
ಹೊಸನಗರ: ಈ ಹಿಂದೆಯೇ ಹಲವು ದಾಳಿ ನಡೆಸಿ ಅದರಿಂದ ಆರ್.ಎಂ.ಮಂಜುನಾಥ ಗೌಡ ಆರೋಪ ಮುಕ್ತ ಆಗಿದ್ದರೂ ಕೂಡ ದುರುದ್ದೇಶಪೂರ್ವಕವಾಗಿ ಮತ್ತೆ ದಾಳಿ ನಡೆಸಲಾಗುತ್ತಿದೆ ಎಂದು ಶಿಮುಲ್ ನಿರ್ದೇಶಕ ವಿದ್ಯಾಧರ್ ಆರೋಪಿಸಿದ್ದಾರೆ.
ಹೊಸನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮತ್ತೆ ಕಾನೂನು ಬದ್ಧವಾಗಿ ಅಧ್ಯಕ್ಷರಾಗಿದ್ದಾರೆ. ಸದ್ಯದಲ್ಲೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗುವ ಅರ್ಹತೆಯೂ ಇದೆ. ಆದರೆ ಅವರ ಏಳಿಗೆಯನ್ನು ಸಹಿಸದ ವಿರೋಧಪಕ್ಷಗಳ ಪಿತೂರಿಯಿಂದ ದಾಳಿ ನಡೆಸಿ ಹೆದರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.


ತುಂಗಾ ಅಡಿಕೆ ಮಂಡಿ ಅಧ್ಯಕ್ಷ ದುಮ್ಮ ವಿನಯಕುಮಾರ್, ಎಷ್ಟೇ ದಾಳಿ ನಡೆದರೂ ಗೌಡು ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಈಗಾಗಲೇ ಡಿಸಿಸಿ ಬ್ಯಾಂಕ್ ನ ಯಾವುದೇ ಪ್ರಕರಣದಲ್ಲಿ ಇವರ ಪಾತ್ರವಿಲ್ಲ ಎಂಬುದು ಗೊತ್ತಾಗಿದೆ. ಒಬ್ಬ ವ್ಯಕ್ತಿಯನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಸದ್ಯದಲ್ಲೇ ಹೊಸನಗರದಲ್ಲಿ ಗೌಡರ ಪರವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ತಾಪಂ ಮಾಜಿ ಸದಸ್ಯ ಎರಗಿ ಉಮೇಶ್, ಸಹಕಾರಿಗಳಾದ ಗುಬ್ಬಿಗ ರವಿ, ಲೇಖನಮೂರ್ತಿ, ವಿನಾಯಕ ಚಕ್ಕಾರು, ಜಯನಗರ ಗುರು ಇದ್ದರು.
