
ಹಳ್ಳಕ್ಕೆ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ:
ಶಶಿಕಲಾ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ಚೆಕ್ ವಿತರಿಸಿದ ಶಾಸಕ ಆರಗ ಜ್ಞಾನೇಂದ್ರ
ಹೊಸನಗರ: ಇತ್ತೀಚೆಗೆ ನೆರೆಹಾವಳಿ ಸಂದರ್ಭದಲ್ಲಿ ಕಾಲುಸಂಕ ದಾಟುತ್ತಿದ್ದಾಗ ಜಾರಿ ಬಿದ್ದು ಮೃತಪಟ್ಟ ಶಶಿಕಲಾ ಕುಟುಂಬಕ್ಕೆ ರೂ.5ಲಕ್ಷ ಪರಿಹಾರದ ಚೆಕ್ ನ್ನು ಶಾಸಕ ಆರಗ ಜ್ಞಾನೇಂದ್ರ ವಿತರಿಸಿದರು.
ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಬೈಸೆ ಗ್ರಾಮದ ಶ್ರೀಧರಪುರ ನಿವಾಸಿ ಶಶಿಕಲಾ ಎಂಬುವವರು ಕಾಲು ಸಂಕ ದಾಟುವಾಗ ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದರು. ವಿಪರೀತ ಮಹಿಳೆ ಇದ್ದ ಕಾರಣ ಮೃತದೇಹ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿತ್ತು. ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಪರಿಹಾರಕ್ಕೆ ಶಿಫಾರಸ್ಸು ಮಾಡಿದ್ದರು.
ಮೃತ ಶಶಿಕಲಾ ಪುತ್ರನಿಗೆ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಶಾಸಕರು, ಈ ಬಾರಿಯ ಮಳೆ ತುಂಬಾ ಅನಾಹುತ ಸೃಷ್ಟಿಸಿದೆ. ಮೃತಕುಟುಂಬಕ್ಕೆ ಆಸರೆ ಆಗಬೇಕಿರುವುದು ಸರ್ಕಾರದ ಜವಾಬ್ದಾರಿ ಎಂದರು.
ಶುಕ್ರವಾರ ಕರಿಮನೆ ಗ್ರಾಪಂ ವ್ಯಾಪ್ತಿಯ ನರ್ತಿಗೆಯಲ್ಲಿ ರೈತನೋರ್ವ ಸಾಲಬಾಧೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು ಆ ಕುಟುಂಬಕ್ಕು ಪರಿಹಾರ ನೀಡುವ ಭರವಸೆ ನೀಡಿದರು. ಈ ಬಗ್ಗೆ ತಹಶೀಲ್ದಾರ್ ರಶ್ಮಿ ಹಾಲೇಶ್ ರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ.ಸುಬ್ರಹ್ಮಣ್ಯ ಮತ್ತಿಮನೆ, ಉಪಾಧ್ಯಕ್ಷ ಎನ್.ವೈ.ಸುರೇಶ್, ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಹೆಚ್.ಜಿ.ರಮಾಕಾಂತ , ಸದಸ್ಯ ಕೆ.ಬಿ.ಕುಮಾರ, ಅರುಣ ಬೈಸೆ, ಶಾಸಕರ ಆಪ್ತ ಸಹಾಯಕ ಬಸವರಾಜ ಹೊದಲ, ಹಿರಿಮನೆ ರಾಜೇಶ, ಗುಡ್ಡೆಕೊಪ್ಪ ಆನಂದ, ರಮೇಶ, ಮಾರುತಿ, ಮೃತ ಶಶಿಕಲಾ ಮಕ್ಕಳಾದ ಸುದೀಪ್, ಸುಮಂತ್, ಕುಟುಂಬಸ್ಥರು ಇದ್ದರು.
