
ಮಹಿಳೆಯರೇ ತುಂಬಿದ್ದ ಟಿಟಿ ವಾಹನ ಪಲ್ಟಿ : 6 ಮಹಿಳೆಯರಿಗೆ ಗಾಯ : ಕೊಲ್ಲೂರು ಹೆದ್ದಾರಿಯಲ್ಲಿ ಅಪಘಾತ
ಹೊಸನಗರ: 13 ಕ್ಕು ಹೆಚ್ಚು ಮಹಿಳೆಯರೇ ತುಂಬಿದ್ದ ಟಿಟಿ ವಾಹನವೊಂದು ಪಲ್ಟಿ ಹೊಡೆದು ಆರು ಮಹಿಳೆಯರು ಗಾಯಗೊಂಡ ಘಟನೆ ಕೊಲ್ಲೂರು ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ 11 ರ ವೇಳೆಗೆ ನಡೆದಿದೆ.
ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ (766c) ನಗರ ಚಿಕ್ಕಪೇಟೆ ಸರ್ಕಲ್ ಸಮೀಪದ ಶ್ರೀಧರಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.


ಅಪಘಾತದಲ್ಲಿ ಸರಸ್ವತಿ, ಸರೋಜ, ಕಮಲ, ಜ್ಯೋತಿ, ಗೌರಮ್ಮ, ಶಾರದ ಸೇರಿದಂತೆ 6ಕ್ಕು ಹೆಚ್ಚು ಮಹಿಳೆಯರು ಗಾಯಗೊಂಡಿದ್ದಾರೆ. ಹೊಸನಗರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ ಬಳಿಕ ಮೂರು ಮಹಿಳೆಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಕೊಲ್ಲೂರು ಪ್ರವಾಸ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಶಿಕಾರಿಪುರ ತಾಲೂಕಿನ ಬಿ ಅಣ್ಣಾಪುರ ಗ್ರಾಮದವರಾಗಿದ್ದಾರೆ.
ರಾತ್ರಿ ಅಫಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಿಪಿಐ ಗುರಣ್ಣ ಹೆಬ್ಬಾಳ್, ಪಿಎಸ್ಐ ಶಿವಾನಂದ ಕೋಳಿ ಸೂಚನೆ ಮೇರೆಗೆ ಎಎಸ್ಐ ಕುಮಾರ್, ಅಮೀರ್ ಜಾನ್ ಭೇಟಿ ಮಾಡಿ ಪರಿಶೀಲಿಸಿದರು. ಗಾಯಗೊಂಡವರನ್ನು ಕೂಡಲೇ ಸ್ಥಳೀಯರಾದ ಮಂಜುಶೆಟ್ಟಿ, ಸುಳುಗೋಡು ಪ್ರವೀಣ, ಪೂರ್ಣೇಶ ಶೆಟ್ಟಿ, ಅಶೋಕ ಜೋಗಿ, ಅಬುಕರ್, ನವೀನ್ ಎಸ್.ಕೆ ಸಹಕಾರದಿಂದ ಆಸ್ಪತ್ರೆಗೆ ಸಾಗಿಸುವ ಕ್ರಮ ಕೈಗೊಂಡರು.
ಟಿಟಿ ವಾಹನ ರಸ್ತೆ ಮೇಲೆ ಪಲ್ಟಿ ಹೊಡೆದ ಪರಿಣಾಮ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದರು. ಅಪಘಾತದಲ್ಲಿ ಟಿಟಿ ವಾಹನ ಜಖಂಗೊಂಡಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
