏಕತೆ ಕಂಡ ಮತ್ತು ಅದನ್ನು ವಿಶ್ವದೆಲ್ಲೆಡೆ ಸಾರಿದೆ. ಇಲ್ಲಿಯ ಒಂದೊಂದು ಆಚರಣೆಗಳು ಅದರದ್ದೇ ಆದ ಮಹತ್ವ ಹೊಂದಿದೆ. ಸಮಾಜ ಮತ್ತು ಜನರ ಒಳಿತು ಆಚರಣೆಗಳ ಒಟ್ಟಾರೆ ಉದ್ದೇಶವಾಗಿದೆ ಎಂದರು.
12 ಮಾಸಗಳಲ್ಲಿ ಕಾರ್ತಿಕಮಾಸ ಶ್ರೇಷ್ಠವಾಗಿದೆ. ಒಂದು ಸಣ್ಣ ಗುಡಿಯಿಂದ ಹಿಡಿದು ಪ್ರಸಿದ್ಧಿ ಪಡೆದ ಎಲ್ಲಾ ದೇಗುಲಗಳಲ್ಲಿ ದೀಪೋತ್ಸವ ಆಚರಣೆ ನಡೆಯುತ್ತದೆ. ದೀಪಗಳೇ ದೀಪೋತ್ಸವ ಅಲಂಕಾರವೂ ಹೌದು.. ಆರಾಧನೆಯೂ ಆಗಿದೆ. ಪ್ರತಿಯೊಬ್ಬ ವ್ಯಕ್ತಿ ಹಣತೆ ಬೆಳಗುವ ಮೂಲಕ ದೀಪೋತ್ಸವದ ಮಹತ್ವವನ್ನು ಜಗತ್ತಿಗೆ ಸಾರಿದ್ದಾನೆ ಎಂದರು.
ವರ್ಷದಿಂದ ವರ್ಷಕ್ಕೆ ನೂಲಿಗ್ಗೇರಿ ದೀಪೋತ್ಸವ ರಂಗು ಪಡೆಯುತ್ತಿದೆ. ಇದಲ್ಲಿ ಜಾತಿ ಧರ್ಮ ಮೀರಿದ ಗೆಳೆಯರ ಬಳಗದ ಯುವಕರು, ನೂಲಿಗ್ಗೇರಿ ಗ್ರಾಮದ ಜನರ ಸಂಘಟನೆ ಕಾರಣ. ಈ ದೀಪೋತ್ಸವ ಭವಿಷ್ಯತ್ತಿನಲ್ಲಿ ಇನ್ನಷ್ಟು ಮಹತ್ವ ಪಡೆಯಲಿ ಎಂದು ಆಶಿಸಿದರು.
ಸನ್ಮಾನ:
ಮೆಸ್ಕಾಂ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾದ ಅಂತೋನಿ ನಾದನ್, ಯು.ರಮೇಶ್ ರನ್ನು ಗೆಳೆಯರ ಬಳಗದ ವತಿಯಿಂದ ಮೂಲೆಗದ್ದೆ ಶ್ರೀಗಳು ಸನ್ಮಾನಿಸಿ ಪ್ರಶಸ್ತಿಪತ್ರ ನೀಡಿ ಗೌರವಿಸಿದರು.
ಇದಕ್ಕು ಮುನ್ನ ಚಿಕ್ಕಪೇಟೆ ಕಾಡಿಗ್ಗೇರಿ ಸರ್ಕಲ್ ನಿಂದ ನೂಲಿಗ್ಗೇರಿ ತನಕ ಚಂಡೆ ನಿನಾದದೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಮೂಲೆಗದ್ದೆ ಶ್ರೀಗಳನ್ನು ಕರೆತರಲಾಯಿತು. ನಂತರ ಶ್ರೀನಾಗದೇವರು, ಶ್ರೀಭೂತರಾಯ, ಶ್ರೀ ಚೌಡೇಶ್ವರಿ ದೇವರ ಸನ್ನಿಧಿಯಲ್ಲಿ ದೀಪಾರಾಧನೆ ನೆರವೇರಿತು.
ಸಾರ್ವಜನಿಕ ಅನ್ನಸಂತರ್ಪಣೆ ನಂತರ ತೆಕ್ಕಟ್ಟೆ ಓಂಕಾರ ಕಲಾವಿದರಿಂದ ಕಣ್ಣಾಮುಚ್ಚಾಲೆ ಹಾಸ್ಯ ನಾಟಕ ಪ್ರದರ್ಶನ ಗೊಂಡಿತು.
ಕಾರ್ಯಕ್ರಮದಲ್ಲಿ ಪಿಎಸ್ಐ ರಮೇಶ್, ಮೆಸ್ಕಾಂ ಎಇಇ ಪ್ರಕಾಶ್, ಗ್ರಾಪಂ ಉಪಾಧ್ಯಕ್ಷೆ ಸುಮನ ಭಾಸ್ಕರ್, ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಸದಸ್ಯ ವಿಶ್ವನಾಥ ಎಂ, ಗೆಳೆಯರ ಬಳಗದ ಸಂಚಾಲಕ ಹರೀಶ್ ವಕ್ರತುಂಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದ್ಯಾವಪ್ಪ, ನಿವೃತ್ತ ಶಿಕ್ಷಕಿ ಸುಮಿತ್ರಾ ಗೆಳೆಯರ ಬಳಗದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಶ್ವಿನಿ ಸುಧೀಂದ್ರ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.
