
ರಸ್ತೆ ಬದಿ ಸಿಕ್ಕಿದ ರೂ.1.3 ಲಕ್ಷ ಮೌಲ್ಯದ ಬಂಗಾರದ ಸರ ಹಿಂದುರಿಗಿಸಿದ ಮಹಿಳೆ : ಶಿವಮೊಗ್ಗ ವಿನೋಬನಗರದಲ್ಲಿ ಘಟನೆ
ಒಂದೊಳ್ಳೆ ಸುದ್ದಿ ಇದು ನಮ್ಮಲ್ಲಿ ಮಾತ್ರ
ಶಿವಮೊಗ್ಗ: ತನ್ನ ಟೀಸ್ಟಾಲ್ ಅಂಗಡಿಯ ಕೆಲಸ ಮುಗಿಸಿ ರಾತ್ರಿ ವೇಳೆ ಮನೆಗೆ ಹೋಗುತ್ತಿದ್ದ ವೇಳೆ ರಸ್ತೆ ಬದಿ ಸಿಕ್ಕಿದ ಚಿನ್ನದ ಸರವನ್ನು ತಡಮಾಡದೇ ಅಲ್ಲೇ ಹತ್ತಿರದ ಮನೆಯವರನ್ನು ವಿಚಾರಿಸಿ ಕನ್ಫರ್ಮ್ ಮಾಡಿಕೊಂಡು ಅವರಿಗೆ ಹಿಂದುರಿಗಿಸಿದ ಘಟನೆ ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಚೌಕಿ ಬಳಿ ಸೋಮವಾರ ರಾತ್ರಿ ನಡೆದಿದೆ.
ಕುಂದಾಪುರ ಮೂಲದ ಶೋಭಾ ಎನ್ನುವವರು ವಿನೋಬನಗರದಲ್ಲಿ ಟೀಸ್ಟಾಲ್ ಇಟ್ಟುಕೊಂಡು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಸೋಮವಾರ ರಾತ್ರಿ ಕೆಲಸ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ರಸ್ತೆ ಬದಿ ನಿಂತಿದ್ದ ಕಾರಿನ ಪಕ್ಕದಲ್ಲೇ ಸರವೊಂದು ಬಿದ್ದಿದ್ದು ಹೊಳೆಯುತ್ತಿದ್ದು ಗಮನಕ್ಕೆ ಬಂದಿದೆ. ಕೂಡಲೇ ಸರವನ್ನು ಎತ್ತಿಕೊಂಡು ಕಾರಿನವರದ್ದೇ ಇರಬಹುದು ಎಂದು ಅದೇ ಮನೆಯವರಾದ ಹೆಚ್.ಎಂ.ಮಂಜುನಾಥರವರನ್ನು ವಿಚಾರಿಸಿದ್ದಾರೆ. ಆದರೆ ಅದು ಅವರದ್ದಾಗಿರಲಿಲ್ಲ. ಅವರ ಮನೆಯ ಮೇಲೆ ಶಿಶಿರ್ ಎಂಬುವವರಿದ್ದು ಅವರನ್ನು ಕೂಡ ವಿಚಾರಿಸಿದ್ದಾರೆ. ಆಗ ಶಿಶಿರ್ ಕುತ್ತಿಗೆ ಮುಟ್ಟಿ ನೋಡಿಕೊಂಡಾಗ ಸರ ಇರಲಿಲ್ಲ. ಆಗ ಅವರದ್ದೇ ಸರ ಎಂದು ಗೊತ್ತಾದ ಮೇಲೆ ಸರ ಹಿಂದುರಿಗಿಸಿದ್ದಾರೆ.


ಬಂಗಾರದ ಸರ ಸುಮಾರು 14 ಗ್ರಾಂ ತೂಕವಿದ್ದು ಸುಮಾರು ರೂ 1.3 ಲಕ್ಷ ಬೆಲೆಯನ್ನು ಅಂದಾಜಿಸಲಾಗಿದೆ. ದಾರಿ ಮೇಲೆ, ಅದು ರಾತ್ರಿ ವೇಳೆ ಸಿಕ್ಕ ಸರವನ್ನು, ಸರ ಕಳೆದುಕೊಂಡವರನ್ನು ಪತ್ತೆ ಹಚ್ಚಿ ಅವರಿಗೆ ನೀಡಿರುವ ಮಹಿಳೆಯ ಪ್ರಾಮಾಣಿಕತೆ ಮೆಚ್ಚುಗೆಗೆ ಪಾತ್ರವಾಗಿದೆ.
ನಮ್ದೇ ನಮಗೆ ಸಿಗೋದಿಲ್ಲ:
ಕುಂದಾಪುರ ಮೂಲದ ಶೋಭಾರವರ ಪ್ರಾಮಾಣಿಕತೆ ಕಂಡು ಅವರ ಬಳಿ ಹೋಗಿ, ಒಂದು ಫೋಟೋ ಕೊಡಿ ಸುದ್ದಿ ಮಾಡ್ತೀನಿ ಅಂದ್ರೆ.. ಪ್ರಚಾರ ಏನು ಬೇಡ.. ನಮ್ದೇ ನಮ್ಮತ್ರ ಉಳಿಯೊಲ್ಲ.. ಇನ್ನು ಇದು ಯಾಕೆ ಎಂದು ಹೇಳಿದ್ದಾರೆ. ಬೇಡ ಬಿಡಿ ಟೀಸ್ಟಾಲ್ ದಾದ್ರೂ ಒಂದ್ ಫೋಟೋ ತೆಗಿತೀನಿ ಅಂದ್ರೆ ಅದು ಬೇಡ ಅಂತ ಅವರು ಹೇಳಿದಾಗ ಅವರ ಬಗ್ಗೆ ಅಭಿಮಾನ ಇನ್ನಷ್ಟು ಹೆಚ್ಚಾಯ್ತು..
ಕಣ್ಣೆದುರೇ ಸಿಕ್ಕಿದ್ದನ್ನು ನೋಡಿ.. ಅದು ನಂದು ಕೊಡಿ ಎಂದರೆ ಇಲ್ಲ ಇಲ್ಲ ನನಗೇನು ಸಿಕ್ಕಿಲ್ಲ ಎಂದು ಲಪಟಾಯಿಸುವ ಕಾಲದಲ್ಲಿ ರಾತ್ರಿ ವೇಳೆ ಸಿಕ್ಕ ಬಂಗಾರವನ್ನು, ಯಾರಿಗೆ ಸೇರಬೇಕೋ ಅವರಿಗೆ ಹುಡುಕಿ ಕೊಟ್ಟ ಶೋಭಾ ಕುಂದಾಪುರ ಸಮಾಜಕ್ಕೆ ಮಾದರಿ.. ಅವರ ನಿಸ್ವಾರ್ಥ, ನಿಷ್ಕಲ್ಮಷ, ಸ್ವಾವಲಂಬಿ ಬದುಕಿಗೆ ನಮ್ಮದೊಂದು ಸಲಾಂ ಹೇಳಲೇ ಬೇಕು..
