
-
ಸಾಹಿತ್ಯ ಹುಣ್ಣಿಮೆ ಪ್ರತಿಮನೆಯಲ್ಲಿ ನಡೆಯಬೇಕು : 218 ನೇ ಸಾಹಿತ್ಯ ಹುಣ್ಣಿಮೆ ಉದ್ಘಾಟಿಸಿದ ಡಿ.ಮಂಜುನಾಥ್
ಹೊಸನಗರ: ಸುಮಾರು 17 ವರ್ಷದಿಂದ ನಾವು ಸಾಹಿತ್ಯ ಹುಣ್ಣಿಮೆಯನ್ನ ಆಚರಿಸಿಕೊಂಡು ಬರುತ್ತಿದ್ದೇವೆ. ಆರಂಭದಲ್ಲಿ ಕೆಲವೊಂದು ಮಾತುಗಳು ಬಂದರೂ ನಮ್ಮ ಕಾರ್ಯಕ್ರಮಗಳು ನಿಲ್ಲದೇ ನಿರಂತರವಾಗಿ ನಡೆಸಿಕೊಂಡು ಬಂದಿದ್ದೇವೆ. ಈ ಕಾರ್ಯಕ್ರಮಗಳು ಪ್ರತಿ ಮನೆಯಲ್ಲಿ, ಪ್ರತಿ ಊರಿನಲ್ಲಿ ಮಾಡುವುದಾದರೆ ಸಂಪನ್ಮೂಲ ವ್ಯಕ್ತಿಗಳು, ಪ್ರೋತ್ಸಾಹ ದೊರೆಯುತ್ತವೆ, ನಾವು ಮುಂದುವರೆಯಬೇಕು. ಎಲ್ಲ ಕಡೆ ಇಂತಹ ಹಲವು ಕಾರ್ಯಗಳು ಆಗಬೇಕು. ಸಾಹಿತ್ಯದ ಕುರಿತು ಜನರಲ್ಲಿ ಆಸಕ್ತಿ ಮೂಡಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
ತಾಲ್ಲೂಕಿನ ಕಾರಣಗಿರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಸಾಹಿತ್ಯ ಬಳಗ ನಾಗರಕೊಡಿಗೆ, ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ ಬಳಗ ಕಾರಣಗಿರಿ ಆಶ್ರಯದಲ್ಲಿ ನಡೆದ 218ನೇ ಸಾಹಿತ್ಯ ಹುಣ್ಣಿಮೆ, ಭೂಮಿ ಹುಣ್ಣೆಮೆ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಮಣ್ಣಿಗೊಂದು ಹುಣ್ಣಿಮೆ ಕುರಿತಾಗಿ ಉಪನ್ಯಾಸವನ್ನ ನೀಡಿದ ಸಾಹಿತಿ ಮತ್ತು ಉಪನ್ಯಾಸಕ ಡಾ. ಶ್ರೀಪತಿ ಹಳಗುಂದ ಮಾತನಾಡಿ ಮಣ್ಣು ತನ್ನ ಸತ್ವವನ್ನ ಕಳೆದುಕೊಳ್ಳುತ್ತಿದೆ, ಈ ಭೂಮಿಯನ್ನು ಉಳಿಸಬೇಕಾಗಿದೆ. ಹಿಂದೆಲ್ಲ ನಮ್ಮ ಹಿರಿಯರು ಭೂಮಿಯ ಮಹತ್ವವನ್ನು ಅರಿತಿದ್ದರು, ಮಣ್ಣಿನ ಮೇಲೆ ವಿಶೇಷವಾಗಿ ಜನಪದ ಗೀತೆಗಳ ರಚಿಸುತ್ತಿದ್ದರು ಎಂದು ಹೇಳಿದರು.
ಗ್ರಹಣದ ಬಗ್ಗೆ ಕಾರಣಗಿರಿ ಕಲಾದರ್ಶನ ಸಂಪಾದಕ ಹನಿಯರವಿ ಮಾತನಾಡಿ ಬಹಳ ವರ್ಷದ ಹಿಂದೆಯೇ ನಮ್ಮ ಪೂರ್ವಿಕರು ಯಾವುದೇ ತಂತ್ರಜ್ಞಾನವಿಲ್ಲದ ಆ ಕಾಲದಲ್ಲಿಯೇ ಯಾವಾಗ ಗ್ರಹಣ ಆಗುತ್ತದೆ, ಯಾವ ಸಮಯದಲ್ಲಿ ಆಗುತ್ತದೆ ಎಂದು ಹೇಳಿದ್ದಾರೆ. ಋಷಿ ಮುನಿಗಳು ಹೇಳಿದ್ದನ್ನು ನಾವು ಅಲ್ಲಗಳೆಯುವಂತಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದ ವಿಶ್ರಾಂತ ಪ್ರಾಂಶುಪಾಲ ನಳಿನಚಂದ್ರ ಮಾತನಾಡಿ ಇಂತಹ ಕಾರ್ಯಕ್ರಮ ಆಗೆಲ್ಲ ನಿರಂತರವಾಗಿ ನಡೆಯುತ್ತಿತ್ತು ಆದರೆ ಈಗಿನ ದಿನಗಳಲ್ಲಿ ಮೊಬೈಲ್ ಬಂದ ನಂತರ ಜನರ ಆಸಕ್ತಿಕಡಿಮೆ ಆಗಿದೆ. ಇನ್ನು ಮುಂದಾದರೂ ಈ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.
ಡಾ. ಮಾರ್ಷಲ್ ಷರಾಂ ಕತೆಯನ್ನ ವಾಚಿಸಿದರು, ಗಣೇಶಮೂರ್ತಿ, ತಿರುಪತಿನಾಯ್ಕ್, ಗೀತಾ ಚಂದ್ರಶೇಖರ, ಪ್ರವೀಣ್ ಎಂ, ಮಂಜುನಾಥ ಕಾಮತ್ ಕವನವನ್ನ ವಾಚಿಸಿದರು, ಪ್ರಕಾಶ್ ಹನಿಗವನ ವಾಚಿಸಿ, ಶ್ರೀಮತಿ ಎನ್. ವಿ ಲಲಿತ, ಯಶಸ್ವಿನಿ, ಶ್ರೀ ಸುರೇಶ ಕುಮಾರ್ ಹಾಡನ್ನು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ತ. ಮ. ನರಸಿಂಹ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ರಾಘವೇಂದ್ರ, ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಎನ್. ಡಿ. ನಾಗೇಂದ್ರ ರಾವ್ ಮತ್ತಿತರರು ಇದ್ದರು. ಕಲಾಭಾರತಿ ತಂಡ ಕಾರಣಗಿರಿ ಪ್ರಾರ್ಥಿಸಿದರು. ಶ್ರೀಮತಿ ವಸುಧಾ ಚೈತನ್ಯ ನಿರೂಪಿಸಿ, ರಾಘವೇಂದ್ರ ಜೋಯಿಸ್ ಸ್ವಾಗತಿಸಿ, ವಿನಾಯಕ ಪ್ರಭು ವಂದಿಸಿದರು.
