
ನೂಲಿಗ್ಗೇರಿಯಲ್ಲಿ ವಿಜ್ಞಾನ ಮೇಳ ಕಲಿಕಾ ಹಬ್ಬದ ಸಂಭ್ರಮ
ಮಕ್ಕಳ ಪ್ರತಿಭೆಯನ್ನು ಸಾಕ್ಷೀಕರಿಸಿದ ಕಾರ್ಯಕ್ರಮ
ಹೊಸನಗರ: ಸರ್ಕಾರಿ ಶಾಲೆಗಳು ಬದಲಾಗುತ್ತಿವೆ.. ಜ್ಞಾನ ವಿಜ್ಞಾನ ಮತ್ತು ಪ್ರತಿಭೆಯ ಹುರಾಣವಾಗುತ್ತಿದೆ ಎಂಬುದಕ್ಕೆ ಈ ಸರ್ಕಾರಿ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬ ಮತ್ತು ವಿಜ್ಞಾನ ಮೇಳವೇ ಸಾಕ್ಷಿಯಾಗಿದೆ.
ತಾಲೂಕಿನ ನೂಲಿಗ್ಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾಭಿವೃದ್ಧಿ ಸಮಿತಿ, ಮುಡುಗೋಪ್ಪ, ಅಂಡಗ ದೋದೂರು, ಅರಮನೆಕೊಪ್ಪ ಗ್ರಾಪಂ, ಸಮೂಹ ಸಂಪನ್ಮೂಲ ಕೇಂದ್ರ ಸಂಯೋಜನೆಯಲ್ಲಿ ನಡೆದ ನಗರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ, ಮತ್ತು ನೂಲಿಗ್ಗೇರಿ ವಿದ್ಯಾರ್ಥಿಗಳ ವಿಜ್ಞಾನ ಮೇಳ ಹಲವು ವಿಶೇಷತೆಗಳೊಂದಿಗೆ ಗಮನ ಸೆಳೆಯಿತು.
ರತ್ನಖಚಿತ ಕಿರೀಟವನ್ನು ಮೀರಿಸುವಂಥ ಬಣ್ಣದ ಪೇಪರ್ ಗಳ ಕಿರೀಟಗಳು, ಪ್ರಸ್ತುತ ಪಡಿಸಿದ ವಿವಿಧ ಮಾದರಿಯ ಕಲಿಕಾ ವಿನ್ಯಾಸಗಳು, ಮಕ್ಕಳ ನೃತ್ಯ ವೈಭವ.. ಹೀಗೆ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ತಮ್ಮ ಮಕ್ಕಳ ಬಗ್ಗೆ ಪೋಷಕರೇ ಹೆಮ್ಮೆ ತರಿಸುವಂತ ರೀತಿಯಲ್ಲಿ ಗಮನ ಸೆಳೆಯಿತು.


ಇನ್ನು.. ರೈತರು ಇಂದು ಹೆಚ್ಚಾಗಿ ಬಳಸುವ ಕಳೆ ಹೊಡೆಯುವ ಯಂತ್ರ, ಡ್ರಿಪ್ ಇರಿಗೇಶನ್, ಗ್ಲಾಸಿನ ಚಮತ್ಕಾರದಲ್ಲಿ ಮೂಡಿಸಿದ ಅನಂತ ಆಳದ ಬಾವಿ, ವಿದ್ಯುತ್ ನ ವಾಹಕ, ಅವಾಹಕ ಗುರುತಿಸುವಿಕೆ, ಸೇರಿದಂತೆ ವಿಸ್ಮಯ ಮೂಡಿಸುವ ಹಲವು ಪ್ರಯೋಗಗಳು ನೋಡುಗರ ಹುಬ್ಬೇರಿಸಿದವು.
ಇನ್ನು ಲಂಬಾಣಿ ನೃತ್ಯ ಸೇರಿದಂತೆ ಮಕ್ಕಳಿಂದ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ವೃತ್ತಿಪರ ಕಲಾವಿದರನ್ನು ಕೂಡ ಮೀರಿಸುವಂತಿತ್ತು.
ಕಾರ್ಯಕ್ರಮವನ್ನು ಮೂಡುಗೊಪ್ಪ ಗ್ರಾಪಂ ಸದಸ್ಯ ಕರುಣಾಕರ ಶೆಟ್ಟಿ ನೆರವೇರಿಸಿದರು . ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವಪ್ಪ , ಉಪಾಧ್ಯಕ್ಷ ಶ್ರೀಮತಿ ಅನ್ನಪೂರ್ಣ , ನಗರ ಕ್ಲಸ್ಟರ್ ನ CRP ವಿ.ಡಿ ನಾಗರಾಜ್ , ಮುಖ್ಯಶಿಕ್ಷಕಿ ಶ್ರೀಮತಿ ಪ್ರಮೀಳಾ, ನಿವೃತ್ತ ಭಡ್ತಿ ಮುಖ್ಯಶಿಕ್ಷಕಿ ಶಾರದಾ ಗೋಖಲೆ, ನಗರ ಹೈಸ್ಕೂಲ್ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, SDMC ಸದಸ್ಯರಾದ ಸಂತೋಷ್, ರಾಘವೇಂದ್ರ, ಮುಂತಾದವರು ವೇದಿಕೆಯಲ್ಲಿದ್ದರು..
ಫಿನಾಪ್ತಲಿನ್ ದ್ರಾವಣದಿಂದ ಬಿಡಿಸಿದ ಸರ್ ಸಿ.ವಿ.ರಾಮನ್ ಭಾವಚಿತ್ರಕ್ಕೆ ಪ್ರತ್ಯಾಮ್ಲ ಸಿಂಪಡಿಸುವ ಮೂಲಕ ವಿಶೇಷವಾಗಿ ವಿಜ್ಞಾನ ಮೇಳ ವನ್ನು ವಿಶೇಷವಾಗಿ ಉದ್ಘಾಟಿಸಲಾಯಿತು.
ನಗರ ಕ್ಲಸ್ಟರ್ ನ ವಿವಿಧ ಶಾಲೆಗಳಿಂದ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಲಿಕಾ ಹಬ್ಬದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ, ಬಹುಮಾನ ಗಳಿಸಿದರು. ಅದರ ಜೊತೆ ಜೊತೆಗೆ ನೂಲಿಗ್ಗೇರಿ ಶಾಲಾ ವಿದ್ಯಾರ್ಥಿಗಳು ತಯಾರಿಸಿದ ಸುಮಾರು 40 ಕ್ಕೂು ಹೆಚ್ಚು ವಿಜ್ಞಾನ ಮಾದರಿಗಳ ಪ್ರದರ್ಶನ ಪ್ರೇಕ್ಷಕರ ಮನಸೆಳೆದವು..
ಈ ಕಾರ್ಯಕ್ರಮಕ್ಕೆ ಹೊಸನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಭೇಟಿ ನೀಡಿ ವಿದ್ಯಾರ್ಥಿಗಳನ್ನ ಅಭಿನಂದಿಸಿದರು..
